Advertisement

ಒಂದೇ ದಿನ 80 ಲಕ್ಷ ಜನರಿಗೆ ಲಸಿಕೆ! ಕರ್ನಾಟಕದಲ್ಲಿ 11 ಲಕ್ಷದಷ್ಟು ಮಂದಿ ಲಸಿಕೆ ಪಡೆದು ದಾಖಲೆ

03:04 AM Jun 22, 2021 | Team Udayavani |

ಹೊಸದಿಲ್ಲಿ/ ಬೆಂಗಳೂರು : ದೇಶಾದ್ಯಂತ ಸೋಮವಾರ ಆರಂಭವಾದ ಮೆಗಾ ಲಸಿಕೆ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು, 80 ಲಕ್ಷಕ್ಕೂ ಹೆಚ್ಚು ಮಂದಿ ಒಂದೇ ದಿನ ಲಸಿಕೆ ಪಡೆದಿದ್ದಾರೆ. ಜತೆಗೆ ಇದೇ ಮೊದಲ ಬಾರಿಗೆ ವಿಶ್ವದಲ್ಲಿ ಒಂದೇ ದಿನ ಇಷ್ಟು ಬೃಹತ್‌ ಪ್ರಮಾಣದಲ್ಲಿ ಲಸಿಕೆ ಹಾಕಿದ ದಾಖಲೆಯನ್ನೂ ಭಾರತ ನಿರ್ಮಾಣ ಮಾಡಿದೆ.

Advertisement

ಕರ್ನಾಟಕದಲ್ಲಿ 11 ಲಕ್ಷದಷ್ಟು ಮಂದಿ ಲಸಿಕೆ ಪಡೆದು ದಾಖಲೆ ನಿರ್ಮಿಸಿದ್ದಾರೆ. ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿರುವಂತೆ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ 10.7 ಲಕ್ಷ ಮಂದಿಗೆ ಲಸಿಕೆ
ರಾಜ್ಯದಲ್ಲಿ 18ರಿಂದ 44 ವರ್ಷದ ಏಳು ಲಕ್ಷ ಮಂದಿಯ ಸಹಿತ 10.7 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ನಾಲ್ಕು ಪಟ್ಟು ಅಧಿಕ ಲಸಿಕೆ ವಿತರಣೆ ಮಾಡಲಾಗಿದೆ.

ರಾಜ್ಯಾದ್ಯಂತ 8,262 ಲಸಿಕೆ ಕೇಂದ್ರಗಳಲ್ಲಿ ಲಸಿಕೆ ವಿತರಣೆ ನಡೆದಿದ್ದು, 9.8 ಲಕ್ಷ ಮಂದಿಗೆ ಮೊದಲ ಡೋಸ್‌, 90 ಸಾವಿರ ಮಂದಿಗೆ ಎರಡನೇ ಡೋಸ್‌ ಸೇರಿ ಒಟ್ಟು 10.7 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. 7.1 ಲಕ್ಷ 18ರಿಂದ 44 ವರ್ಷದವರು, 1.1 ಲಕ್ಷ 60 ವರ್ಷ ಮೇಲಟ್ಟವರು, 2.5 ಲಕ್ಷ 44ರಿಂದ 60 ವರ್ಷದೊಳಗಿನವರು ಲಸಿಕೆ ಪಡೆದಿದ್ದಾರೆ.

ದ.ಕ., ಉಡುಪಿ: 70 ಸಾವಿರ
ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರ ದಾಖಲೆಯ 70,641 ಮಂದಿಗೆ ಲಸಿಕೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 26,249 ಮಂದಿ ಲಸಿಕೆ ಪಡೆದುಕೊಂಡರು.

Advertisement

ರಾಜ್ಯ ಮಟ್ಟದಲ್ಲಿ ಅತ್ಯಧಿಕ ಲಸಿಕೆ ಹಾಕಿದ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ 6ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 36,000 ಮಂದಿಗೆ ಲಸಿಕೆ ನೀಡುವ ಗುರಿ ಇರಿಸಿಕೊಳ್ಳಲಾಗಿತ್ತು.

ಬೆಂಗಳೂರೇ ಪ್ರಥಮ
ದೇಶದಲ್ಲಿ ಅತೀ ಹೆಚ್ಚು ಮಂದಿ ಲಸಿಕೆ ಪಡೆದ ನಗರವಾಗಿ ಬೆಂಗಳೂರು ಗುರುತಿಸಿ ಕೊಂಡಿದೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ್‌ ತಿಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಮಧ್ಯ ಪ್ರದೇಶದ ಇಂದೋರ್‌ ಇದೆ. ಬೆಂಗಳೂರಿನಲ್ಲಿ ಸೋಮವಾರ 2.13 ಲಕ್ಷ ಮಂದಿ ಲಸಿಕೆ ಪಡೆದರೆ ಇಂದೋರ್‌ ನಲ್ಲಿ 2.11 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ. ರಾಜ್ಯಗಳ ಪೈಕಿ ಮಧ್ಯಪ್ರದೇಶ 15.5 ಲಕ್ಷ ಮಂದಿಗೆ ಲಸಿಕೆ ನೀಡಿ ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next