ನವದೆಹಲಿ: ವಿದೇಶಗಳಿಗೆ ಲಸಿಕೆ ರಫ್ತು ಮಾಡುವ ಪ್ರಕ್ರಿಯೆ ಮುಂದಿನ ತಿಂಗಳಿಂದ ಶುರುವಾಗಲಿದೆ. “ಲಸಿಕೆ ಮಿತ್ರತ್ವ’ ಯೋಜನೆಯನ್ವಯ ನೆರೆಯ ದೇಶಗಳಿಗೆ ಎರಡನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಲಸಿಕೆ ಪೂರೈಸುವ ಬಗ್ಗೆ ಯೋಜನೆಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ ಮಂಡವಿಯಾ ಸೋಮವಾರ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಲ್ಲಿಯೇ 30 ಕೋಟಿ ಡೋಸ್ ಲಸಿಕೆ ಸಿಗಲಿದೆ. ಮುಂದಿನ ಮೂರು ತಿಂಗಳಲ್ಲಿ ಒಟ್ಟು 100 ಕೋಟಿ ಡೋಸ್ ಲಸಿಕೆ ಸಿಗಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುವ ಮುನ್ನಾ ದಿನವೇ ಕೇಂದ್ರ ಸರ್ಕಾರ ಮತ್ತೂಮ್ಮೆ ಲಸಿಕೆ ರಫ್ತು ಮಾಡಲು ಮುಂದಾಗಿದೆ. ಅಮೆರಿಕ ಪ್ರವಾಸದ ವೇಳೆ, ಪ್ರಧಾನಿ ಮೋದಿಯವರು ಅಮೆರಿಕ, ಆಸ್ಟ್ರೇಲಿಯಾ, ಜಪಾನ್‌ಗಳನ್ನು ಒಳಗೊಂಡ ಕ್ವಾಡ್ ರಾಷ್ಟ್ರಗಳ ಸಮ್ಮೇಳನದಲ್ಲಿ ಲಸಿಕೆ ಪೂರೈಕೆ ಬಗ್ಗೆ ಕೂಡ ಚರ್ಚೆಯಾಗಲಿದೆ. ಲಸಿಕೆ ರಫ್ತು ಮಾಡುವ ಕೇಂದ್ರದ ನಿರ್ಧಾರದಿಂದಾಗಿ ಮತ್ತೂಮ್ಮೆ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಸಿದ್ಧಿ ಪಡೆಯಲಿದೆ.
ಇದನ್ನೂ ಓದಿ :ಶಿರಸಿ ವೃತ್ತ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಸಭೆ
ಬಯಲಾಜಿಕಲ್ ಇ ಕಂಪನಿಯ ಲಸಿಕೆಗೂ ಶೀಘ್ರದಲ್ಲಿಯೇ ಅನುಮತಿ ಸಿಗುವ ಸಾಧ್ಯತೆ ಇದೆ. ಹೀಗಾಗಿ, ಒಟ್ಟಾರೆ ಲಸಿಕೆ ಪೂರೈಕೆಯಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಏಪ್ರಿಲ್‌ನಿಂದ ಈಚೆಗೆ ದೇಶದಲ್ಲಿ ಲಸಿಕೆ ಉತ್ಪಾದನೆಯ ಪ್ರಮಾಣ ಹೆಚ್ಚಾಗುತ್ತಾ ಬಂದಿದೆ ಎಂದು ಹೇಳಿದ್ದಾರೆ. ರಫ್ತು ಪ್ರಕ್ರಿಯೆಗೆ ತಡೆ ಹಾಕುವ ಮುನ್ನ 100 ದೇಶಗಳಿಗೆ 6.6 ಕೋಟಿ ಡೋಸ್ ಲಸಿಕೆ ರಫ್ತು ಮಾಡಿದೆ.