Advertisement

ಕೊರೊನಾ ಲಸಿಕೆ ಪಡೆಯಲು ಭಯ ಬೇಡ

08:16 PM Jun 29, 2021 | Team Udayavani |

ಬೆಳಗಾವಿ: ಕೋವಿಡ್‌ ಲಸಿಕೆಯನ್ನು ಪಡೆದ ವಿದ್ಯಾರ್ಥಿಗಳಿಗೆ ಜು.15ರ ನಂತರ ಎಲ್ಲಾ ಪದವಿ ಕೋರ್ಸ್‌ಗಳ ತರಗತಿಗಳನ್ನು ನಡೆಸಲಾಗುವುದು. ಲಸಿಕೆ ಪ್ರಕ್ರಿಯೆ ಮುಗಿದ ನಂತರ ಪರೀಕ್ಷೆಗಳನ್ನು ಸಹ ನಡೆಸಲಾಗುವದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಂ. ರಾಮಚಂದ್ರ ಗೌಡ ಹೇಳಿದರು.

Advertisement

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಸೋಮವಾರ ಕೋವಿಡ್‌ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ನೀಡಬೇಕು ಎಂದು ಆಯಾ ಕಾಲೇಜು ಪ್ರಾಚಾರ್ಯರಿಗೆ ಸೂಚನೆ ನೀಡಲಾಗಿದೆ. ಅದರಂತೆ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಲ್ಲಿ ಪ್ರಥಮವಾಗಿ ಲಸಿಕೆಯ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳು ತಮ್ಮ ಮನೆಯ ಅಕ್ಕ-ಪಕ್ಕದವರಿಗೆ ಲಸಿಕೆಯ ಬಗ್ಗೆ ತಿಳಿವಳಿಕೆ ನೀಡಿ ಅವರೂ ಸಹ ಲಸಿಕೆ ಪಡೆದುಕೊಳ್ಳುವಂತೆ ಮಾಡುವದು ಮುಖ್ಯವಾಗಿದೆ. ಇದು ನಿಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ. ಲಸಿಕೆಯಿಂದ ಮಾತ್ರ ಸಮಾಜವನ್ನು ಉಳಿಸಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎಂ. ಜಯಪ್ಪ ಮಾತನಾಡಿ, ಸರ್ಕಾರದ ಆದೇಶದಂತೆ ನಾವು ಮೊದಲ ಹಂತದಲ್ಲಿ 215 ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ನೀಡಿದ್ದೇವೆ. ಮಹಾವಿದ್ಯಾಲಯದ ಒಟ್ಟು 1450 ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಕೋವಿಡ್‌ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ವಾಣಿಜ್ಯ ಪ್ರಾಧ್ಯಾಪಕರ ಸಂಘದ ರಾಜ್ಯ ಅಧ್ಯಕ್ಷರಾದ ಪ್ರೊ. ಸಿ.ಆರ್‌ ಗುಡಸಿ, ರಾಣಿ ಚನ್ನಮ್ಮ ವಿಶ್ವವಿದ್ಯಾಯಲದ ವೈದ್ಯಾಧಿಕಾರಿ ಡಾ| ಯಶೋಧಾ ಪೋತದಾರ, ವೈದ್ಯಾಧಿಕಾರಿ ಡಾ| ಜಯಾನಂದ ಡಿ., ಉಪಸ್ಥಿತರಿದ್ದರು. ಉಪಪ್ರಾಚಾರ್ಯ ಅನಿಲ ರಾಮದುರ್ಗ ಸ್ವಾಗತಿಸಿದರು. ಡಾ ಮಲ್ಲೇಶ ದೊಡ್ಡಲಕ್ಕಣ್ಣವರ ವಂದಿಸಿದರು. ಡಾ ಜ್ಯೋತಿ ಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next