ಧಾರವಾಡ: ಸರ್ಕಾರದ 16ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯ ಒಟ್ಟು 2,76,390 ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಅಪರ ಜಿಲ್ಲಾ ಧಿಕಾರಿ ಇಬ್ರಾಹಿಂ ಮೈಗೂರ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಲಸಿಕಾ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಭಿಯಾನ ಯಶಸ್ವಿಗೊಳಿಸಲು ಪಶುವೈದ್ಯರು ಸೇರಿದಂತೆ ವಿವಿಧ ಸಿಬ್ಬಂದಿಯ ಒಟ್ಟು 38 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೆ 22 ದಿನಗಳ ಕಾಲಾವ ಧಿಯಲ್ಲಿ ಪ್ರತ್ಯೇಕ ಗ್ರಾಮ ಹಾಗೂ ಸಮಯ ನಿಗದಿಗೊಳಿಸಿ ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ. ಲಸಿಕಾ ತಂಡ ಭೇಟಿ ನೀಡುವ ಪೂರ್ವದಲ್ಲಿ ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರುವ ಹಾಗೂ ವಾಹನಗಳಲ್ಲಿ ಧ್ವನಿವರ್ಧಕ ಬಳಸಿ ರೈತರಿಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಗ್ರಾಮ ಸಮೀಕ್ಷೆ ಮಾಡಿ ಜಾನುವಾರುಗಳ ಪಟ್ಟಿ ತಯಾರಿಸಲಾಗುತ್ತದೆ. ಅದರಂತೆ ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 10 ಗಂಟೆಯೊಳಗೆ (ತಂಪು ವೇಳೆಯಲ್ಲಿ) ಪ್ರತಿ ರೈತರ ಮನೆ ಬಾಗಿಲಿಗೆ ಸಿಬ್ಬಂದಿ ಹೋಗಿ ರೈತರ ಜಾನುವಾರುಗಳಿಗೆ ಲಸಿಕೆ ಹಾಕುತ್ತಾರೆ. ಹೆಚ್ಚಿನ ಮಾಹಿತಿ ಹಾಗೂ ಯಾವುದೇ ರೈತರ ಜಾನುವಾರುಗಳಿಗೆ ಲಸಿಕೆ ಹಾಕದೆ ಉಳಿದಿದ್ದರೆ ಅವರು ಜಿಲ್ಲಾ ಕೇಂದ್ರದ ಸಹಾಯವಾಣಿ: 0836-2447672 ಮತ್ತು ರಾಜ್ಯಮಟ್ಟದ ಸಹಾಯವಾಣಿ: 1804250012 ಉಚಿತ ಕರೆ ಮಾಡಿ ತಿಳಿಸಬಹುದು ಎಂದು ತಿಳಿಸಿದರು.
ಕಾಲುಬಾಯಿ ರೋಗ ತಮ್ಮ ಜಾನುವಾರುಗಳಿಗೆ ಬಂದಿಲ್ಲವೆಂದು ಬಿಡದೆ ಪ್ರತಿ ರೈತರು ತಮ್ಮ ಜಾನುವಾರುಗಳಿಗೆ ಮುಂಜಾಗೃತೆಯಾಗಿ ಈ ಲಸಿಕೆಯನ್ನು ಹಾಕಿಸಬೇಕು. ರಾಜ್ಯದ ಇತರ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದ ಜಾನುವಾರುಗಳನ್ನು ಖರೀದಿಸಿ ತರುವುದರಿಂದ, ಅವುಗಳಲ್ಲಿದ್ದ ರೋಗ ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿ ಜಾನುವಾರಿಗೂ ತಪ್ಪದೆ ಲಸಿಕೆ ಹಾಕಿಸಬೇಕು ಎಂದರು.
ಪಶುಪಾಲನೆ ಹಾಗೂ ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ| ಪರಮೇಶ್ವರ ನಾಯಕ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಲು ಸಿಬ್ಬಂದಿ ತಂಡವನ್ನು ಸಿದ್ಧಗೊಳಿಸಲಾಗಿದೆ. ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿ ಅಭಿಯಾನ
ಯಶಸ್ವಿಗೊಳಿಸಲಾಗುವುದು. ಇದರೊಂದಿಗೆ ಪ್ರತಿ ರೈತ ಕುಟುಂಬಕ್ಕೆ ಪಶುಪಾಲನೆ ಇಲಾಖೆಯ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುವದು ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ತಾಲೂಕಾ ಪಶುವೈದ್ಯಾಧಿಕಾರಿಗಳಾದ ಡಾ| ಜಂಬುನಾಥ ಗಡ್ಡಿ, ಡಾ| ಉಮೇಶ ಕೊಡ್ಲಿ, ಡಾ| ಸಂತಿ, ಡಾ|ಎಂ. ಎಂ. ದ್ಯಾಬೇರಿ, ಡಾ| ಕೃಷ್ಣಾ ಖ್ಯಾಡದ, ಡಾ| ಮುಲ್ಕಿಪಾಟೀಲ ಮತ್ತು ಕೆಎಂಎಫ್ ವಿಸ್ತರಣಾ ಶಾಖೆಯ ಉಪ ವ್ಯವಸ್ಥಾಪಕ ಸಿದ್ದಯ್ಯ ಇದ್ದರು.