ಬೆಳಗಾವಿ: ಕೋವಿಡ್ -19 ಸಾಕ್ರಾಂಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜನತಾ ಕಫೂÂì ಸಂದರ್ಭದಲ್ಲಿಯೂ ಸರ್ಕಾರದ ನಿರ್ದೇಶನದಂತೆ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಕೋವಿಡ್-19 ಲಸಿಕೆ ಪಡೆದುಕೊಳ್ಳಲು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಮತ್ತು ಲಸಿಕಾ ಕೇಂದ್ರಗಳಿಗೆ ತೆರಳುವಾಗ ಭಾವಚಿತ್ರ ಹೊಂದಿದ ಅಧಿಕೃತ ಗುರುತಿನ ಚೀಟಿ ಹಾಗೂ ಆನ್ ಲೈನ್ ನೋಂದಣಿ ದಾಖಲೆಯನ್ನು ತರುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರಗಳು ಸೇರಿದಂತೆ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕಾಕರಣಕ್ಕಾಗಿ ಕ್ರಮ ಕೈಗೊಳ್ಳಲಾಗುವುದು. ಜನಸಂದಣಿಯನ್ನು ತಪ್ಪಿಸಲು ಕ್ಷೇತ್ರ ಕಾರ್ಯಕರ್ತರು ಉಪಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿರ್ದಿಷ್ಟ ಸಮಯದಲ್ಲಿ ಲಸಿಕೆ ನೀಡಲು ಅನುಕೂಲಕರ ಗುಂಪುಗಳನ್ನು ಸಜ್ಜುಗೊಳಿಸಲಾಗಿದೆ. ಫಲಾನುಭವಿಗಳನ್ನು ಸಜ್ಜುಗೊಳಿ ಸಲು ಗುರುತಿಸಲಾದ ಸ್ವಯಂ ಸೇವಕರಿಗೆ ದೃಢೀಕರಣಕ್ಕಾಗಿ ಗುರುತಿನ ಚೀಟಿ ಅಥವಾ ಪಾಸ್ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.
ಲಸಿಕಾಕರಣ ಕೇಂದ್ರಗಳಿಗೆ ಪ್ರತಿ ಫಲಾನುಭವಿಯೊಂದಿಗೆ ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶವಿರುತ್ತದೆ. ಎಲ್ಲಾ ಕೋವಿಡ್-19 ಲಸಿಕಾ ಕೇಂದ್ರಗಳಲ್ಲಿ ಮಾಸ್ಕ್ ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಕೈಗಳ ಸ್ವತ್ಛತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದಲ್ಲದೆ ಲಸಿಕೆಯ ಎರಡನೇ ಡೋಸ್ ಪಡೆಯುವ ಫಲಾನುಭವಿಗಳು ತಾವು ಮೊದಲನೇ ಡೋಸ್ ಪಡೆದ ಅಧಿಕೃತ ಮಾಹಿತಿಯನ್ನು ಹೊಂದಿರಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.