Advertisement

ಮಕ್ಕಳ ಆರೋಗ್ಯಕ್ಕೆ ಲಸಿಕೆಯ ಚುಚ್ಚುಮದ್ದು

12:59 PM Dec 27, 2021 | Team Udayavani |

ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ‌, 15 ವರ್ಷದಿಂದ 18ರೊಳಗಿನ ಮಕ್ಕಳಿಗೂ ಲಸಿಕೆ ನೀಡುವ ತೀರ್ಮಾನ ತೆಗೆದುಕೊಂಡಿದೆ. ಹಾಗೆಯೇ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು, ಇತರೆ ರೋಗಗಳಿಂದ ನರಳುತ್ತಿರುವ 60 ವರ್ಷ ದಾಟಿದ ವೃದ್ಧರಿಗೆ ಬೂಸ್ಟರ್‌ ಡೋಸ್‌ ಕೊಡಲೂ ನಿರ್ಧರಿಸಿದೆ. ಹಾಗಾದರೆ ಮಕ್ಕಳಿಗೆ ಹೇಗೆ ಮತ್ತು ಯಾವ ಲಸಿಕೆಯನ್ನು ನೀಡಲಾಗುತ್ತದೆ? ಭಾರತದಲ್ಲಿ ಅಗತ್ಯವಿರುವಷ್ಟು ಲಸಿಕೆಯ ಲಭ್ಯತೆ ಇದೆಯೇ? ಬೂಸ್ಟರ್‌ ಡೋಸ್‌ ಅನ್ನು ಯಾವ ರೀತಿ ನೀಡಲಾಗುತ್ತದೆ ಎಂಬ ಕುರಿತ ಸೂಕ್ಷ್ಯ ನೋಟ ಇಲ್ಲಿದೆ… 

Advertisement

ಭಾರತದಲ್ಲಿ ಎರಡು ಲಸಿಕೆ ಲಭ್ಯ :

ಶನಿವಾರವಷ್ಟೇ ಭಾರತದಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ಹಾಕುವ ಸಂಬಂಧ ನಿರ್ಧರಿಸಲಾಗಿದೆ. ರಾತ್ರಿ 10ಗಂಟೆಯ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳಿಗೆ ಲಸಿಕೆ ನೀಡುವ ಕುರಿತಂತೆ ಘೋಷಣೆ ಮಾಡಿದ್ದಾರೆ. ಇದಕ್ಕೂ ಕೆಲವೇ ಗಂಟೆಗಳ ಮುನ್ನ ಡಿಸಿಜಿಐ, ಕೊವ್ಯಾಕ್ಸಿನ್‌ ಅನ್ನು ಮಕ್ಕಳಿಗೆ ನೀಡುವ ಸಂಬಂಧ ಒಪ್ಪಿಗೆ ನೀಡಿತ್ತು.  ಸದ್ಯ ಭಾರತದಲ್ಲಿ ಮಕ್ಕಳಿಗೆ ನೀಡಲು ಎರಡು ಲಸಿಕೆಗಳು ಲಭ್ಯವಿವೆ. ಮೊದಲನೆಯದು ಕ್ಯಾಡಿಲಾ ಹೆಲ್ತ್‌ಕೇರ್‌ ಅವರ ಝೈಕೋವ್‌-ಡಿ, ಎರಡನೆಯದು ಭಾರತ್‌ ಬಯೋಟೆಕ್‌ ಅವರ ಕೊವ್ಯಾಕ್ಸಿನ್‌. ಝೈಕೋವ್‌-ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು ಎಂದು ಕಂಪೆನಿಯೇ ಹೇಳಿಕೊಂಡಿದೆ. ಹಾಗೆಯೇ ಕೊವ್ಯಾಕ್ಸಿನ್‌ ಅನ್ನೂ 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು ಎಂದು ಕಂಪೆನಿ ತಿಳಿಸಿದೆ.  12 ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಈ ಬಗ್ಗೆ ಪ್ರಯೋಗ ನಡೆಸಲಾಗಿದೆ. ಹೀಗಾಗಿ, ಈ ವಯೋಮಾನಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡುವ ಅವಕಾಶವುಂಟು. ಇದಕ್ಕಿಂತ ಕೆಳಗಿನವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ.

