Advertisement

ಕಾಲುಬಾಯಿ ಜ್ವರಕ್ಕೆ ಲಸಿಕೆ ಅಭಿಯಾನ ಆರಂಭ

07:29 AM Jan 30, 2019 | |

ರಾಮನಗರ: ಜಿಲ್ಲಾದ್ಯಂತ ರಾಸುಗಳಿಗೆ ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಜಿಲ್ಲೆಯಲ್ಲಿ 2.92,566 ಲಕ್ಷ ರಾಸುಗಳ ಪೈಕಿ ಎರಡೇ ದಿನಕ್ಕೆ 37,915 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಅಂದರೆ ಶೇ.27ರಷ್ಟು ರಾಸುಗಳಿಗೆ ಲಸಿಕೆಯನ್ನು ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹಾಕಿದ್ದಾರೆ. ಫೆ.16ರವರೆಗೆ ಗಡುವಿದ್ದು, ಅವಧಿಯೊಳಗೆ ಎಲ್ಲಾ ರಾಸುಗಳಿಗೂ ಲಸಿಕೆ ಹಾಕುವುದಾಗಿ ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

ಶೇ.94ರಷ್ಟು ರಾಸುಗಳಿಗೆ ಲಸಿಕೆ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಲು ಆರಂಭಿಸಿದೆ. ಎಮ್ಮೆ, ಎತ್ತು, ಹಸು ಸೇರಿದಂತೆ ಸಾಕಿದ ಹಂದಿಗಳಿಗೂ ಲಸಿಕೆ ಹಾಕುವುದಾಗಿ ವೈದ್ಯರು ತಿಳಿಸಿದ್ದಾರೆ. ಸೋಮವಾರ ಜಿಲ್ಲೆಯಲ್ಲಿ ಮೊದಲ ದಿನವೇ 19929 ರಾಸುಗಳಿಗೆ ಲಸಿಕೆ ಹಾಕುವ ಗುರಿ ಇತ್ತು. ಈ ಪೈಕಿ 17 ಸಾವಿರ ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಮೊದಲ ದಿನ ಶೇ.85ರಷ್ಟು ಸಾಧನೆ ತೋರಲಾಗಿದೆ.

ಎರಡನೇ ದಿನ ಮಂಗಳವಾರ ಒಟ್ಟು 20421 ರಾಸುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಈ ಪೈಕಿ 17986 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಎರಡನೇ ದಿನ ಶೇ.89ರಷ್ಟು ರಾಸುಗಳಿಗೆ ಲಿಸಿಕೆ ಹಾಕಲಾಗಿದೆ. ಎರಡೂ ದಿನಗಳು ಒಟ್ಟು 40350 ರಾಸುಗಳ ಗುರಿಯ ಪೈಕಿ 37915 ರಾಸುಗಳಿಗೆ ಲಸಿಕೆ ಹಾಕಲಾಗಿದ್ದು, ಇಲಾಖೆ ಶೇ.94ರಷ್ಟು ಸಾಧನೆ ಮಾಡಿದೆ.

ಯಾವ ತಾಲೂಕಿನಲ್ಲಿ ಎಷ್ಟು ರಾಸುಗಳಿಗೆ ಲಸಿಕೆ: ಜಿಲ್ಲೆಯಲ್ಲಿ ಒಟ್ಟು 2.92,566 ಲಕ್ಷ ರಾಸುಗಳಿಗೆ ಲಸಿಕೆ ಹಾಕುವ ಗುರಿಯನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇರಿಸಿಕೊಂಡಿದೆ. ರಾಮನಗರದಲ್ಲಿ 57360, ಚನ್ನಪಟ್ಟಣದಲ್ಲಿ 50967, ಮಾಗಡಿಯಲ್ಲಿ 76898 ಮತ್ತು ಕನಕಪುರದಲ್ಲಿ 107341 ರಾಸುಗಳಿವೆ. ಸೋಮವಾರ ಮತ್ತು ಮಂಗಳವಾರ ಇಲಾಖೆ ಜಿಲ್ಲೆಯಲ್ಲಿ 40350 ರಾಸುಗಳಿಗೆ ಲಸಿಕೆ ಹಾಕುವ ಗುರಿಯನ್ನು ಇಟ್ಟುಕೊಂಡಿತ್ತು. ಈ ಪೈಕಿ 37915 ರಾಸುಗಳಿಗೆ ಲಸಿಕೆ ಹಾಕಿ ಶೇ.94ರಷ್ಟು ಸಾಧನೆಯನ್ನು ಮಾಡಿದೆ. ರಾಮನಗರದಲ್ಲಿ 7147, ಮಾಗಡಿಯಲ್ಲಿ 10820, ಚನ್ನಪಟ್ಟಣದಲ್ಲಿ 7511 ಮತ್ತು ಕನಕಪುರದಲ್ಲಿ 12437 ರಾಸುಗಳಿಗೆ ಲಸಿಕೆ ಹಾಕಲಾಗಿದೆ.

