Advertisement

ಗ್ರಾಮ ಗ್ರಾಮಗಳಲ್ಲಿ ಲಸಿಕೆ ಅಭಿಯಾನ ಯಶಸ್ಸಾಗಬೇಕು

02:09 AM Mar 26, 2021 | Team Udayavani |

ರೊನಾದ ಮೊದಲ ಅಲೆಯ ಅವಾಂತರವನ್ನು ನಾವು ಸಾಕಷ್ಟು ಅನುಭವಿಸಿದ್ದೇವೆ. ಎರಡನೇ ಅಲೆ ಈಗಾಗಲೇ ವಕ್ಕರಿಸಿದ್ದು, ಹಲವು ಮಂದಿಗೆ ಸೋಂಕು ತಗಲಿದೆ. ಈ ನಡುವೆ ಸರಕಾರ ಕೋವಿಡ್ ನಿರೋಧಕ ಲಸಿಕೆ ವಿತರಣೆಯ ವೇಗವನ್ನು ಹೆಚ್ಚಿಸಲು ಶತಪ್ರಯತ್ನ ನಡೆಸುತ್ತಿದೆ. ಎಲ್ಲೂ ಕೊರತೆಯಾಗದಂತೆಯೂ ನೋಡಿಕೊಳ್ಳುತ್ತಿದೆ. ಕರಾವಳಿಯ ಎಲ್ಲೆಡೆ ಲಸಿಕೆ ಲಭ್ಯವಿದ್ದು, ನಗರಗಳು ಮಾತ್ರವಲ್ಲ ಗ್ರಾಮ ಗ್ರಾಮಗಳಲ್ಲೂ ಇದು ಯಶಸ್ವಿಯಾಗಬೇಕು. ಇದರಲ್ಲಿ ನಮ್ಮ, ನಿಮ್ಮೆಲ್ಲರ ಪಾತ್ರವಿದೆ. ನಮ್ಮ-ನಿಮ್ಮ ಪರಿಸರದ ಎಲ್ಲ ಅರ್ಹರು ಬೇಗನೆ ಲಸಿಕೆ ತೆಗೆದುಕೊಳ್ಳುವಂತೆ ನೋಡಿದರೆ ಎರಡನೇ ಅಲೆಯನ್ನು ತಕ್ಕ ಮಟ್ಟಿಗೆ ಎದುರಿಸಿದಂತೆಯೇ ಸರಿ.

Advertisement

ಕೋವಿಡ್ ತಡೆಯಲು  ಕೋವಿಡ್‌ ಲಸಿಕೆಯನ್ನು ಪ್ರತಿಯೊಬ್ಬರು ಪಡೆಯಬೇಕು. ನಾನೂ  ಲಸಿಕೆ ಹಾಕಿಸಿಕೊಂಡಿದ್ದೇನೆ. ಯಾವುದೇ ತೆರನಾದ  ಆರೋಗ್ಯ ಸಂಬಂಧಿತ  ಅಡ್ಡಪರಿಣಾಮ ಆಗಿರುವುದಿಲ್ಲ. ಪ್ರಮುಖವಾಗಿ ಹಿರಿಯರು ಹಾಗೂ ಮಧ್ಯವಯಸ್ಕರು ಲಸಿಕೆಯನ್ನು ಹಾಕಿಸಿಕೊಳ್ಳಿ ಮತ್ತು ಬೇರೆಯವರು ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿ. – ಸ್ವಾಮಿ ಜಿತಕಾಮಾನಂದಜಿ,-ಅಧ್ಯಕ್ಷರು, ರಾಮಕೃಷ್ಣ ಮಠ ಮಂಗಳೂರು

ನಾನು ಲಸಿಕೆ ತೆಗೆದುಕೊಂಡಿದ್ದೇನೆ. ಅದು ನನ್ನ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮ ಬೀರಿಲ್ಲ. ಎಲ್ಲ ಹಿರಿಯ ನಾಗರಿಕರು ಕಡ್ಡಾಯವಾಗಿ  ಲಸಿಕೆ ತೆಗೆದುಕೊಳ್ಳಿರಿ. ಇದರಿಂದಾಗಿ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣ ಸಾಧ್ಯ. ಮನೆಯೊಳಗೆ ಆತಂಕದಲ್ಲಿ ಕಾಲ ಕಳೆಯುವ ಬದಲು ಲಸಿಕೆ ಹಾಕಿಕೊಂಡು ಆತ್ಮವಿಶ್ವಾಸದಿಂದ ಬದುಕು ಸಾಗಿಸೋಣ. ಡಾ| ಬಿ.ಎ. ವಿವೇಕ ರೈ, ವಿಶ್ರಾಂತ ಕುಲಪತಿ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ

 

ಕೋವಿಡ್ ರೋಗ ನಿಯಂತ್ರಣದ ನಿಟ್ಟಿನಲ್ಲಿ ಉದಯವಾಣಿ ಪತ್ರಿಕೆಯು “ಲಸಿಕೆಯೇ ಶ್ರೀರಕ್ಷೆ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಕುರಿತಂತೆ ಸಾರ್ವಜನಿಕರಿಗೆ ಇರುವ ಕೆಲವೊಂದು ಪ್ರಶ್ನೆಗಳಿಗೆ ಮಂಗಳೂರು ತಾಲೂಕು ನೋಡಲ್‌ ಅಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌ ಅವರು ಉತ್ತರಿಸಿದ್ದಾರೆ.

