Advertisement

ಶೀಘ್ರ 12 ವರ್ಷದೊಳಗಿನ ಮಕ್ಕಳಿಗೂ ಲಸಿಕೆ: ಆರೋಗ್ಯ ಸಚಿವ ಡಾ|ಸುಧಾಕರ್‌

09:02 PM Mar 16, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಕುರಿತಂತೆ ಪೋಷಕರಿಂದ ಬಹಳಷ್ಟು ಬೇಡಿಕೆ ಇತ್ತು. ಮುಂದಿನ ದಿನಗಳಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ವಿಚಾರವಾಗಿಯೂ ಚಿಂತನೆ ನಡೆಯುತ್ತಿದೆ ಎಂದು ಆರೋಗ್ಯ ಇಲಾಖೆ ಸಚಿವ ಡಾ| ಕೆ. ಸುಧಾಕರ್‌ ತಿಳಿಸಿದರು.

Advertisement

ಆರೋಗ್ಯ ಇಲಾಖೆಯ ವತಿಯಿಂದ ಬುಧವಾರ 12 ರಿಂದ 14 ವರ್ಷದೊಳಗಿನ ಅರ್ಹ ಮಕ್ಕಳಿಗೆ ಕೋರ್ಬಿವ್ಯಾಕ್ಸ್ ಲಸಿಕೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 0-12 ವರ್ಷದ ಒಳಗಿನ ಮಕ್ಕಳಿಗೂ ಮುಂದಿನ ದಿನಗಳಲ್ಲಿ ಲಸಿಕೆ ದೊರೆಯಲಿದೆ. ಎಲ್ಲವೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಶೋಧನೆಯಾಗಿ, ಅಧ್ಯಯನವಾಗಿ, ಪರವಾನಗಿ ತೆಗೆದುಕೊಂಡು ಜನರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

12ರಿಂದ 14 ವರ್ಷ ಮಕ್ಕಳು ಈ ಲಸಿಕೆ ತೆಗೆದುಕೊಂಡರೆ ಕೊರೊನಾ ವಿರುದ್ಧ ಹೋರಾಡಲು ಶಕ್ತಿ ಪಡೆಯಬಹುದು. ರಾಜ್ಯದಲ್ಲಿ 20 ಲಕ್ಷ ಮಕ್ಕಳಿಗೆ ಈ ಲಸಿಕೆ ನೀಡಲಾಗುವುದು. ಸರಕಾರದ ಕ್ರಮಗಳಿಗೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಕೋವಿಡ್‌ ಲಸಿಕೆ ಪಡೆದ ಪ್ರತಿಯೊಬ್ಬರು ಕೊರೊನಾ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು. ಕೊರೊನಾ ರೂಪಾಂತರಿ ಹಲವು ಅಲೆಗಳು ಬರಬಹುದು ಎಂಬ ಆತಂಕವಿದೆ. ಮಾಸ್ಕ್ , ಭೌತಿಕ ಅಂತರದ ಮೂಲಕ ಮುಂಜಾಗೃತ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು. ರಾಜ್ಯದಲ್ಲಿ 10 ಕೋಟಿಗೂ ಅಧಿಕ ಡೋಸ್‌ ಲಸಿಕೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ 12-14ರ ವಯೋಮಾನದ 20 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಇಷ್ಟೇ ಅಲ್ಲದೆ, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಡೋಸ್‌ ಪಡೆದ 39 ವಾರ ಅಥವಾ 9 ತಿಂಗಳ ಬಳಿಕ ಅವರಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಲಾಗುತ್ತದೆ. ಈ ವಯೋಮಾನದ 76.58 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಇದೆ ಎಂದರು.

Advertisement

ಎಲ್ಲ ಶಾಲಾ-ಕಾಲೇಜು ಹಂತದಲ್ಲಿ ಇನ್ನು ಮೂರು ದಿನಗಳಲ್ಲಿ ಲಸಿಕಾಕರಣ ಆರಂಭವಾಗಲಿದೆ. ಶಾಲೆಗೆ ಬರದ ಮಕ್ಕಳಿಗೆ ಅವರು ಇದ್ದಲ್ಲಿಗೆ ಹೋಗಿ ವ್ಯಾಕ್ಸಿನ್‌ ನೀಡಲಾಗುವುದು. ಇದಕ್ಕಾಗಿ ಆ್ಯಪ್‌ ಅಭಿವೃದ್ಧಿಪಡಿಸಿದ ಕೂಡಲೇ ಶಾಲಾ-ಕಾಲೇಜುಗಳಲ್ಲಿ ಲಸಿಕೆ ನೀಡಲು ಶುರು ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮಾಹಿತಿ ನೀಡಿದರು.

ಸೂಜಿ ನೋಡಿ ಕಣ್ಣೀರು!
ಉದ್ಘಾಟನ ಸಮಾರಂಭದಲ್ಲಿ ಸಾಂಕೇತವಾಗಿ ಲಸಿಕೆ ಪಡೆದುಕೊಳ್ಳಲು ಬಂದಿದ್ದ ಶಾಲಾ ಮಕ್ಕಳು ಸೂಜಿ ನೋಡುತ್ತಲೇ ಭಯ ಪಟ್ಟು ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ಅನಂತರ ಇಬ್ಬರು ಸಚಿವರು ಮಕ್ಕಳನ್ನು ಸಮಾಧಾನಪಡಿಸಿ ಬಳಿಕ ಲಸಿಕೆಯನ್ನು ಹಾಕಿಸಿದರು.

ಯುದ್ಧ ಪೀಡಿತ ಉಕ್ರೇನ್‌ನಿಂದ ವಾಪಸ್ಸಾದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ. ಕೇಂದ್ರ ಸಕಾರದ ಜತೆ ವಿಚಾರ ವಿನಿಮಯ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಮತ್ತು ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
-ಡಾ| ಕೆ. ಸುಧಾಕರ್‌
ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next