Advertisement
ಪ್ರತಿವರ್ಷ ಒಂದೊಂದು ವಿಷಯ ಆಧಾರವಾಗಿಟ್ಟು ಕೊಂಡು ಲಾಲ್‌ಬಾಗ್‌ನಲ್ಲಿ ಆಯೋಜಿಸುವ ಫಲಪುಷ್ಪ ಪ್ರದರ್ಶನ, ಈ ಬಾರಿ ವಚನ ಸಾಹಿತ್ಯದ ಮೂಲಕ ವಿಶ್ವಕ್ಕೆ ಮಾನವೀಯತೆ, ಧಾರ್ಮಿಕತೆ ಸಾರಿದ ಬಸವೇಶ್ವರರು ಹಾಗೂ 12ನೇ ಶತಮಾನದ ವಚನ ಸಾಹಿತ್ಯ ಮುಖ್ಯ ವಾಗಿರಿಸಿಕೊಂಡಿದೆ. “ವಿಶ್ವ ಗುರು ಬಸವಣ್ಣ ಮತ್ತು ವಚನ ಸಾಹಿತ್ಯ’ ಶೀರ್ಷಿಕೆಯಡಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ನಾಲ್ಕು ತಿಂಗಳುಗಳಿಂದ ಪೂರ್ವತಯಾರಿ ನಡೆಯುತ್ತಿದೆ.
Related Articles
Advertisement
ಲಾಲ್‌ಬಾಗ್ ಗಾಜಿನ ಮನೆ ಪ್ರವೇಶದಲ್ಲಿ ಬಸವಣ್ಣ ಅವರ ಪ್ರತಿಮೆ ವೀಕ್ಷಕರನ್ನು ಸ್ವಾಗತಿಸಲಿದೆ. 12ನೇ ಶತಮಾನದಲ್ಲಿ ಎಲ್ಲಾ ಧರ್ಮದ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಒಂದೆಡೆ ಸೇರುತ್ತಿದ್ದ ಸಾಮಾಜಿಕ-ಧಾರ್ಮಿಕ ಸಂಸತ್ತು ಎಂದೇ ಖ್ಯಾತಿ ಪಡೆದ “ಅನುಭವ ಮಂಟಪ’, ಬಸವೇಶ್ವರರ ಐಕ್ಯ ಸ್ಥಳವಾದ ಮಂಟಪವು ಬೃಹತ್ ಆಕಾರವಾಗಿ ವಿವಿಧ ಲಕ್ಷಾಂತರ ಹೂವುಗಳಲ್ಲಿ ಅರಳಲಿವೆ. ವಿವಿಧ ಹೂವಿನ ಲ್ಯಾಂಡ್ ಸ್ಕೇಪ್ ಜತೆಗೆ ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾದಿಗರ ಚೆನ್ನಯ್ಯ ಒಳಗೊಂಡಂತೆ 12ನೇ ಶತಮಾನದಲ್ಲಿ ನೆಲೆಸಿದ್ದ ಪ್ರಮುಖ ವಚನಕಾರರ ಮೂರ್ತಿಗಳನ್ನು ಹೂವಿನಲ್ಲಿ ಅಲಂಕರಿಸಲಾಗುತ್ತದೆ.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ:ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ :
ಬೆಂಗಳೂರು: ಪ್ರತಿ ವರ್ಷದಂತೆ ತೋಟಗಾರಿಕೆ ಇಲಾಖೆಯು ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಲಾಲ್‌ಬಾಗ್‌ನಲ್ಲಿ 215ನೇ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದ್ದು, ಈ ವೇಳೆ ನಡೆಯುವ ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನಿಸಿದೆ.
