ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ, ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಲು ಹೆಚ್ಚಿನ ಮಂದಿ ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಹಿನ್ನಡೆ ಉಂಟಾಗಿದ್ದು, ಇದೀಗ ವಾರಕ್ಕೆ 30 ಸಾವಿರ ಡೋಸ್ ಲಸಿಕೆ ನೀಡುವ ಟಾರ್ಗೆಟ್ ಇರಿಸಿಕೊಳ್ಳಲಾಗಿದೆ.
ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ್ದರು. ಆ ವೇಳೆ ಈ ತಿಂಗಳಾಂತ್ಯ ದೊಳಗೆ ಶೇ.100ರಷ್ಟು ಮೊದಲ ಡೋಸ್ ಗುರಿಯನ್ನು ಪೂರ್ಣಗೊಳಿಸುವಂತೆ ಆದೇಶಿಸಿದ್ದರು. ಅದರಂತೆ ಜಿಲ್ಲಾ ಮಟ್ಟದಲ್ಲಿಯೂ ಜಿಲ್ಲಾಧಿಕಾರಿಗಳು ಅಧಿ ಕಾರಿಗಳ ಜತೆ ಸಭೆ ನಡೆಸಿ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಸೂಚನೆ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಮನಪಾ ವ್ಯಾಪ್ತಿ ಸಹಿತ ಪ್ರತೀ ತಾಲೂಕಿಗೆ ಟಾರ್ಗೆಟ್ ನೀಡಲಾಗಿದೆ.
ಮಂಗಳೂರಿನಲ್ಲಿ ಒಟ್ಟು 10 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಪ್ರತಿಯೊಂದು ಆರೋಗ್ಯ ಕೇಂದ್ರಕ್ಕೆ 10 ವಾರ್ಡ್‌ಗಳು ಒಳಪಡು ತ್ತವೆ. ಪ್ರತೀ ಕೇಂದ್ರಗಳಿಗೆ ವಾರಕ್ಕೆ 3,000 ಡೋಸ್ ಲಸಿಕೆ ನೀಡುವಿಕೆಯ ಟಾರ್ಗೆಟ್ ನೀಡಲಾಗಿದೆ. ಅದರಂತೆ ವಾರದಲ್ಲಿ 30,000 ಮಂದಿಗೆ ಲಸಿಕೆ ನೀಡುವ ಯೋಜನೆ ರೂಪಿಸಲಾಗಿದೆ. ಪ್ರತೀ ನಗರ ಆರೋಗ್ಯ ಕೇಂದ್ರದಲ್ಲಿ ಮುಖ್ಯ ನೋಡಲ್ ಅಧಿಕಾರಿ, ಮೆಡಿಕಲ್ ಆಫೀಸರ್ ನೇಮಕ ಮಾಡಲಾಗಿದೆ. ಪ್ರತೀ ವಾರ್ಡ್‌ನಲ್ಲಿ ಲಸಿಕೆ ಅಭಿಯಾನಕ್ಕೆಂದು ವಾರ್ಡ್ ಮಟ್ಟದ ಕೋವಿಡ್ ನೋಡಲ್ ಅಧಿಕಾರಿ, ಎಂ.ಪಿ.ಡಬ್ಲ್ಯು, ಆಶಾ ಕಾರ್ಯಕರ್ತೆಯರು, ಅಂಗನ ವಾಡಿ ಕಾರ್ಯಕರ್ತೆಯರನ್ನು ನಿಯೋಜಿಸ ಲಾಗಿದೆ. ಜತೆಗೆ ಕೋವಿಡ್ ಸೋಂಕಿತರ ಪತ್ತೆ, ಕೋವಿಡ್ ಕ್ವಾರಂಟೈನ್ ಪಾಲನೆ, ಲಸಿಕೆ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಮೊದಲ ಡೋಸ್; 21 ಸಾವಿರ ಮಂದಿ ಬಾಕಿ:
ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಡೋಸ್ ಪಡೆದುಕೊಳ್ಳಲು 21 ಸಾವಿರ ಮಂದಿ ಬಾಕಿ ಇದ್ದಾರೆ. ಮೊದಲ ಡೋಸ್ ಪಡೆದು ನಿಗದಿತ ದಿನ ಕಳೆದರೂ ಕೆಲವು ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಲು ಬಾಕಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ನೀಡಲು ನಿಗದಿತ ಗುರಿ ಇರಿಸಿಕೊಳ್ಳಲಾಗಿದೆ. ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಬಿಲ್ ಕಲೆಕ್ಟರ್‌ಗಳು ಸಹಿತ ಸಂಬಂಧಿಸಿದ ಸಿಬಂದಿ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದವರ ಪಟ್ಟಿ ತಯಾರಿಸಲು ಜಿಲ್ಲಾಡಳಿತದಿಂದ ಈಗಾಗಲೇ ಸೂಚನೆ ನೀಡಲಾಗಿದೆ.
ಅಭಿಯಾನಕ್ಕೆ ವೇಗ :
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ನಿರ್ಧರಿಸಲಾಗಿದೆ. ನಗರದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಪ್ರತೀ ಕೇಂದ್ರಗಳಿಗೆ ವಾರಕ್ಕೆ 3,000 ಡೋಸ್ ಲಸಿಕೆ ನೀಡುವ ಗುರಿ ಇರಿಸಲಾಗಿದ್ದು, ಪಾಲಿಕೆ ವ್ಯಾಪ್ತಿ ವಾರದಲ್ಲಿ 30,000 ಡೋಸ್ ಲಸಿಕೆಯ ಟಾರ್ಗೆಟ್ ಇಟ್ಟಿದ್ದೇವೆ. ಈ ನಿಟ್ಟಿನಲ್ಲಿ ವಿವಿಧ ಕಾರ್ಯಗಳು ಸಾಗುತ್ತಿವೆ.
– ಡಾ| ಅಣ್ಣಯ್ಯ ಕುಲಾಲ್, ಮನಪಾ ಕೋವಿಡ್ ನೋಡಲ್ ಅಧಿಕಾರಿ