Advertisement

ಅಪಘಾತವಾದ, ಹೃದಯ ಸಂಬಂಧಿ ಕಾಯಿಲೆ, ಅಸ್ತಮಾ ಇರುವ 49 ವರ್ಷದ ನಾನು ಲಸಿಕೆ ತೆಗೆದುಕೊಳ್ಳಬಹುದೇ?- ಶ್ರೀಪತಿ, ಮಂಗಳೂರು

ಸದ್ಯ ಎರಡನೇ ಹಂತದ ಲಸಿಕೆ ಅಭಿಯಾನ ನಡೆಯುತ್ತಿದ್ದು, 45ರಿಂದ 60 ವರ್ಷದೊಳಗಿನ ಅನಾರೋಗ್ಯ ಹೊಂದಿದವರು (20 ಕಾಯಿಲೆ, ನಿಗದಿತ ನಮೂನೆ ಪ್ರಮಾಣಪತ್ರ ಅಗತ್ಯ) ಲಸಿಕೆ ಪಡೆಯಲು ಅವಕಾಶವಿದೆ. ಜ್ವರ ಹೊರತುಪಡಿಸಿ ಯಾವುದೇ ಕಾಯಿಲೆ ಇದ್ದವರು ಲಸಿಕೆ ಪಡೆಯಬಹುದು.

ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ವ್ಯತ್ಯಾಸ ಏನು? ಯಾವ ಲಸಿಕೆ ತೆಗೆದುಕೊಂಡರೆ ಒಳ್ಳೆಯದು?- ಪದ್ಮಲತಾ, ಮಂಗಳೂರು

ಇವೆರಡೂ ಕೋವಿಡ್‌ ರೋಗ ನಿರೋಧಕ ಲಸಿಕೆಗಳೇ ಆಗಿವೆ. ತಯಾರಿಕಾ ಕಂಪೆನಿಗಳು ಮಾತ್ರ ಬೇರೆಬೇರೆ ವಿನಾ ಯಾವುದೇ ರೀತಿಯ ವ್ಯತ್ಯಾಸ ಇಲ್ಲ. ದ.ಕ. ಜಿಲ್ಲೆಯಲ್ಲಿ ಸದ್ಯ ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಎರಡೂ ಲಸಿಕೆಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಆಯ್ಕೆ ಮಾಡಲು ಅವಕಾಶ ಇಲ್ಲ. ಮೊದಲ ಡೋಸ್‌ ಯಾವ ಔಷಧ ತೆಗೆದುಕೊಳ್ಳಲಾಗಿದೆಯೋ ಎರಡನೇ ಬಾರಿಯೂ ಅದನ್ನೇ ತೆಗೆದುಕೊಳ್ಳಬೇಕು.

ಲಸಿಕೆ ಹಾಕಿದ ಬಳಿಕ ಆ್ಯಂಟಿಬಯಾಟಿಕ್‌ ಅಥವಾ ಇನ್ಯಾವುದೇ ಔಷಧ ತೆಗೆದುಕೊಳ್ಳಬಹುದೇ?- ವಿಷ್ಣು ಪಾಟೀಲ್‌, ಮಂಗಳೂರು

ಇತರ ಕಾಯಿಲೆಗೆ ಆ್ಯಂಟಿಬಯಾಟಿಕ್‌ ಪಡೆದುಕೊಳ್ಳಲು ಯಾವುದೇ ನಿರ್ಬಂಧವಿಲ್ಲ. ಕೋವಿಡ್‌ ನಿರೋಧಕ ಲಸಿಕೆ ತೆಗೆದುಕೊಳ್ಳುವುದರೊಂದಿಗೇ ಆ್ಯಂಟಿಬಯಾಟಿಕ್‌ ಕೂಡ ಸೇವಿಸಬಹುದು.

ಮಂಗಳೂರಿನ ಲಸಿಕೆ ಎಲ್ಲಿ ಸಿಗುತ್ತದೆ?ರಮೇಶ್‌, ಪುತ್ತೂರು

ನಗರದಲ್ಲಿ 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ವೆನ್ಲಾಕ್‌ ಜಿಲ್ಲಾಸ್ಪತ್ರೆ, ಸುಮಾರು 28 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಅವಕಾಶ ಇದೆ.

ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಲಸಿಕೆ ಲಭ್ಯವಿದೆಯೇ?ಕೃಷ್ಣ, ಉಪ್ಪಿನಂಗಡಿ

ಜಿಲ್ಲೆಯ 66 ಪ್ರಾಥಮಿಕ ಆರೋಗ್ಯ ಕೇಂದ್ರ, 12 ನಗರ ಪ್ರಾ.ಆ. ಕೇಂದ್ರ, 6 ಸಮುದಾಯ ಆರೋಗ್ಯ ಕೇಂದ್ರ 4 ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆ, ಸುಮಾರು 35 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ, ಖಾಸಗಿಯಲ್ಲಿ 250 ರೂ. ನೀಡಿ ಲಸಿಕೆ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next