Advertisement

ಸುರಕ್ಷತೆ ಖಚಿತಪಡಿಸಿಕೊಂಡೇ ಲಸಿಕೆ ವಿತರಣೆ: ಸಂಸದ ಸಿದ್ದೇಶ್ವರ

01:19 PM Jan 17, 2021 | Team Udayavani |

ದಾವಣಗೆರೆ: ಕೋವಿಡ್‌ ಲಸಿಕೆಯನ್ನು ಸಾಕಷ್ಟು ಪರೀಕ್ಷೆಗೊಳಪಡಿಸಿ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡೇ ನೀಡಲಾಗುತ್ತಿದೆ. ಆದ್ದರಿಂದ ಯಾರೂ ಯಾವುದೇ ಭಯಕ್ಕೆ ಒಳಗಾಗದೇ ನಿರಾತಂಕವಾಗಿ ಲಸಿಕೆ ಪಡೆಯಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

Advertisement

ನಗರದ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಕೊವಿಡ್‌ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಗೆ 13,500 ಲಸಿಕೆಗಳು ಬಂದಿದ್ದು ಜಿಲ್ಲೆಯಾದ್ಯಂತ ಲಸಿಕೆ ನೀಡಲಾಗುವುದು. ಮೊದಲು ಆರೋಗ್ಯ ಕಾರ್ಯಕರ್ತರಿಗೆ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಲಸಿಕಾ ಕಾರ್ಯಕ್ರಮ ಸಂಪೂರ್ಣ ಯಶಸ್ಸು ಕಾಣಲಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯ ಏಳು ಕೇಂದ್ರಗಳಲ್ಲಿ ಲಸಿಕಾಕರಣಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 18 ವರ್ಷ ಮೇಲ್ಪಟ್ಟ, ಯಾವುದೇ ಇತರೆ ಕಾಯಿಲೆಗಳ ಗಂಭೀರತೆ ಇಲ್ಲದ ತಲಾ ನೂರು ಆರೋಗ್ಯ ಕಾರ್ಯಕರ್ತ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿದ ಪ್ರಕಾರ ಇಂದು ಲಸಿಕಾಕರಣ ಮಾಡಲಾಗುತ್ತಿದೆ. ಮೊದಲನೇ ಹಂತದಲ್ಲಿ 6876 ಸರ್ಕಾರಿ, 12194 ಖಾಸಗಿ ಸೇರಿದಂತೆ ಒಟ್ಟು 19,070 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಪಟ್ಟಿ ತಯಾರಿಸಿಡಲಾಗಿದೆ. ಯಾವುದೇ ರೀತಿಯ ಭಯವಿಲ್ಲದೆ ನಿರಾತಂಕವಾಗಿ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಯಾರೂ ಲಸಿಕಾಕರಣ ಕುರಿತು ಅನಗತ್ಯ ಗೊಂದಲ ಸೃಷ್ಟಿಸಬಾರದು ಮತ್ತು ಸುಳ್ಳು ಸುದ್ದಿ, ವದಂತಿಗಳಿಗೆ ಕಿವಿಗೊಡಕೂಡದು. ಸುಳ್ಳು ಸುದ್ದಿ, ವದಂತಿಗೆ ಎಡೆ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಯಾದಗಿರಿಯಲ್ಲಿ ಮೊದಲ ದಿನ ಶೇ.50 ಲಸಿಕೆ ನೀಡಿಕೆ

Advertisement

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ರಾಘವನ್‌ ಮಾತನಾಡಿ, ಕೋವಿಡ್‌ನಿಂದ ಆಗಬಹುದಾದ ಸಾವು-ನೋವು ಮತ್ತು ಸಮುದಾಯ ಹರಡುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಕೋವಿಡ್‌ ಲಸಿಕಾಕರಣ ಕಾರ್ಯಕ್ರಮ ಜಾರಿಗೆ ತಂದಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು ಜಿಲ್ಲೆಯಲ್ಲಿ ಒಟ್ಟು 36 ಕೇಂದ್ರಗಳಲ್ಲಿ 19,070 ಜನರಿಗೆ ಲಸಿಕೆ ನೀಡಲಾಗುವುದು. ಒಟ್ಟು 108 ನುರಿತ ಲಸಿಕಾಕಾರರು ಲಸಿಕೆ ನೀಡುತ್ತಿದ್ದಾರೆ ಎಂದರು.

ಶಾಸಕರಾದ ಎಸ್‌.ಎ. ರವಿಂದ್ರನಾಥ್‌, ಪ್ರೊ| ನಿಂಗಣ್ಣ, ಆರ್‌ ಸಿಎಚ್‌ ಅಧಿಕಾರಿ ಡಾ| ಮೀನಾಕ್ಷಿ , ದಾವಣಗೆರೆ ತಹಶೀಲ್ದಾರ್‌ ಗಿರೀಶ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್‌, ತಾಲೂಕು ವೈದ್ಯಾಧಿಕಾರಿ ಸೇರಿದಂತೆ ಇತರೆ ವೈದ್ಯರು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next