ಸೊರಬ: ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ಕೊರೊನಾ ಲಸಿಕೆಯ ಅಡ್ಡ ಪರಿಣಾಮದಿಂದ ಅಸ್ವಸ್ಥಗೊಂಡಿರುವ ಬಾಲಕರ ನಿವಾಸಕ್ಕೆ ಸಮಾಜ ಸೇವಕ ಪ್ರಸನ್ನಕುಮಾರ್ ಎಂ. ಸಮನವಳ್ಳಿ ಮಂಗಳವಾರ ಭೇಟಿ, ಬಾಲಕರ ಯೋಗಕ್ಷೇಮ ವಿಚಾರಿಸಿದರು.
ಆನವಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮಧು ಚಂದ್ರ ಹಾಗೂ ಸಾಗರದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮನುಚಂದ್ರನಿಗೆ ಕಳೆದ ಜನವರಿ ತಿಂಗಳಿನಲ್ಲಿ ಕೊರೊನಾ ಲಸಿಕೆ ನೀಡಲಾಗಿತ್ತು. ಲಸಿಕೆ ಪಡೆದ ಬಳಿಕ ಅಡ್ಡ ಪರಿಣಾಮದಿಂದ ಬಾಲಕರ ಅಂಗಾಗಗಳು ಸ್ವಾಧೀನ ಕಳೆದುಕೊಂಡಿವೆ. ಬೆಂಗಳೂರು ಸೇರಿದಂತೆ ಹಲವಡೆ ಚಿಕಿತ್ಸೆ ಸಹ ಕೊಡಿಸಲಾಗಿದೆ. ಈ ಬಗ್ಗೆ ಹಲವಾರು ಸಚಿವರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳು ಹಾಸಿಗೆಯಲ್ಲಿಯೇ ಜೀವನ ಸಾಗಿಸುವಂತಾಗಿದೆ ಎಂದು ಬಾಲಕರ ತಂದೆ ಚಂದ್ರಾನಾಯ್ಕ ತಮ್ಮ ಅಳಲನ್ನು ತೋಡಿಕೊಂಡರು.
ಸಮಾಜ ಸೇವಕ ಪ್ರಸನ್ನಕುಮಾರ್ ಎಂ. ಸಮನವಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿ, ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಬಾಲಕರ ಬದುಕಿನಲ್ಲಿ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮವಾಗಿದೆ ಎನ್ನಲಾಗುತ್ತಿದೆ. ಕೂಲಿ ಮಾಡಿ ಬದುಕುವ ಕುಟುಂಬ ಇದೀಗ ಸಂಕಷ್ಟದಲ್ಲಿರುವುದನ್ನು ಅರಿತು ಕೈಲಾದ ಸಹಾಯ ಮಾಡುತ್ತಿದ್ದೇನೆ.
ಶ್ರೀ ರೇಣುಕಾಂಬಾ ವೆಂಚರ್ ಪ್ರೈ. ಲಿಮಿಟೆಡ್ ವತಿಯಿಂದ ಮಾಸಿಕವಾಗಿ ಕುಟುಂಬಕ್ಕೆ ಐದು ಸಾವಿರ ರೂ., ಸಹಾಯಧನ ನೀಡಲು ಸಂಸ್ಥೆಯ ಮಾಲಿಕರಾದ ರತ್ನಾ ಪ್ರಸನ್ನಕುಮಾರ್ ಅವರು ಸಮ್ಮತಿ ನೀಡಿದ್ದಾರೆ.
Related Articles
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೈಲಾದ ಸಹಕಾರವನ್ನು ನೀಡಲಾಗುವುದು. ಕೊರೊನಾ ಲಸಿಕೆಯು ದೇಹದಲ್ಲಿ ಶಕ್ತಿ ಕಳೆದುಕೊಂಡ ತರುವಾಯ ಮಕ್ಕಳು ಸಹಜ ಸ್ಥಿತಿಗೆ ಮರಳುವರು ಎಂದು ಕೇಳಿದ್ದೇನೆ. ಶೀಘ್ರದಲ್ಲೇ ಮಕ್ಕಳು ಗುಣಮುಖರಾಗಲಿ ಎಂದು ಆಶಿಸಿದರು.
ಮುಖಂಡರಾದ ಖಲಂದರ್ ಸಾಬ್ ಆನವಟ್ಟಿ, ಚಂದ್ರಪ್ಪ ಸಮನವಳ್ಳಿ, ಮಧು, ಆರ್. ಭೀಮೇಶ್, ಶ್ರೀನಿವಾಸ್ ಎಣ್ಣೆಕೊಪ್ಪ, ಕುಮಾರ ನಾಯ್ಕ, ಮಂಜಪ್ಪ, ಆಂಜನೇಯ, ಕುಮಾರ ನಾಯ್ಕ, ಪುಟ್ಟಾನಾಯ್ಕ, ಲಕ್ಷಣ ನಾಯ್ಕ, ಮೈಲಾರ ನಾಯ್ಕ, ಸುರೇಶ್ ನಾಯ್ಕ, ಮಂಜಪ್ಪ ಇತರರಿದ್ದರು.