ನವದೆಹಲಿ: ಕೋವಿಡ್ ಲಸಿಕೆ ಪಡೆಯಲು ಮುಂಚಿತವಾಗಿ ಆನ್‌ಲೈನ್ ನೋಂದಣಿ ಹಾಗೂ ಕಾಯ್ದಿರಿಸುವಿಕೆ ಇನ್ನು ಮುಂದೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಗ್ರಾಮೀಣ ಭಾಗದ ಜನತೆ ಲಸಿಕೆ ಪಡೆಯಲು ತೊಂದರೆ ಪಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 18 ವರ್ಷ ಮೇಲ್ಪಟ್ಟವರು ಆಯಾ ಲಸಿಕೆ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ ಲಸಿಕೆ ಪಡೆಯಬಹುದು ಎಂದಿದೆ.
ಈವರೆಗೆ ಲಸಿಕೆ ಪಡೆಯಲು ಕೋವಿನ್ ಆ್ಯಪ್‌ನಲ್ಲಿ ನೋಂದಣಿ ಮಾಡಬೇಕಿತ್ತು. ದಿನಾಂಕ ಗೊತ್ತುಪಡಿಸಿದ ಬಳಿಕ, ಆಯಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬೇಕಿತ್ತು.
ಇದನ್ನೂ ಓದಿ:ವಿದೇಶಕ್ಕೆ ತೆರಳುವವರಿಗೆ ಈ ದಾಖಲೆಗಳನ್ನು ನೀಡಿದರೆ 28 ದಿನಕ್ಕೆ 2ನೇ ಡೋಸ್ ಲಸಿಕೆ
150ರೂ.ಗೆ ಕೊಟ್ಟರೆ ನಷ್ಟ: ಕೇಂದ್ರ ಸರ್ಕಾರಕ್ಕೆ ನಾವು ಡೋಸ್‌ಗೆ 150 ರೂ.ಗಳಂತೆ ಕೊವ್ಯಾಕ್ಸಿನ್ ಲಸಿಕೆ ಮಾರಾಟ ಮಾಡುತ್ತಾ ಹೋದರೆ ದೀರ್ಘಕಾಲದಲ್ಲಿ ನಾವು ಬಹಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ. ಜತೆಗೆ, ಈಗ ನಾವು ಖಾಸಗಿ ಮಾರುಕಟ್ಟೆಗೆ ಹೆಚ್ಚಿನ ದರದಲ್ಲೇ ಲಸಿಕೆ ಮಾರಬೇಕಾಗುತ್ತದೆ ಎಂದೂಹೇಳಿದೆ. ಪ್ರಸ್ತುತ ಕಂಪನಿಯು ಕೊವ್ಯಾಕ್ಸಿನ್ ಲಸಿಕೆಯನ್ನು ಕೇಂದ್ರ ಸರ್ಕಾ ರಕ್ಕೆ 150 ರೂ., ರಾಜ್ಯಗಳಿಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗಳಂತೆ ಮಾರಾಟ ಮಾಡುತ್ತಿದೆ.
ಆಸ್ಟ್ರಾಜೆನೆಕಾಗೆ ಹಿನ್ನಡೆ: ಪ್ರತಿಕಾಯ ಗಳ ಕಾಕ್‌ಟೇಲ್ ಮೂಲಕ ಕೊರೊನಾಕ್ಕೆ ಪರಿಣಾಮಕಾರಿ ಔಷಧವನ್ನು ಕಂಡು ಹಿಡಿಯಲು ಹೊರಟಿದ್ದ ಆಸ್ಟ್ರಾಜೆನೆಕಾ ಕಂಪನಿಗೆ ಹಿನ್ನಡೆಯಾಗಿದೆ. ಪ್ರತಿಕಾಯಗಳ ಕಾಕ್‌ಟೇಲ್‌ನ ಕ್ಲಿನಿಕಲ್ ಪ್ರಯೋಗದಲ್ಲಿ ಈ ಮಾದರಿ ಔಷಧಿಯು ಕೊರೊನಾ ರೋಗಿಗಳ ಮೇಲೆ ಕೇವಲ ಶೇ. 33ರಷ್ಟು ಮಾತ್ರ ಪರಿಣಾಮ ಬೀರಬಲ್ಲದು ಎಂಬ ಅಂಶ ದೃಢಪಟ್ಟಿದೆ. ಅಮೆರಿಕ, ಯು.ಕೆ.ನಲ್ಲಿ ಒಟ್ಟು 1,121 ಸ್ವಯಂ ಸೇವಕರಿಗೆ ಈ ಔಷಧಿಯನ್ನು ನೀಡಲಾಗಿತ್ತು.