Advertisement

ಮಕ್ಕಳಿಗೆ ರೋಟಾ ವೈರಸ್‌ ಲಸಿಕೆ ಹಾಕಿಸಿ

12:05 PM Sep 06, 2019 | Suhan S |

ಕೊಪ್ಪಳ: ರೋಟಾ ವೈರಸ್‌ ಲಸಿಕೆ ಬಗ್ಗೆ ಎಲ್ಲಾ ತಾಯಂದಿರಿಗೆ ಅರಿವು ಮೂಡಿಸಿ, ಜಿಲ್ಲೆಯ ಅರ್ಹ ಮಕ್ಕಳು ಈ ಲಿಸಿಕೆಯಿಂದ ವಂಚಿತರಾಗದಿರಲಿ ಎಂದು ಜಿಪಂ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ ಅವರು ವೈದ್ಯಾಧಿಕಾರಿಗಳಿಗೆ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ ಆಶ್ರಯದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಜಿಲ್ಲಾಮಟ್ಟದ ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೋಟಾ ವೈರಸ್‌ ದೇಶದ ಹಲವು ರಾಜ್ಯಗಳಲ್ಲಿತ್ತು. ಇದನ್ನು ತಡೆಗಟ್ಟಲು ಲಸಿಕಾ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ರಾಜ್ಯ ಹಾಗೂ ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ರೋಟಾ ವೈರಸ್‌ ಲಸಿಕೆಯಿಂದ ಮಕ್ಕಳಲ್ಲಿ ಉಂಟಾಗುವ ಅತಿಸಾರ ಭೇದಿ ಹಾಗೂ ಅಪೌಷ್ಟಿಕತೆ ತಡೆಗಟ್ಟಬಹುದು. ರೋಟಾ ವೈರಸ್‌ ಲಸಿಕೆಯು ನಿರ್ದಿಷ್ಟ ಬೆಲೆಯದ್ದಾಗಿದ್ದು, ಈ ಲಸಿಕೆಯನ್ನು ಮಕ್ಕಳಿಗೆ ಹಾಕಿಸಲು ಕೆಲ ತಾಯಂದಿರಿಗೆ ಕಷ್ಟಕರವಾಗಿತ್ತು. ಆದ್ದರಿಂದ ಸರ್ಕಾರವು ಉಚಿತ ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಈ ಕಾರ್ಯಕ್ರಮ ಯಶಸ್ವಿಗೆ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಶ್ರಮಿಸಬೇಕು. ಅಲ್ಲದೇ ಮಗುವಿಗೆ ತಾಯಿಯ ಎದೆ ಹಾಲು ಅಮೃತವಿದ್ದಂತೆ. ಮಗುವಿಗೆ ನಿರ್ದಿಷ್ಟಾವಧಿವರೆಗೆ ಕಡ್ಡಾಯವಾಗಿ ತಾಯಿಯ ಎದೆ ಹಾಲನ್ನೇ ನೀಡಬೇಕು ಎಂಬುವುದರ ಬಗ್ಗೆ ಎಲ್ಲ ತಾಯಂದಿರಿಗೆ ಅರಿವು ಮೂಡಿಸಿ ಎಂದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಸರ್ಕಾರವು ರೋಟಾ ವೈರಸ್‌ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದು, ಉತ್ತಮ ಕಾರ್ಯಕ್ರಮ ಇದಾಗಿದೆ. ಆರೋಗ್ಯ ಇಲಾಖೆ ಈಗಾಗಲೇ ಪೋಲಿಯೋ ಸೇರಿದಂತೆ ಸುಮಾರು ಒಂಬತ್ತು ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಲಸಿಕೆಯನ್ನು ಹಾಕಿಸಲು ತಾಯಂದಿರು 2ರಿಂದ 2.5 ಸಾವಿರ ರೂ. ನೀಡಬೇಕಾಗಿತ್ತು. ಅದರೆ ಈಗ ಸರ್ಕಾರವು ಉಚಿತವಾಗಿ ರೋಟಾ ವೈರಸ್‌ ಲಸಿಕೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಮಕ್ಕಳಿಕೆ ರೋಟಾ ವೈರಸ್‌ ಲಸಿಕೆ ತಲುಪುವಂತಾಗಬೇಕು. ಈ ಲಸಿಕಾ ಕಾರ್ಯವು ಶೇ. 100 ರಷ್ಟು ಯಶಸ್ಸು ಸಾಧಿಸಬೇಕು. ಯಾವ ಅರ್ಹ ಮಗು ಕೂಡ ಈ ಲಸಿಕೆಯಿಂದ ವಂಚಿತವಾಗಬಾರದು. ಆರೋಗ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ರಂಗದಲ್ಲಿ ಕೊಪ್ಪಳ ಜಿಲ್ಲೆಯು ಬೆಳೆಯುತ್ತಿದೆ. 450 ಹಾಸಿಗೆಯುಳ್ಳ ಜಿಲ್ಲಾಸ್ಪತ್ರೆಯನ್ನು ಹೆಚ್ಚುವರಿಯಾಗಿ ಒಂದು ಸಾವಿರ ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಆರ್‌.ಸಿ.ಎಚ್. ಅಧಿಕಾರಿ ಡಾ| ಲಿಂಗರಾಜ್‌ ಮಾತನಾಡಿ, ರೋಟಾ ವೈರಸ್‌ ಲಸಿಕೆ ನವಜಾತ ಮಕ್ಕಳ ಆರೋಗ್ಯ ರಕ್ಷಣೆ ಮಾಡುವಂತಹ ಲಸಿಕೆಯಾಗಿದೆ. ಈ ಲಸಿಕೆಯನ್ನು 6, 10 ಮತ್ತು 14ನೇ ವಾರದ ವಯೋಮಾನದಲ್ಲಿ ಮೂರು ಬಾರಿಗೆ ಮಗುವಿಗೆ ಹಾಕಲಾಗುತ್ತದೆ. ಇದರಿಂದ ಮಗುವಿನ ಬೆಳವಣಿಗೆಯಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದಾಗಿದೆ. ಅತಿಸಾರ ಭೇದಿಯಿಂದಾಗಿ ಅಧಿಕ ಪ್ರಮಾಣದಲ್ಲಿ ಮಕ್ಕಳು ಮೃತಪಡುತ್ತಿದ್ದವು. ಈ ಕಾರಣದಿಂದಾಗಿ ರೋಟಾ ವೈರಸ್‌ನಿಂದಾಗುವ ಅತಿಸಾರ ಭೇದಿಯ ವಿರುದ್ಧ ಮಕ್ಕಳ ರಕ್ಷಣೆ ಮಾಡುವ ಸಲುವಾಗಿ ಭಾರತ ಸರ್ಕಾರವು ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಪಂ ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಗೌಡ ಚಂಡೂರ, ಜಿಪಂ ಸಿಇಒ ರಘುನಂದನ್‌ ಮೂರ್ತಿ, ಡಾ| ಕೆ.ಜಿ ಕುಲಕರ್ಣಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎಸ್‌.ಬಿ. ದಾನರೆಡ್ಡಿ ಸೇರಿದಂತೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮತ್ತು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next