Advertisement

ಇನ್ನು ಗರ್ಭಿಣಿಯರಿಗೂ ಲಸಿಕೆ : ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

06:44 AM Jun 30, 2021 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಇನ್ನು ಮುಂದೆ ಗರ್ಭಿಣಿಯರಿಗೂ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ. ಈ ಕುರಿತು ಕೇಂದ್ರ ಸರಕಾರ ಮಂಗಳವಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, “ಗರ್ಭ ಧರಿಸುವಿಕೆಯು ಕೊರೊನಾ ರಿಸ್ಕ್ ಅನ್ನು ಹೆಚ್ಚಿಸುವುದಿಲ್ಲ’ ಎಂಬುದನ್ನು ಸ್ಪಷ್ಟಪಡಿಸಿದೆ.

Advertisement

ಬಹುತೇಕ ಗರ್ಭಿಣಿಯರಿಗೆ ಸೋಂಕಿಗೊಳಗಾದರೂ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಅವರ ಆರೋಗ್ಯ ಬೇಗನೆ ಹದಗೆಡಬಹುದು. ಹೀಗಾಗಿ ತಮ್ಮನ್ನು ಹಾಗೂ ತಮ್ಮ ಹೊಟ್ಟೆಯಲ್ಲಿರುವ ಮಗುವನ್ನು ರಕ್ಷಿಸಿಕೊಳ್ಳಬೇಕೆಂದರೆ ಅವರು ಲಸಿಕೆ ಪಡೆಯುವುದು ಮುಖ್ಯ ಎಂದು ಸರಕಾರ ತಿಳಿಸಿದೆ.

ಮಾರ್ಗಸೂಚಿಯಲ್ಲೇನಿದೆ?: ಗರ್ಭಿಣಿಯರಿಗೆ ಸೋಂಕು ತಗಲಿದರೂ ಶೇ.90ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದೇ ಗುಣಮುಖರಾಗಿದ್ದಾರೆ. ಆದರೆ ಗಂಭೀರ ರೋಗ ಲಕ್ಷಣ ಇರುವವರಿಗೆ ಅಪಾಯ ಹೆಚ್ಚಿರುವ ಕಾರಣ, ಅಂಥವರು ಆಸ್ಪತ್ರೆಗೆ ದಾಖಲಾಗಲೇಬೇಕು. ಅತ್ಯಧಿಕ ರಕ್ತದೊತ್ತಡ, ಮಧುಮೇಹ, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ, ಅತಿಕಾಯ, 35 ವರ್ಷ ಮೇಲ್ಪಟ್ಟವರು ಹೆಚ್ಚಿನ ನಿಗಾ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖೀಸಲಾಗಿದೆ. ಜತೆಗೆ ಕೊರೊನಾ ಸೋಂಕಿತ ತಾಯಿಗೆ ಜನಿಸಿದ ಶೇ.95ರಷ್ಟು ಮಕ್ಕಳು ಆರೋಗ್ಯವಂತರಾಗಿದ್ದಾರೆ. ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಅವಧಿ ಪೂರ್ವ ಹೆರಿಗೆ, ಮಗುವಿನ ತೂಕ ಇಳಿಕೆಯಂಥ ಘಟನೆಗಳು ನಡೆದಿವೆ ಎಂದೂ ತಿಳಿಸಲಾಗಿದೆ.

ಎಲ್ಲ ಗರ್ಭಿಣಿಯರೂ ಕೋವಿನ್‌ ಆ್ಯಪ್‌ ನಲ್ಲಿ ನೋಂದಣಿ ಮಾಡಿಕೊಂಡು ಅಥವಾ ಲಸಿಕಾ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಲಸಿಕೆ ಪಡೆಯಬಹುದು ಎಂದು ಸರಕಾರ ತಿಳಿಸಿದೆ. ಜತೆಗೆ, ಅವರಿಗೆ ಲಸಿಕೆ ನೀಡುವ ಮುನ್ನ ಆ ಕುರಿತು ಆಪ್ತ ಸಮಾಲೋಚನೆ, ಸೂಕ್ತ ಮಾರ್ಗದರ್ಶನ ನೀಡುವಂತೆ ಮುಂಚೂಣಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ.

ಇದೇ ವೇಳೆ, ಸೋಮವಾರದಿಂದ ಮಂಗಳವಾರಕ್ಕೆ ದೇಶದಲ್ಲಿ 37,566 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 907 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next