ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೊರೊನಾ ದೈನಂದಿನ ಪ್ರಕರಣ ಏರುಗತಿಯಲ್ಲಿ ಸಾಗುತ್ತಿದ್ದು, ಈ ಆತಂಕದ ಜತೆಗೆ ಜಿಲ್ಲೆಗೆ ಕೋವಿಡ್ ರೋಗ ನಿರೋಧಕ ಲಸಿಕೆ ಸರಬರಾಜಿನಲ್ಲಿ ಕೊರತೆ ಎದುರಾಗಿದೆ. ಕೆಲವು ತಿಂಗಳುಗಳಿಗೆ ಹೋಲಿಸಿದರೆ ಈಗ ಬರುತ್ತಿರುವ ಲಸಿಕೆ ಪ್ರಮಾಣದಲ್ಲಿ ಶೇ. 40ರಷ್ಟು ಕಡಿಮೆಯಾಗಿದೆ.
ಜುಲೈ ತಿಂಗಳಿನಲ್ಲಿ ದ.ಕ. ಜಿಲ್ಲೆಗೆ 2,21,400 ಡೋಸ್ ಕೊವಿಶೀಲ್ಡ್ ಮತ್ತು 15,600 ಕೊವ್ಯಾಕ್ಸಿನ್ ಲಸಿಕೆ ಬಂದಿದೆ. ಆದರೆ ವಾರಕ್ಕೇ ಸುಮಾರು ಲಕ್ಷಕ್ಕೂ ಹೆಚ್ಚಿನ ಲಸಿಕೆ ಬೇಡಿಕೆ ಇದ್ದು, ಬೇಡಿಕೆಯಂತೆ ಜಿಲ್ಲೆಯಾದ್ಯಂತ ಲಸಿಕೆ ಸಿಗುತ್ತಿಲ್ಲ. ಆರೋಗ್ಯ ಇಲಾಖೆಯ ಜು. 29ರ ಅಂಕಿ-ಅಂಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24,700 ಮಂದಿ ಕೊವಿಶೀಲ್ಡ್ ಮತ್ತು 12,321 ಮಂದಿ ಕೊವ್ಯಾಕ್ಸಿನ್ ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಅದರಲ್ಲಿ ಬಂಟ್ವಾಳ ತಾಲೂಕಿನಲ್ಲಿ 4,183 ಮಂದಿ ಕೊವಿಶೀಲ್ಡ್, 2437 ಮಂದಿ ಕೊವ್ಯಾಕ್ಸಿನ್, ಬೆಳ್ತಂಗಡಿ ತಾಲೂಕಿನ 2,697 ಕೊವಿಶೀಲ್ಡ್, 1,537 ಮಂದಿ ಕೊವ್ಯಾಕ್ಸಿನ್, ಮಂಗಳೂರಿನ 12,406 ಮಂದಿ ಕೊವಿಶೀಲ್ಡ್ ಮತ್ತು 5,675 ಮಂದಿ ಕೊವ್ಯಾಕ್ಸಿನ್, ಪುತ್ತೂರು ತಾಲೂಕಿನ 3,763 ಮಂದಿ ಕೊವಿಶೀಲ್ಡ್, 1,824 ಮಂದಿ ಕೊವ್ಯಾಕ್ಸಿನ್, ಸುಳ್ಯ ತಾಲೂಕಿನ 1,691 ಮಂದಿ ಕೊವಿಶೀಲ್ಡ್, 812 ಮಂದಿ ಕೊವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು ಬಾಕಿಯಿದ್ದಾರೆ.
ಲಸಿಕೆ ಸರಬರಾಜಿನಲ್ಲಿ ವ್ಯತ್ಯಯ:
ಜಿಲ್ಲೆಗೆ ಜೂನ್ ತಿಂಗಳವರೆಗೆ ಲಸಿಕೆ ಪೂರೈಕೆ ಉತ್ತಮವಾಗಿತ್ತು. ಜುಲೈಯಿಂದ ಲಸಿಕೆ ಸರಬರಾಜಿನಲ್ಲಿ ವ್ಯತ್ಯಯ ಕಂಡಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನ ಆರಂಭಗೊಂಡ ಬಳಿಕ ಜಿಲ್ಲೆಗೆ ಬರುವ ಹೆಚ್ಚಿನ ಲಸಿಕೆ ಅವರಿಗೇ ವಿನಿಯೋಗಿಸಲಾಗುತ್ತಿದೆ. ಇದರಿಂದಾಗಿ ಸಾಮಾನ್ಯರಿಗೆ ಲಸಿಕೆ ಸಿಗುವುದಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೂ ಮೊದಲನೇ ಡೋಸ್ ಲಸಿಕೆ ಸಿಗುತ್ತಿಲ್ಲ. 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನವರಿಗೆ ಅಭಿಯಾನ ನಡೆಯುತ್ತಿದ್ದು, ಹೆಚ್ಚಿನ ಮಂದಿ ಲಸಿಕೆಗಾಗಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಜಿಲ್ಲೆಗೆ ಇದೀಗ ಲಸಿಕೆ ಬಂದಿದ್ದು, ಆ.2 ರಂದು 40,000 ಮಂದಿಗೆ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ ನೀಡಲಾಗುತ್ತದೆ. ಬಳಿಕ ಜಿಲ್ಲೆಗೆ ಮತ್ತೇ ಲಸಿಕೆ ಯಾವಾಗ ರವಾನೆಯಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗಿನ ದೈನಂದಿನ ಪ್ರಕರಣ ಒಂದು ಲಕ್ಷದ ಗುರಿ ಮುಟ್ಟಿದೆ. ಹೀಗಿದ್ದಾಗ ಸಾಮಾನ್ಯವಾಗಿ ಲಸಿಕೆಗೆ ಬೇಡಿಕೆ ಹೆಚ್ಚುತ್ತಿದೆ. ಜೂನ್ ತಿಂಗಳು ಜಿಲ್ಲೆಗೆ ಸುಮಾರು 3 ಲಕ್ಷಕ್ಕೂ ಹೆಚ್ಚಿನ ಡೋಸ್ ಲಸಿಕೆ ಬಂದಿತ್ತು. ಆದರೆ ಜುಲೈನಲ್ಲಿ ಕೇವಲ 2.21 ಲಕ್ಷ ಡೋಸ್ ಲಸಿಕೆ ಬಂದಿದೆ. ಕೆಲವು ತಿಂಗಳ ಹಿಂದೆ ವಾರದಲ್ಲಿ ಸುಮಾರು 1.5 ಲಕ್ಷದಷ್ಟು ಲಸಿಕೆ ಬರುತ್ತಿತ್ತು. ಇದೀಗ ತಿಂಗಳಲ್ಲಿ ಬರುತ್ತಿದೆ.
ಕೆಲವು ತಿಂಗಳುಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಲಸಿಕೆ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಗಡಿ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಲಸಿಕೆ ಸರಬರಾಜು ಮಾಡುವುದಾಗಿ ಜು. 31ರಂದು ಮುಖ್ಯಮಂತ್ರಿಗಳು ವೀಡಿಯೋ ಕಾನ್ಫೆರೆನ್ಸ್ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ನಾಲ್ಕು ದಿನಗಳಿಂದ ಜಿಲ್ಲೆಗೆ ಲಸಿಕೆ ಸರಬರಾಜು ಆಗದ ಕಾರಣ ಮುಂದಿನ ದಿನಗಳಲ್ಲಿ ಹೆಚ್ಚಿನ ಡೋಸ್ ಲಸಿಕೆ ಬರುವ ಸಾಧ್ಯತೆ ಇದೆ.
-ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