Advertisement

ವಚನ ಸಾಹಿತ್ಯ ಕೊಡುಗೆ ಅಪಾರ

03:43 PM Sep 04, 2017 | |

ಹೊನ್ನಾಳಿ: ಬಸವಾದಿ ಪ್ರಥಮರು ನೀಡಿದ ವಚನ ಸಾಹಿತ್ಯ ಕನ್ನಡ ನಾಡಿಗೆ ಅದ್ಭುತ ಕೊಡುಗೆ. ವಚನಗಳು ನಮ್ಮ ಬದುಕಿಗೆ ನೀಡುವ
ಮಾರ್ಗದರ್ಶನ ಅನನ್ಯವಾದದ್ದು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ. ಹನುಮಂತಪ್ಪ ಹೇಳಿದರು.

Advertisement

ತಾಲೂಕಿನ ಕುಂದೂರು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ ವಚನ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು. ವಚನ ಸಾಹಿತ್ಯ ನಮ್ಮ ಬದುಕಿಗೆ ಶತಮಾನಗಳಿಂದಲೂ ಉತ್ತಮ ಮಾರ್ಗದರ್ಶನ ಡುತ್ತ ಬಂದಿದೆ. 12ನೇ ಶತಮಾನದಲ್ಲಿ ಶರಣರು ಅಂದಿನ ಸಂಸ್ಕೃತ ಭಾಷೆ ಸಾಮಾನ್ಯ ಜನರಿಗೆ ಅರ್ಥವಾಗದ್ದನ್ನು ಮನಗಂಡು ಕನ್ನಡ ಭಾಷೆಯಲ್ಲಿ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದರು. ಹಾಗಾಗಿ ಜನಸಮೂಹ ಈ ಸಾಹಿತ್ಯ ಪ್ರಕಾರದತ್ತ ಆಕರ್ಷಿತವಾಯಿತು
ಎಂದು ತಿಳಿಸಿದರು.

ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿ ಪದ್ಧತಿ ನಿರ್ಮೂಲನೆಗೆ ಬಹುವಾಗಿ ಶ್ರಮಿಸಿದರು. ಅಂದಿನ ನಮ್ಮ ಸಮಾಜದಲ್ಲಿ ಮಹಿಳೆಯರಿಗೆ
ಯಾವುದೇ ರೀತಿಯ ಸ್ವಾತಂತ್ರ ಇಲ್ಲದ ಸಂದರ್ಭದಲ್ಲಿ ಬಸವಣ್ಣನವರು ಮಹಿಳೆಯರನ್ನು ಗೌರವಿಸುವ ಮಹತ್ಕಾರ್ಯವನ್ನು ಪ್ರಾರಂಭಿಸಿದರು.
ಇದರಿಂದಾಗಿ ಅನೇಕ ವಚನಕಾರ್ತಿಯರು ಕನ್ನಡ ಸಾಹಿತ್ಯಕ್ಕೆ ಲಭಿಸುವಂತಾಯಿತು. ಅಕ್ಕಮಹಾದೇವಿ, ಮುಕ್ತಾಯಕ್ಕ, ಅಕ್ಕನಾಗಮ್ಮ, ಸಂಕವ್ವ, ನಾಗಲಾಂಬಿಕೆ, ಗಂಗಾಂಬಿಕೆ, ನೀಲಾಂಬಿಕೆಯವರಂಥ ಅನೇಕ ಮಹಿಳೆಯರು ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಗಹನವಾದ ಚರ್ಚೆಗಳಲ್ಲಿ ತಮ್ಮ
ವಿಚಾರಗಳನ್ನು ಮಂಡಿಸಲು ಅವಕಾಶ ದೊರೆಯಿತು ಎಂದರು.

 ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶಾರದಾ ಕಣಗೊಟಗಿ ಮಾತನಾಡಿ, ಆದರ್ಶ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ 12ನೇ ಶತಮಾನದ
ಬಸವಾದಿ ಶರಣರ ಶ್ರಮ ಅನುಪಮವಾದುದು. ಜಾತಿ ಪದ್ಧತಿಯಂಥ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆಗೊಳಿಸಲು ವಚನಗಳು ತಮ್ಮದೇ
ಆದ ಕೊಡುಗೆ ನೀಡಿವೆ. ವೈಚಾರಿಕತೆ, ಸಾಮಾಜಿಕ ಸಮಾನತೆಗಳನ್ನು ಪ್ರಚುರಪಡಿಸುವುದೇ ವಚನ ಸಾಹಿತ್ಯದ ಮೂಲ ಆಶಯವಾಗಿತ್ತು. ಶರಣ ಸಾಹಿತ್ಯ ಪರಿಷತ್ತು ಈ ಕಾಯಕವನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದರು.

ವಚನ ಸಾಹಿತ್ಯದ ವರ್ತಮಾನದ ಪ್ರಸ್ತುತತೆ ಎಂಬ ಬಗ್ಗೆ ನಿವೃತ್ತ ಉಪನ್ಯಾಸಕ ಕೆ. ಸಿದ್ಧಪ್ಪ, ವಚನ ಸಾಹಿತ್ಯದಲ್ಲಿರುವ ಸಮಾನತೆಯ
ಆಶಯಗಳು ಎಂಬ ಬಗ್ಗೆ ನಿವೃತ್ತ ಪ್ರಾಧ್ಯಾಪಕ ಯು.ಎನ್‌. ಸಂಗನಾಳಮಠ, ವಚನ ಧರ್ಮವು ವಿಶ್ವ ಧರ್ಮವಾಗುವ ಬಗೆ ಎಂಬ ವಿಷಯದ ಬಗ್ಗೆ
ಪ್ರಜಾಪಿತ ಬ್ರಹ್ಮಕುಮಾರಿ ವಿವಿಯ ಕುಂದೂರು ಘಟಕದ ಲಲಿತಕ್ಕ ಉಪನ್ಯಾಸ ನೀಡಿದರು. 

Advertisement

ಜಿಪಂ ಸದಸ್ಯೆ ದೀಪಾ ಜಗದೀಶ್‌ ಮಾತನಾಡಿದರು. ಕುಂದೂರು ಗ್ರಾಪಂ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಕತ್ತಿಗೆ
ಗಂಗಾಧರಪ್ಪ, ಶರಣ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ಪಿ.ಎಂ. ಸಿದ್ಧಯ್ಯ, ಕಾರ್ಯದರ್ಶಿ ನಾಗರಾಜ್‌ ಡೊಂಕತ್ತಿ, ವಿಶಾಲಾಕ್ಷಮ್ಮ, ಸರೋಜಮ್ಮ, ಸುನಂದಾ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next