ಇನ್ನೂ ಮೂರರ ಪ್ರಯೋಗ :

ಝೈಕೋವ್‌-ಡಿ ಮತ್ತು ಕೊವ್ಯಾಕ್ಸಿನ್‌ ಅಷ್ಟೇ ಅಲ್ಲ, ಇನ್ನೂ ಮೂರು ಲಸಿಕೆಗಳ ಪ್ರಯೋಗವೂ ನಡೆಯುತ್ತಿದೆ. ಅಂದರೆ ಸೀರಂ ಸಂಸ್ಥೆಯ ಕೊವಾವ್ಯಾಕ್ಸ್‌, ಬಯೋಲಾಜಿಕಲ್‌ ಇ ಕಂಪೆನಿಯ ಆರ್‌ಬಿಡಿ, ಜಾನ್ಸನ್‌ ಆ್ಯಂಡ್‌ ಜಾನ್ಸನ್‌ನವರ ಎಡಿ 26ಕೋವ್‌. 2ಎಸ್‌ ಲಸಿಕೆಗಳ ಟ್ರಯಲ್‌ ನಡೆಯುತ್ತಿದೆ. ಈ ಪ್ರಯೋಗ ಮುಗಿದಾಕ್ಷಣ ಇವುಗಳಿಗೂ ಡಿಸಿಜಿಐ ಒಪ್ಪಿಗೆ ನೀಡಬೇಕಾಗುತ್ತದೆ.

Advertisement

ಏಳು ರಾಜ್ಯಗಳಲ್ಲಿ ಪ್ರಯೋಗ :

ಈ ಹಿಂದೆಯೇ ಝೈಕೋವ್‌-ಡಿ ಲಸಿಕೆಗೆ ಡಿಸಿಜಿಐ ಒಪ್ಪಿಗೆ ನೀಡಿದೆ. ಇದು ಡಿಎನ್‌ಎ ಆಧರಿತ ಲಸಿಕೆಯಾಗಿದ್ದು, 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು ಎಂದಿತ್ತು. ಅಲ್ಲದೇ, ಈ ಲಸಿಕೆಯನ್ನು ಆರಂಭದಲ್ಲಿ ಏಳು ರಾಜ್ಯಗಳಲ್ಲಿ ಬಳಕೆ ಮಾಡಲು ನಿರ್ಧರಿಸಲಾಗಿದೆ. ಅಂದರೆ ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್‌, ಜಾರ್ಖಂಡ್‌, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಆರಂಭದಲ್ಲಿ ನೀಡಲಾಗುತ್ತದೆ. ಜತೆಗೆ ಕೇಂದ್ರ ಸರಕಾರ‌ ಈಗಾಗಲೇ ಒಂದು ಕೋಟಿ ಡೋಸ್‌ ಲಸಿಕೆಗಾಗಿ ಕಂಪೆನಿಗೆ ಆರ್ಡರ್‌ ಕೊಟ್ಟಿದೆ. ಪ್ರತೀ ಡೋಸ್‌ ದರ 265 ರೂ.ಗಳಾಗುತ್ತವೆ.  ಈ ಲಸಿಕೆಯನ್ನು ಮೂರು ಬಾರಿ ನೀಡಲಾಗುತ್ತದೆ. ಅಂದರೆ ಮೂರು ಡೋಸ್‌ಗಳ ಲಸಿಕೆ ಇದು. ಒಂದರಿಂದ ಮತ್ತೂಂದು ಡೋಸ್‌ ನಡುವೆ 28 ದಿನಗಳ ಅಂತರವಿರುತ್ತದೆ. ಅಂದರೆ ಮೊದಲ ಡೋಸ್‌ 0, ಎರಡನೇ ಡೋಸ್‌ 28ನೇ ದಿನ, ಮೂರನೇ ಡೋಸ್‌ 56ನೇ ದಿನ ನೀಡಲಾಗುತ್ತದೆ. ಪ್ರತಿ ಬಾರಿಯೂ ಒಂದು ಕೈಗೆ ಎರಡು ಶಾಟ್‌ ಲಸಿಕೆ ನೀಡಲಾಗುತ್ತದೆ. ಅಂದರೆ ಆರು ಚುಚ್ಚುಮದ್ದು ನೀಡಲಾಗುತ್ತದೆ.

ಕೊವಿಶೀಲ್ಡ್‌ ಅಲ್ಲ, ಕೊವೋವ್ಯಾಕ್ಸ್‌  :