ಮನೆ ಬಾಗಿಲಿನಲ್ಲೇ ಲಸಿಕೆ: ಜ.28ರಿಂದ ಫೆ.16ರವರೆಗೆ ಲಸಿಕೆ ಹಾಕುವ ಅವಧಿಯನ್ನು ಸರ್ಕಾರ ನಿಗದಿ ಮಾಡಿದೆ. ಚನ್ನಪಟ್ಟಣ, ಮಾಗಡಿಗಳಲ್ಲಿ ಕಾಲುಬಾಯಿ ಜ್ವರ ಕಳೆದೆರೆಡು ತಿಂಗಳಿನಿಂದ ಕಾಡಲಾರಂಭಿಸಿದ್ದವು, 15-20 ರಾಸುಗಳು ಮೃತಪಟ್ಟ ಪ್ರಕರಣಗಳು ಇವೆ. ಪಶುವೈದ್ಯಕೀಯ ಇಲಾಖೆ ಮತ್ತು ಬಮೂಲ್‌ ಸಿಬ್ಬಂದಿ ಜಂಟಿಯಾಗಿ ತಂಡಗಳನ್ನು ರಚಿಸಿಕೊಂಡು ರೈತರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Advertisement

ಲಸಿಕೆ ಕಾರ್ಯಕ್ಕೆ 31 ತಂಡ ರಚನೆ: ಜಿಲ್ಲೆಯ 834 ಗ್ರಾಮಗಳಿಗೂ ವೈದ್ಯರು, ಸಿಬ್ಬಂದಿ ತೆರಳಿ ಲಸಿಕೆ ಹಾಕುತ್ತಿದ್ದಾರೆ. ಪಶು ವೈದ್ಯಕೀಯ ಇಲಾಖೆಯಿಂದ 185 ಮಂದಿ ಮತ್ತು ಬಮೂಲ್‌ನಿಂದ 35 ಮಂದಿ ಲಸಿಕೆ ನೀಡು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಮನಗರದಲ್ಲಿ 7 ತಂಡ, ಚನ್ನಪಟ್ಟಣದಲ್ಲಿ 5 ತಂಡ, ಮಾಗಡಿಯಲ್ಲಿ 9 ತಂಡ ಮತ್ತು ಕನಕಪುರದಲಿ 10 ತಂಡಗಳು ಒಟ್ಟು 31 ತಂಡಗಳನ್ನಾಗಿ ರಚಿಸಿಕೊಳ್ಳಲಾಗಿದೆ. ಬಮೂಲ್‌ನಿಂದ ವಾಹನ ವ್ಯವಸ್ಥೆ ಮಾಡಲಾಗಿದೆ.

ಎರಡು ದಿನದ ಗುರಿಯ ಪೈಕಿ ಶೇ.94ರಷ್ಟು ಲಸಿಕೆ ನೀಡುವ ಗುರಿ ಸಾಧನೆಯಾಗಿದೆ. 2,92,566 ರಾಸುಗಳ ಪೈಕಿ ಈಗಾಗಲೆ 37915 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಉಳಿದ 2,54,651 ರಾಸುಗಳಿಗೆ ಅವಧಿ ಮುಗಿಯುವುದರೊಳಗೆ ಪೂರೈಸುವ ವಿಶ್ವಾಸವನ್ನು ಇಲಾಖೆಯ ಅಧಿಕಾರಿಗಳು ಇರಿಸಿಕೊಂಡಿದ್ದಾರೆ.

ವರ್ಷಕ್ಕೆ ಎರಡು ಬಾರಿ ಲಸಿಕೆ: ರಾಸುಗಳನ್ನು ಕಾಲುಬಾಯಿ ಜ್ವರದಿಂದ ರಕ್ಷಿಸಲು ಇಲಾಖೆ ವರ್ಷಕ್ಕೆ ಎರಡು ಬಾರಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. 2013-14ನೆ ಸಾಲಿನಲ್ಲಿ 2 ಸಾವಿರಕ್ಕೂ ಅಧಿಕ ರಾಸುಗಳು ಜಿಲ್ಲೆಯಲ್ಲಿ ಸಾವನ್ನಪ್ಪಿತ್ತು. ಶಾಸಕರಾಗಿದ್ದ ಕುಮಾರಸ್ವಾಮಿ ಆಗಿನ ಸರ್ಕಾರದ ಮೇಲೆ ಒತ್ತಡ ಹೇರಿ ಮೃತ ರಾಸುಗಳಿಗೆ ಪರಿಹಾರವನ್ನು ಕೊಡಿಸಿದ್ದರು. ತದ ನಂತರ ಅರಂಭವಾದ ಲಸಿಕೆ ನೀಡುವ ಕಾರ್ಯಕ್ರಮ ನಿರಂತರವಾಗಿ ಪ್ರತಿ ಮಾಚ್ ಮತ್ತು ಆಗಸ್ಟ್‌ ರೊಳಗೆ ನಡೆದುಕೊಂಡು ಬರುತ್ತಿದೆ. ಪಶು ವೈದ್ಯಕೀಯ ಇಲಾಖೆಯೊಂದಿಗೆ ಬೆಂಗಳೂರು ಹಾಲು ಒಕ್ಕೂಟ (ಬಮೂಲ್‌) ಅಧಿಕಾರಿಗಳು ಸಹ ಕೈ ಜೋಡಿಸಿದ್ದು, ಲಸಿಕೆ ಹಾಕುವ ಕಾರ್ಯಕ್ರಮ ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ.

* ಬಿ.ವಿ.ಸೂರ್ಯ ಪ್ರಕಾಶ್

Advertisement

Udayavani is now on Telegram. Click here to join our channel and stay updated with the latest news.

Next