ಭಾಲ್ಕಿ: ಶಿಕ್ಷಣ ಒಂದು ಅಸ್ತ್ರ. ಈ ಹಿಂದೆ ಬಂಜಾರಾ ಸಮಾಜ ಶಿಕ್ಷಣದಿಂದ ವಂಚಿತವಾಗಿತ್ತು. ಇಂದು ಎಲ್ಲರೂ ವಿದ್ಯಾವಂತರಾಗಿ ಉತ್ತಮ ಬದುಕು ರೂಪಿಸಿಕೊಳ್ಳುತ್ತಲಿದ್ದಾರೆ ಎಂದು ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಸರ್ಕಾರಿ ಕಲ್ಯಾಣ ಮಂಟಪದಲ್ಲಿ ಸಂತ ಶ್ರೀ ಸೇವಾಲಾಲ ಮಹಾರಾಜರ 279ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ವರ್ಗದ ಜನರಿಗೂ ವಿದ್ಯಾಭ್ಯಾಸ ಅತ್ಯವಶ್ಯವಾಗಿದೆ. ವಿದ್ಯಾವಂತ ವ್ಯಕ್ತಿ ಎಲ್ಲಾ ರಂಗಗಳಲ್ಲೂ ಉನ್ನತಿ ಸಾಧಿಸಲು ಸಾಧ್ಯ. ಕಾರಣ ಎಲ್ಲಾ ವರ್ಗದವರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಬೇಕು
ಎಂದು ಹೇಳಿದರು.
ಧನ್ನೂರ ತಾಂಡಾ ಸೇವಾಲಾಲ್ ಆಶ್ರಮದ ಗೋವಿಂದ ಮಹಾರಾಜರು ಮಾತನಾಡಿ, ಸಂತಶ್ರೀ ಸೇವಾಲಾಲರು ಸಮಾಜದ ಏಳ್ಗೆಗಾಗಿ ಹಗಲಿರುಳು ದುಡಿದವರಾಗಿದ್ದಾರೆ. ಸಮಾಜದಲ್ಲಿನ ಮೌಡ್ಯ ಕೊನೆಗಾಣಿಸಲು ನಾನಾ ಮಾರ್ಗಗಳನ್ನು ಹಾಕಿಕೊಟ್ಟಿದ್ದಾರೆ ಎಂದು ಹೇಳಿದರು.
ತಾಪಂ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ ಮಾತನಾಡಿ, ಸಂತ ಶ್ರೀ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದು ಸಲಹೆ ನೀಡಿದರು. ಪುರಸಭೆ ಅಧ್ಯಕ್ಷ ವಿಶಾಲ ವಿಶ್ವಂಬರ ಪುರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ವಿಲಾಸ ಪಾಟೀಲ ದಾಡಗಿ, ಅಪಜಲಪುರ ಗೊಬ್ಬುರವಾಡಿಯ ಸೇವಾಲಾಲ್ ಬಂಜಾರಾ ಶಕ್ತಿಪೀಠದ ಬಳಿರಾಮ ಮಹಾರಾಜರು, ಕಲಖೋರಾ ತಾಂಡಾ ಪಾಜಿಲಗಿದೇವಿಯ ಅನಿಲ ಮಹಾರಾಜರು, ಎಂ.ಪಿ. ರಾಠೊಡ್, ವಿಜಯಲಕ್ಷ್ಮೀ ದೊಡ್ಡಮನಿ, ತಾನಾಜಿ ರಾಠೊಡ್, ಮಹಾನಂದ ರಾಠೊಡ್, ಶಿವಾಜಿ ಚವ್ಹಾಣ ಇದ್ದರು.