ಸದ್ಯ ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊವಿಶೀಲ್ಡ್‌ ಲಸಿಕೆ ನೀಡಲಾಗಿದೆ. ಅದರಲ್ಲೂ ಕೊವ್ಯಾಕ್ಸಿನ್‌ಗಿಂತಲೂ ಕೊವಿಶೀಲ್ಡ್‌ ಲಸಿಕೆಯನ್ನೇ ಹೆಚ್ಚಾಗಿ ನೀಡಲಾಗಿದೆ. ಆದರೆ, ಕೊವ್ಯಾಕ್ಸಿನ್‌ನಂತೆ ಕೊವಿಶೀಲ್ಡ್‌ ಅನ್ನು ಮಕ್ಕಳಿಗೆ ನೀಡಲಾಗುವುದಿಲ್ಲ. ಅಂದರೆ ಭಾರತ್‌ ಬಯೋಟೆಕ್‌ ಕಂಪೆನಿಯ ಕೊವ್ಯಾಕ್ಸಿನ್‌ ಲಸಿಕೆಯನ್ನೇ ಮಕ್ಕಳಿಗೂ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಡಿಸಿಜಿಐ ಒಪ್ಪಿಗೆ ನೀಡಿದೆ. ಆದರೆ, ಕೊವಿಶೀಲ್ಡ್‌ ತಯಾರಿಕೆ ಮಾಡುತ್ತಿರುವ ಸೀರಂ ಸಂಸ್ಥೆಯವರು ಮಕ್ಕಳಿಗೆ ಬೇರೊಂದು ಲಸಿಕೆ ಅಭಿವೃದ್ಧಿಪಡಿಸುತ್ತಿದ್ದಾರೆ. ಇದರ ಹೆಸರು ಕೊವೋವ್ಯಾಕ್ಸ್‌. ಈ ಬಗ್ಗೆ ಸ್ವತಃ ಕಂಪೆನಿಯ ಸಿಇಓ ಆದಾರ್‌ ಪೂನಾವಾಲಾ ಅವರೇ ಹೇಳಿದ್ದಾರೆ. ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ನೀಡುವುಂತಾಗಬೇಕು ಎಂಬುದು ನಮ್ಮ ಗುರಿ ಎಂದು ಅವರು ತಿಳಿಸಿದ್ದಾರೆ.

ದೊಡ್ಡವರ ಮತ್ತು ಮಕ್ಕಳ ಡೋಸ್‌ಗಳ ವ್ಯತ್ಯಾಸ  :

ದೊಡ್ಡವರಿಗೆ ನೀಡುವ ಲಸಿಕೆಯಲ್ಲಿ ದೊಡ್ಡವರಿಗೆ ನೀಡುವ ಡೋಸ್‌ಗಿಂತಲೂ ಕಡಿಮೆ ಪ್ರಮಾಣದ ಡೋಸ್‌ ಇರುತ್ತದೆ. ಅಂದರೆ 5ರಿಂದ 11 ವರ್ಷದ ಮಕ್ಕಳಿಗೆ ನೀಡುವ ಲಸಿಕೆಗಿಂತಲೂ 12ರಿಂದ 15 ವರ್ಷದವರಿಗೆ ನೀಡುವ ಲಸಿಕೆ ಹೆಚ್ಚು ಸ್ಟ್ರಾಂಗ್‌ ಇರುತ್ತದೆ. ಅಲ್ಲದೇ 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡುವ ಲಸಿಕೆಯ ಡೋಸ್‌, ದೊಡ್ಡವರಿಗೆ ನೀಡುವ ಲಸಿಕೆಯಷ್ಟೇ ಸ್ಟ್ರಾಂಗ್‌ ಇರುತ್ತದೆ. ಇದನ್ನು ಪ್ರಯೋಗದ ಅವಧಿಯಲ್ಲಿಯೇ ಯಾವ ವಯೋಮಾನದ ಮಕ್ಕಳಿಗೆ ಎಷ್ಟು ಸ್ಟ್ರಾಂಗ್‌ ಡೋಸ್‌ ಇರಬೇಕು ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ. ಫೈಜರ್‌ನವರು 5ರಿಂದ 11 ವರ್ಷದವರಿಗೆ ನೀಡುವ ಲಸಿಕೆಯಲ್ಲಿ 10 ಮೈಕ್ರೋಗ್ರಾಮ್‌ ಡೋಸ್‌ ಇರುತ್ತದೆ. ಅದೇ ದೊಡ್ಡವರ ಲಸಿಕೆಯಲ್ಲಿ 30 ಮೈಕ್ರೋಗ್ರಾಮ್‌ ಡೋಸ್‌ ಬಳಕೆ ಮಾಡುತ್ತಾರೆ. ಹಾಗೆಯೇ, ಚಿಕ್ಕವರ ಇಂಜಕ್ಷನ್‌ ಸೂಜಿಯೂ ಚಿಕ್ಕದಾಗಿರುತ್ತದೆ.

ವಿದೇಶಗಳಲ್ಲಿ ಮಕ್ಕಳಿಗೆ ಲಸಿಕೆ  :

