ಚಳ್ಳಕೆರೆ: ಜಿಲ್ಲಾಡಳಿತ ಆರೋಗ್ಯ ಇಲಾಖೆ ಸೇರಿದಂತೆ ಇತರೆ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರಂತರ ಜಾಗೃತಿಯೊಂದಿಗೆ ಲಸಿಕೆ ಹಾಕಲು ಮುಂದಾಗಿದೆ.
ನಗರಸಭೆ ವ್ಯಾಪ್ತಿಯ ಲಿಡ್ಕರ್ ಬಡಾವಣೆಯ ಸನಿಹದಲ್ಲಿ ಸುಮಾರು 80ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಬಹುತೇಕ ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಆದರೆ, ಇವರಿಗೆ ಕೋವಿಡ್ ಅಪಾಯದ ಬಗ್ಗೆ ಸುಳಿವಿದ್ದರೂ ಈ ಬಗ್ಗೆ ತಲೆಕಡಿಸಿಕೊಂಡಿರುವುದಿಲ್ಲ. ಲಸಿಕೆ ಹಾಕಲಿಸಿಕೊಳ್ಳಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದ್ದರು.
ಇವರು ವಿರೋಧಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದು ಪೌರಾಯುಕ್ತ ಪಿ.ಪಾಲಯ್ಯ ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಡಿವೈಎಸ್ಪಿ ಮತ್ತು ಠಾಣಾ ಇನ್ಸ್‌ಪೆಕ್ಟರ್‌ರೊಂದಿಗೆ ಸ್ಥಳಕ್ಕೆ ತೆರಳಿ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಡಿವೈಎಸ್ಪಿ ಕೆ.ವಿ.ಶ್ರೀಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಜನರ ಆರೋಗ್ಯ ಸುಧಾರಣೆ ಬಗ್ಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ನೀವು ನಿರ್ಲಕ್ಷ್ಯ ವಹಿಸುವ ಮೂಲಕ ಕೋವಿಡ್ ರೋಗದ ಭೀತಿಗೆ ಒಳಗಾಗುತ್ತೀರಿ. ನಿಮ್ಮ ರಕ್ಷಣೆಗಾಗಿ ಕಡ್ಡಾಯವಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಠಾಣಾ ಇನ್ಸ್‌ಪೆಕ್ಟರ್ ಜೆ.ಎಸ್ .ತಿಪ್ಪೇಸ್ವಾಮಿ, ನಗರಕ್ಕೆ ಕೇವಲ ಎರಡುಕಿ.ಮೀ ದೂರವಿರುವ ನಿಮಗೆ ಮಾಹಿತಿ ಇಲ್ಲವೆನ್ನುವುದು ಸರಿಯಲ್ಲ. ತಾಲೂಕಿನ ಗಡಿಭಾಗದ ಜನರು ಬಂದು ಲಸಿಕೆ ಪಡೆಯುತ್ತಿದ್ದಾರೆ. ನೀವು ಲಸಿಕೆ ಪಡೆಯದೆ ಸುಮ್ಮನಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಪ್ರಮಾದ ಎದುರಿಸಬೇಕಾದೀತು ಎಂದು ಎಚ್ಚರಿಸಿದರಲ್ಲದೆ, ಮನೆ, ಮನೆಗೂ ತೆರಳಿ ಜನರನ್ನು ಕರೆತಂದು ಲಸಿಕೆ ಕೊಡಿಸಲಾಯಿತು. ಪೌರಾಯುಕ್ತ ಪಿ.ಪಾಲಯ್ಯ, ಲಸಿಕೆ ಪಡೆದರೆ ಅಪಾಯವಾದೀತು ಎಂಬ ಭಯದಿಂದ ಯಾರೂ ಸಹ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ನಮ್ಮ ಅಧಿ ಕಾರಿಗಳು ಮತ್ತು ಸಿಬ್ಬಂದಿ ಮಾಹಿತಿ ನೀಡಿದರೂ ಈ ಬಗ್ಗೆ ಯಾರೂ ಆಸಕ್ತಿ ತೋರಲಿಲ್ಲ. ಆದರೆ, ನಮಗೆ ನಿಮ್ಮೆಲ್ಲರ ಜೀವನದ ಬಗ್ಗೆ ಚಿಂತನೆಇದ್ದು, ಪೊಲೀಸರ ಸಹಾಯದಿಂದ ಲಸಿಕೆ ನೀಡುತ್ತಿದ್ದೇವೆ ಎಂದರು.
ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ್, ಇಲ್ಲಿನ ಜನರಿಗೆ ಉಚಿತವಾಗಿ ರೇಷನ್ ವಿತರಣೆ ಮಾಡಿದರು. ಹೊನ್ನೂರುಸ್ವಾಮಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಕಿರಿಯ ಆರೋಗ್ಯ ನಿರೀಕ್ಷಕರಾದ ದಾದಾಪೀರ್, ಗಣೇಶ್ ಮುಂತಾದವರು ಇದ್ದರು.