Advertisement

ಉಡುಪಿ ಜಿಲ್ಲೆಯಲ್ಲಿ ಲಸಿಕೆ ವಾರದಲ್ಲಿ ಶೇ. 100 ಸಾಧನೆ ಗುರಿ

01:18 AM Feb 01, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಶೇ. 98.55 ಮಂದಿ ಪ್ರಥಮ ಹಾಗೂ ಶೇ. 87.22 ಮಂದಿ ಎರಡನೇ ಡೋಸ್‌ ಕೊರೊನಾ ನಿರೋಧಕ ಲಸಿಕೆ ಪಡೆದಿದ್ದಾರೆ. ಒಂದು ವಾರದ ಅವಧಿಯಲ್ಲಿ ಎರಡೂ ವಿಭಾಗಗಳಲ್ಲಿ ಶೇ. 100 ಗುರಿ ಸಾಧಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.

Advertisement

ಫೆ. 2 ಮತ್ತು 4ರಂದು ವಿಶೇಷ ಲಸಿಕೆ ಅಭಿಯಾನ ಆಯೋಜಿಸಲಾಗಿದೆ. ಗ್ರಾ.ಪಂ. ಮತ್ತು ನಗರ ವ್ಯಾಪ್ತಿಯಲ್ಲಿ ಪ್ರಥಮ ಡೋಸ್‌ ಪಡೆಯದವರನ್ನು ಮತ್ತು ಪ್ರಥಮ ಡೋಸ್‌ ಪಡೆದು ಎರಡನೇ ಡೋಸ್‌ ಪಡೆಯದವರನ್ನು, 2ನೇ ಡೋಸ್‌ ಲಸಿಕೆ‌ ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಅರ್ಹರಾಗಿರುವವರನ್ನು ಗುರುತಿಸಿ ನೀಡಲಾಗುತ್ತದೆ.

ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ನೀಡುವ ಗುರಿ 9,99,000 ಆಗಿದ್ದು, ಇಂದಿನವರೆಗೆ 9,84,551 ಮಂದಿಗೆ ಪ್ರಥಮ ಡೋಸ್‌ ನೀಡಿ ಶೇ. 98.55 ಗುರಿ ಸಾಧಿಸಲಾಗಿದೆ. ಎರಡನೇ ಡೋಸ್‌ 8,71,317 ಮಂದಿಗೆ ನೀಡಿದ್ದು, ಶೇ. 87.22 ಸಾಧನೆಯಾಗಿದೆ. ಒಟ್ಟು 18,55,868 ಡೋಸ್‌ ಲಸಿಕೆ ನೀಡಲಾಗಿದೆ. 15-18 ವರ್ಷದೊಳಗಿನ ಗುರಿ 53,555 ಆಗಿದ್ದು, ಇದುವರೆಗೆ 47,185 ವಿದ್ಯಾರ್ಥಿಗಳಿಗೆ ನೀಡಿ ಶೇ.88.11 ಸಾಧನೆ ಮಾಡಲಾಗಿದೆ. 25,797 ಮಂದಿಗೆ ಮುನ್ನೆಚ್ಚರಿಕ ಡೋಸ್‌ ನೀಡಲಾಗಿದೆ.

ಅಧಿಕಾರಿಗಳ ನಿಯೋಜನೆ
ಒಂದು ವಾರದ ಅವಧಿಯಲ್ಲಿ ಎರಡೂ ಡೋಸ್‌ ಲಸಿಕಾಕರಣದಲ್ಲಿ ಶೇ. 100 ಸಾಧನೆ ಮಾಡಲು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾ.ಪಂ. ಹಾಗೂ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾರ್ಡ್‌ವಾರು ನೋಡಲ್‌ ಅಧಿಕಾರಿಗಳನ್ನಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳನ್ನು ನಿಯೋಜಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ಮಾರ್ಗದರ್ಶನ
ಮುನ್ನೆಚ್ಚರಿಕೆ ಡೋಸ್‌ ಪಡೆಯಲು ಅರ್ಹರಿರುವವರಿಗೆ ಲಸಿಕೆ ಪಡೆಯಲು ಪ್ರೇರೇಪಿಸಿ ಹತ್ತಿರದ ಲಸಿಕೆ ಕೇಂದ್ರದಲ್ಲಿ ಪಡೆಯುವ ಬಗ್ಗೆ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಯವರು ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ ಪರಿಶೀಲಿಸುವುದು ಮತ್ತು ಸಿಬಂದಿ ಮುಂಜಾಗ್ರತಾ ಡೋಸ್‌ ಲಸಿಕೆಯನ್ನು ಕೂಡಲೇ ಪಡೆದುಕೊಳ್ಳುವಂತೆ ಸೂಚಿಸಲಿದ್ದಾರೆ.

Advertisement

ಅಗತ್ಯ ಕ್ರಮಕ್ಕೆ ಸೂಚನೆ
ಗ್ರಾ.ಪಂ. ಮತ್ತು ನಗರ ವ್ಯಾಪ್ತಿಯಲ್ಲಿ ಲಸಿಕೆ ಪಡೆಯಲು ಬಾಕಿ ಇರುವ 15ರಿಂದ 18 ವರ್ಷದ ವಿದ್ಯಾರ್ಥಿಗಳು ಮತ್ತು ಅದೇ ವಯಸ್ಸಿನ ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಗ್ರಾಮ/ನಗರ ಕಾರ್ಯಪಡೆ ಅಧ್ಯಕ್ಷರು ಮತ್ತು ಸದಸ್ಯರ ಸಹಕಾರದಿಂದ ಲಸಿಕೆ ಪಡೆಯುವಂತೆ ಕ್ರಮವಹಿಸಬೇಕಾಗಿದೆ.

ಜಿಲ್ಲೆಯ ಅರ್ಹ ಎಲ್ಲರಿಗೂ 1ನೇ ಮತ್ತು 2ನೇ ಡೋಸ್‌ ಲಸಿಕೆ ನೀಡಲು ಗ್ರಾ.ಪಂ. ಮತ್ತು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಾಗೂ ಲಸಿಕೆ ಪಡೆಯಲು ನಿರಾಕರಣೆ ಇರುವವರ ಮನೆಗೆ ತೆರಳಿ ಮನವೊಲಿಸಿ ಲಸಿಕೆ ನೀಡಲು ಮೊಬೈಲ್‌ ತಂಡಗಳನ್ನು ರಚಿಸಲಾಗಿದೆ. ವಾರದ ಅವಧಿಯಲ್ಲಿ ಅರ್ಹ ಎಲ್ಲರಿಗೂ ಶೇ. 100 ಸಾಧನೆ ಮಾಡಲು ಗುರಿ ಹಾಕಿಕೊಳ್ಳಲಾಗಿದೆ.
– ಕೂರ್ಮಾ ರಾವ್‌ ಎಂ., ಉಡುಪಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next