  1. ಇಟಲಿಯಲ್ಲಿ ಡಿ.1ರಿಂದಲೇ 5-11 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.
  2. ಫ್ರಾನ್ಸ್‌ನಲ್ಲಿ 5-11 ವರ್ಷದ ಮಕ್ಕಳಿಗೆ ನೀಡಲು ಒಪ್ಪಿಗೆ ಸಿಕ್ಕಿದೆ.
  3. ಅಮೆರಿಕದಲ್ಲಿ 5-11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ನ.2ರಂದು ಒಪ್ಪಿಗೆ ನೀಡಲಾಗಿದೆ.
  4. ಕೆನಡಾದಲ್ಲಿ ನ.19ರಿಂದ 5-11 ವರ್ಷದ ಮಕ್ಕಳಿಗೆ ಫೈಜರ್‌ ಲಸಿಕೆ
  5. ಹಂಗೇರಿಯಲ್ಲಿ 16-18 ವರ್ಷದೊಳಗಿನ ಮಕ್ಕಳಿಗೆ ಮೇ ಮಧ್ಯಂತರದಿಂದಲೇ ನೀಡಲಾಗುತ್ತಿದೆ.
  6. ಬ್ರಿಟನ್‌ನಲ್ಲಿ 12-15 ವರ್ಷದ ಮಕ್ಕಳಿಗೆ ಎರಡನೇ ಡೋಸ್‌ ನೀಡಲು ನಿರ್ಧರಿಸಲಾಗಿದೆ.
  7. ಈಸ್ಟೋನಿಯಾ, ಡೆನ್ಮಾರ್ಕ್‌, ಗ್ರೀಸ್‌, ಐರ್ಲೆಂಡ್‌, ಲಿಥ್ಯೂನಿಯೋ, ಸ್ಪೇನ್‌, ಸ್ವೀಡನ್‌, ಫಿನ್‌ಲೆಂಡ್‌ನ‌ಲ್ಲಿ 12 ವರ್ಷ ಮೇಲ್ವಟ್ಟವರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ.
  8. ಡೆನ್ಮಾರ್ಕ್‌ನಲ್ಲಿ ಈಗಾಗಲೇ ಶೇ.63ರಷ್ಟು 12-17 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗಿದೆ.
  9. ಸ್ವಿರ್ಜರ್ಲೆಂಡ್‌ನಲ್ಲಿ 12-15 ವರ್ಷದ ಮಕ್ಕಳಿಗೆ ಜೂನ್‌ನಲ್ಲಿ ಫೈಜರ್‌ ಲಸಿಕೆ ಮತ್ತು ಆಗಸ್ಟ್‌ನಲ್ಲಿ ಮಾಡೆರ್ನಾ ನೀಡಲು ನಿರ್ಧರಿಸಲಾಗಿದೆ.
  10. ಬಹ್ರೇನ್‌ನಲ್ಲಿ ಸಿನೋಫಾರ್ಮ ಲಸಿಕೆಯನ್ನು 3-11 ವರ್ಷದ ಮಕ್ಕಳಿಗೆ ನೀಡಲಾಗುತ್ತಿದೆ.
  11. ಇಸ್ರೇಲ್‌, ಒಮನ್‌, ಸೌದಿ ಅರೆಬಿಯದಲ್ಲಿ ಐದು ವರ್ಷಕ್ಕಿಂತ ಹೆಚ್ಚಿನ ಮಕ್ಕಳಿಗೆ ಫೈಜರ್‌ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.
  12. ಜೋರ್ಡಾನ್‌, ಮೊರ್ಯಾಕ್ಕೋ, ಗ್ಯೂನಿಯಾ, ನಮೀಬಿಯಾ, ದಕ್ಷಿಣ ಆಫ್ರಿಕಾದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ
  13. ಜಿಂಬಾಬ್ವೆಯಲ್ಲಿ 14 ವರ್ಷ ಮೇಲ್ಪಟ್ಟವರಿಗೆ, ಈಜಿಪ್ಟ್ ನಲ್ಲಿ 15-18 ವರ್ಷದವರಿಗೆ ಲಸಿಕೆ ನೀಡಲಾಗುತ್ತಿದೆ.
  14. ಚೀನಾದಲ್ಲಿ ಎರಡು ಸಿಂನೋಫಾರ್ಮ ಮತ್ತು ಒಂದು ಸಿನೋವಾಕ್‌ ಲಸಿಕೆಯನ್ನು 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುತ್ತಿದೆ.
  15. ಹಾಂಗ್‌ಕಾಂಗ್‌ನಲ್ಲಿ ಮೂರು ವರ್ಷ ಮೇಲ್ಪಟ್ಟವರು, ದಕ್ಷಿಣ ಕೊರಿಯಾ, ಆಸ್ಟ್ರೇಲಿಯ, ಫಿಲಿಪ್ಪಿನ್ಸ್‌ನಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ
  16. ವಿಯೆಟ್ನಾಮ್‌ನಲ್ಲಿ 16-17 ವರ್ಷ, ಕ್ಯೂಬಾದಲ್ಲಿ 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ
  17. ಅರ್ಜೆಂಟೀನಾ, ಕೊಸ್ಟಾರಿಕಾ, ಬ್ರೆಜಿಲ್‌, ಕೊಲಂಬಿಯಾದಲ್ಲೂ ಮಕ್ಕಳಿಗೆ ಲಸಿಕೆ ನೀಡಲು ಒಪ್ಪಿಗೆ ನೀಡಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next