Advertisement

ವಚನ ಸಾಹಿತ್ಯ ವೈಚಾರಿಕ ಕುಸುಮ: ಡಾ|ಇಂದುಮತಿ

10:27 AM Jan 22, 2018 | |

ಕಲಬುರಗಿ: ಕಾಯಕ, ದಾಸೋಹ, ವೃತ್ತಿ ಗೌರವ, ಸ್ತ್ರೀಪರ ಧೋರಣೆ, ಜಾತಿ ವಿಮೋಚನೆಯಂತಹ ಆಶಯಗಳನ್ನು ಹೊತ್ತ ವಚನ ಸಾಹಿತ್ಯ ಸ್ವತಂತ್ರವಾಗಿ ಅಚ್ಚಕನ್ನಡದಲ್ಲಿ ಅರಳಿದ ವೈಚಾರಿಕ ಕುಸುಮವಾಗಿದೆ ಎಂದು ಸಮ್ಮೇಳನದ
ಸರ್ವಾಧ್ಯಕ್ಷೆ ಡಾ| ಇಂದುಮತಿ ಪಿ.ಪಾಟೀಲ ಹೇಳಿದರು.

Advertisement

ರವಿವಾರ ನಗರದ ಶಹಾಬಜಾರದ ಸುಲಫಲ ಮಠದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ವೇದಿಕೆಯಡಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡ ನಾಲ್ಕನೇ ರಾಜ್ಯ ಮಟ್ಟದ “ವಚನ ಸಾಹಿತ್ಯ ಸಮ್ಮೇಳನ-2018’ದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾವಿಂದು ವೈಜ್ಞಾನಿಕ ಯುಗದಲ್ಲಿದ್ದರೂ ಮತ್ತೆ ಮೌಡ್ಯದ ಕಡೆಗೆ ವಾಲುತ್ತಿರುವುದನ್ನು ಕಂಡು ಮರುಕ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಾಜಿ ಕಾರ್ಮಿಕ ಸಚಿವ ಎಸ್‌.ಕೆ. ಕಾಂತಾ, ಮೂರ್ತಿಪೂಜೆಯನ್ನು ಖಂಡಿಸಿ
ಏಕದೇವೋಪಾಸನೆ ಸಾರಿದ ಶರಣರನ್ನೇ ಮೂರ್ತಿಯನ್ನಾಗಿ ಮಾಡಿ ಪೂಜಿಸುತ್ತಿರುವುದು ಶರಣರಿಗೆ ನಾವು ಮಾಡುವ ಅಪಮಾನವಾಗಿದೆ. ಶರಣ ಸಾಹಿತ್ಯವನ್ನು ಬಾಯಿಪಾಠ ಮಾಡುವುದಕ್ಕಿಂತ ಬದುಕಿನ ಪಾಠವಾಗಿ ಅರಿತು ನಡೆಯಬೇಕಾದ ಅನಿವಾರ್ಯತೆ ಇಂದಿದೆ ಎಂದು ನುಡಿದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಾರಂಗಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ವಚನದ ಕೊಡುಗೆ ಅಪಾರವಾಗಿದೆ. ರಾಜ ಮಹಾರಾಜರು ಕಟ್ಟಿದ
ಕೋಟೆ ಕೊತ್ತಲು ಹಾಳಾಗಿ ಹೋಗಿವೆ. ಆದರೆ ಇದಕ್ಕೂ ಮೊದಲಿನ ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ಇಂದಿಗೂ ಸಮಾಜದ ನಿರ್ಮಾಣದಲ್ಲಿ ತೊಡಗಿದೆ ಎಂದು ಹೇಳಿದರು. 

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಜಮಖಂಡಿಯ ಖ್ಯಾತ ಪ್ರವಚನಕಾರ ಡಾ| ಈಶ್ವರ ಮಂಟೂರ ಮಾತನಾಡಿ, ಇಡೀ ಸಮಾಜ ಅಂಧಕಾರ ಹಾಗೂ ಮೂಢನಂಬಿಕೆಯಲ್ಲಿ ಮುಳುಗಿದ್ದಾಗ ಸಮುದಾಯವನ್ನೇ ಮೂಢನಂಬಿಕೆಯ ಸಂಕೋಲೆಯಿಂದ ಜನರನ್ನು ಹೊರತರಲು ಮಹಾಮಾನವತಾಬಾದಿ ಬಸವಣ್ಣನವರು ಪ್ರಯತ್ನಿಸಿದರು ಎಂದು ಹೇಳಿದರು.
 
ಸ್ವಾಗತ ಸಮಿತಿ ಅಧ್ಯಕ್ಷ ರಾಜಕುಮಾರ ಕಪನೂರ, ಕಾರ್ಯಾಧ್ಯಕ್ಷ ಸಂತೋಷ ಬಿಲಗುಂದಿ, ಗೌರವಾಧ್ಯಕ್ಷರಾದ
ಕಲ್ಯಾಣಕುಮಾರ ಶೀಲವಂತ, ಶಿವಲೀಲಾ ಡಾ| ಸುರೇಶ ಸಜ್ಜನ ಮಾತನಾಡಿದರು. ಉದ್ಯಮಿ ಮಲ್ಲಿಕಾರ್ಜುನ ಖೇಮಜಿ “ವಚನ ಸಿರಿ’ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
 
ಅಕಾಡೆಮಿಯ ದಿನದರ್ಶಿಕೆ ಮಾಜಿ ಮೇಯರ್‌ ಸಂಜಯಸಿಂಗ್‌ ಬಿಡುಗಡೆ ಮಾಡಿದರು. ನಂತರ ನಡೆದ ಪೊರೆ ಕಳಚುವ ಪರಿಯಲ್ಲಿ ವಚನ ಸಂವಿಧಾನ ಎಂಬ ವಿಷಯದ ಕುರಿತು ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿದರು. ಎಚ್‌.ಕೆ.ಸಿ.ಸಿ.ಐ. ಅಧ್ಯಕ್ಷ ಸೋಮಶೇಖರ ಟೆಂಗಳಿ, ಅನೀಲ ಟೆಂಗಳಿ, ಹಿರಿಯ ಸಾಹಿತಿ ಚಂದ್ರಶೇಖರ ಆನೆಗುಂದಿ
ಮುಂತಾದವರಿದ್ದರು. 

Advertisement

ಗೋದುತಾಯಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ನೀಲಾಂಬಿಕಾ ಪೊಲೀಸ್‌ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುಂಚೆ ಶರಣರ ಛದ್ಮವೇಷ ಧರಿಸಿದ್ದ ಉಪಳಾಂವನ ಶ್ರೀರಾಮ ಕನ್ನಡ ಕಾನ್ವೆಂಟ್‌ ಶಾಲೆಯ ಮಕ್ಕಳು, ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮೂಲಕ ಸಮಾರಂಭದ ವೇದಿಕೆಗೆ ಕರೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next