Advertisement
ವಚನಕಾರರ ತತ್ತ್ವ ಸಂದೇಶಗಳಿಗೆ ರಂಗರೂಪ ನೀಡಲು ಎನ್‌ಎಸ್‌ಡಿ ಮುಂದಾಗಿದ್ದು, ಇದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಕೈ ಜೋಡಿಸಿದೆ. ಬಿಜ್ಜಳನ ಆಸ್ಥಾನ, ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ನೀಲಮ್ಮ, ಸಿದ್ಧರಾಮ, ಮಡಿವಾಳ ಮಾಚೀದೇವ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಇಡೀ 12ನೇ ಶತಮಾನವನ್ನೇ ರಂಗದ ಮೇಲೆ ಮೂಡಿಸಲು ಎನ್‌ಎಸ್‌ಡಿ ಕಳೆದ 4 ವರ್ಷಗಳಿಂದ ಪ್ರಯತ್ನ ಪಡುತ್ತಿದ್ದು, ಇದೀಗ ಅಂತಿಮ ರೂಪಕ್ಕೆ ಬಂದಿದೆ.
Related Articles
Advertisement
ನೂರಾರು ಕಲಾವಿದರ ಅಭಿನಯ: ಇಡೀ ನಾಟಕದಲ್ಲಿ 60- 70 ವಚನಗಳನ್ನು ಬಳಸಿಕೊಳ್ಳಲು ಚಿಂತಿಸಲಾಗಿದ್ದು, ನಾಟಕಕ್ಕೆ ಹಂಸಲೇಖ ಸಂಗೀತ ನೀಡಲಿದ್ದಾರೆ. ಒಟ್ಟು 300ಕ್ಕೂ ಹೆಚ್ಚು ವಚನಗಾರರನ್ನು ವೇದಿಕೆ ಮೇಲೆ ತರಲು ಸಾಧ್ಯವಿಲ್ಲದ್ದಿರೂ, 12ನೇ ಶತಮಾನದ ಬಹುತೇಕ ವಚನಕಾರರನ್ನು ರಂಗದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುವುದು. ಎನ್‌ಎಸ್‌ಡಿಯಲ್ಲಿ ಕಲಿಯಲು ಮುಂದಿನ ಶೈಕ್ಷಣಿಕ ವರ್ಷಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಹೊರಗಿನ ಕಲಾವಿದರು ಅಭಿನಯಿಸಲಿದ್ದಾರೆ. 100 ರಿಂದ 125 ಕಲಾವಿದರನ್ನೊಳಗೊಂಡ ದೊಡ್ಡ ನಾಟಕ ಪ್ರದರ್ಶನ ಇದಾಗಿರಲಿದೆ.
ಮತ್ತೊಮ್ಮೆ ಮಲೆಗಳಲ್ಲಿ ಮದುಮಗಳು: ವಚನ ಚಳವಳಿಯ ನಾಟಕ ಪ್ರದರ್ಶನ 1.25 ಕೋಟಿ ವೆಚ್ಚದಲ್ಲಿ ರೂಪುಗೊಳ್ಳುತ್ತಿರುವ ಯೋಜನೆ. ಇದಕ್ಕಾಗಿ ಕನ್ನಡ ಸಂಸ್ಕೃತಿ ಇಲಾಖೆ 75 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿದೆ. ಇನ್ನೂ 25 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಇಲಾಖೆಗೆ ಎನ್‌ಎಸ್‌ಡಿಯಿಂದ ಮನವಿ ಮಾಡಲಾಗಿದೆ. ಈ ಬಾರಿ ದಸರ ವೇಳೆ ವಚನ ಚಳವಳಿ ರಂಗದ ಮೇಲೆ ಮೋಡಿ ಮಾಡಲಿದೆ. ಆದರೆ, ಅದಕ್ಕೂ ಮುನ್ನ ಮಲೆಗಳಲ್ಲಿ ಮದುಮಗಳು ನಾಟಕವನ್ನು ರಂಗಪ್ರಿಯರಿಗಾಗಿ ಮತ್ತೊಮ್ಮೆ ಪ್ರದರ್ಶನ ಮಾಡಲು ಎನ್‌ಎಸ್‌ಡಿ ಚಿಂತನೆ ನಡೆಸಿದೆ.
12ನೇ ಶತಮಾನ ಇವತ್ತಿನ ಚಿಂತನೆಗಳಿಗೆ ತದ್ವಿರುದ್ಧವಾಗಿ ಇತ್ತು. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂದಿನ ಅನುಭವ ಮಂಟಪ ಮಾದರಿಯಾಗಿತ್ತು. ಕೋಮುಗಲಭೆ, ಭಾಷೆ ಗಲಭೆ ವಿಕಾರ ಸ್ವರೂಪ ಪಡೆಯುತ್ತಿರುವ ಹೊತ್ತಿನಲ್ಲಿ ವಚನ ಕಲ್ಯಾಣ ನಾಟಕ ಪ್ರಸ್ತುತವಾಗಲಿದೆ. -ಬಸವಲಿಂಗಯ್ಯ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ನಿರ್ದೇಶಕ * ಶ್ರುತಿ ಮಲೆನಾಡತಿ