ಈ ಬಾರಿಯ ಪ್ರದರ್ಶನ “ವಿಶ್ವ ಗುರು ಬಸವಣ್ಣ ಮತ್ತು ವಚನ ಸಾಹಿತ್ಯ’ ಎಂಬ ವಿಷಯಾಧಾರಿತದಲ್ಲಿ ಜರುಗಲಿದೆ. ಇದರ ಭಾಗವಾಗಿ ನಡೆಸುವ ಇಕೆಬಾನ, ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳ ಸ್ಪರ್ಧೆಗೆ ಲಾಲ್‌ಬಾಗ್‌ನ ತೋಟಗಾರಿಕೆ ಜಂಟಿ ನಿರ್ದೇಶಕರು(ಯೋಜನೆ) ಕಚೇರಿಯಿಂದ ಅರ್ಜಿ ಪಡೆದು ಜ.1ರಿಂದ 6ರವರೆಗೆ ಅರ್ಜಿ ಸಲ್ಲಿಸಬಹುದು. ಅದೇ ರೀತಿ, ಜ.8ರಿಂದ 16ರವರೆಗೆ ವಿವಿಧ ಅಲಂಕಾರಿಕ ತೋಟಗಳ ಸ್ಪರ್ಧೆ/ಕುಂಡದಲ್ಲಿ ಬೆಳೆದ ಗಿಡಗಳ ಸ್ಪರ್ಧೆ, ಜ.15ರಿಂದ 17ರವರೆಗೆ ಗಾಜಿನ ಮನೆ ಆವರಣದಲ್ಲಿ ಪ್ರದರ್ಶಿಕೆಗಳ ಪ್ರದರ್ಶಿಸಲು, ಜ.10ರಿಂದ 19ರವರೆಗೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗೆ ಅರ್ಜಿ ಸಲ್ಲಿಸಬಹುದು. ತೋಟಗಾರಿಕೆ ಜಂಟಿ ನಿರ್ದೇಶಕರ(ತೋಟದ ಬೆಳೆಗಳು)ಕಚೇರಿಯಿಂದ ಮತ್ತು ಡಿ.28ರಿಂದ ಜ.6ರವರೆಗೆ ಇರುವ ಮಳಿಗೆಗಳ ಹಂಚಿಕೆಗೆ ತೋಟಗಾರಿಕೆ ಅಪರ ನಿರ್ದೇಶಕರು (ಹಣ್ಣುಗಳು)ಕಚೇರಿಯಿಂದ ಅರ್ಜಿ ಪಡೆದು, ಸಲ್ಲಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ (ಲಾಲ್‌ಬಾಗ್)ಉಪನಿರ್ದೇಶಕಿ ಡಾ.ಕುಸುಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಮೊ.78926555167, 9900150979 ಸಂಪರ್ಕಿಸಬಹುದು.
ವಚನ ಸಾಹಿತ್ಯ ನಿರಂತರ ಮಾಹಿತಿ ಪ್ರಸಾರಕ್ಕೆ ವ್ಯವಸ್ಥೆ :
ಗಾಜಿನ ಮನೆ ಹೊರಾಂಗಣದಲ್ಲಿ ಫ್ಲವರ್ ಫ್ಲೋ, ನವಿಲು ಆಕಾರ ಮತ್ತು ಹೃದಯಾಕಾರದಲ್ಲಿ ವಿವಿಧ ಬಣ್ಣದ ಹೂವಿನ ಕುಂಡಗಳನ್ನು ಜೋಡಿಸಲಾಗುತ್ತದೆ. ಲಾಲ್‌ಬಾಗ್‌ನ 50 ಕಡೆ ಸುಂದರ ಹೂವುಗಳ ಪ್ರದರ್ಶನಕ್ಕೆ ಸಿದ್ಧಗೊಳಿಸಲಾಗುತ್ತದೆ. ಉದ್ಯಾನದ ಕೆಲ ಭಾಗಗಳಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ. ವಚನ ಸಾಹಿತ್ಯ ಕುರಿತಂತೆ ನಿರಂತರ ಮಾಹಿತಿ ಪ್ರಸಾರಕ್ಕೆ ವ್ಯವಸ್ಥೆಗೊಳಿಸಲಾಗುತ್ತಿದೆ.
ವಿಶ್ವ ಗುರು ಬಸವಣ್ಣ, ವಚನ ಸಾಹಿತ್ಯ ಕುರಿತಂತೆ ಈ ಬಾರಿಯ ಫಲಪುಷ್ಪ ಪ್ರದರ್ಶನವಿರಲಿದೆ. 2.75 ಕೋಟಿ ರೂ.ನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜ.18ರಿಂದ 28ರವರೆಗೆ ಈ ಪ್ರದರ್ಶನ ಇರಲಿದೆ. 10 ಲಕ್ಷ ವೀಕ್ಷಕರು ಆಗಮಿಸುವ ನಿರೀಕ್ಷೆ ಇದೆ. ಇನ್ನೂ ಅನುಭವ, ಐಕ್ಯ ಮಂಟಪ ಎಷ್ಟು ವಿಸ್ತೀರ್ಣದಲ್ಲಿ ಹಾಗೂ ಎಷ್ಟು ಹೂವುಗಳಿಂದ ನಿರ್ಮಿಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.-ಡಾ.ಎಂ.ಜಗದೀಶ್, ಜಂಟಿ ನಿರ್ದೇಶಕರು, ಲಾಲ್‌ಬಾಗ್.
-ಭಾರತಿ ಸಜ್ಜನ್