Advertisement

ರಜೆ ಬಂತು ರಜೆ

07:00 AM Apr 06, 2018 | |

ಅಂತೂ ಇಂತೂ ಪರೀಕ್ಷೆಗಳು ಮುಗಿದವಲ್ಲಾ. ಎಲ್ಲಿಗಾದರೂ ಹೋಗೋ ಪ್ಲಾನ್‌ ಇದೆಯೇನ್ರೆ”.

Advertisement

“”ಖಂಡಿತಾ ಇದೆ ಕಣೆ, ನಾನಂತೂ ರಜೆ ಬರೋದನ್ನೇ ಕಾಯ್ತಾ ಇದ್ದೆ. ನನ್ನ ಅಜ್ಜಿ , ಮಾವ ಎಲ್ಲ ಆಗಲೇ ಹೇಳಿ ಕಳುಹಿಸಿದ್ದಾರೆ. ರಜೆಯಲ್ಲಿ ಮಕ್ಕಳನ್ನು ಊರಿಗೆ ಕಳುಹಿಸಿ ಕೊಡಿ ಅಂತ. ನಾನೂ, ನನ್ನ ತಮ್ಮ ಹೋಗ್ತಾ ಇದ್ದೇವೆ”. “”ನೀನೆಲ್ಲಿಗೆ ಹೋಗ್ತಿದ್ದಿ” ಇನ್ನೊಬ್ಬ ಗೆಳತಿಯನ್ನು ಕೇಳಿದ್ದಕ್ಕೆ ಅವಳು, “”ನನ್ನ ದೊಡ್ಡಮ್ಮನ ಮನೆಗೆ ಹೋಗ್ತಾ ಇದ್ದೀನಿ. ಅಲ್ಲಿ ನನ್ನ ಜೊತೆಯವರೇ ಆದ ಅವರ ಮಕ್ಕಳ ಜೊತೆ ಚೆನ್ನಾಗಿ ಆಟಆಡುತ್ತಾ ಗಮ್ಮತ್ತು ಮಾಡಬಹುದು” ಎಂದು ಹೇಳಿದಳು.

“”ಅದು ಸರಿ, ನಮ್ಮನ್ನೆಲ್ಲಾ ಕೇಳ್ತಾ ಇದ್ಯಲ್ಲಾ. ನಿನ್ನ ಪ್ರೋಗ್ರಾಂ ಏನು?” “”ನಾವಂತೂ ನನ್ನ ಅಜ್ಜನ ಮನೆಗೆ ಹೋಗ್ತಿವಿ. ಅದು ಮಂಗಳೂರಿನ ಹತ್ರ ಒಂದು ಹಳ್ಳಿ. ಆದರೂ ನಮಗಂತೂ ಅಲ್ಲಿ ಹೋಗೋದೆಂದರೆ ತುಂಬಾ ಇಷ್ಟಾನಪ್ಪ” ನಾನು ಹೇಳಿದ್ದೆ.
ಆದರೆ ಇನ್ನೊಬ್ಬಳು ಗೆಳತಿಯಿಂದ ಬಂದ ಉತ್ತರ ಕೇಳಿ ನಮಗೆಲ್ಲಾ ಬಹಳ ಬೇಸರವಾಯಿತು. ಅವಳು ಹೇಳಿದ್ದು, “”ನನಗೆ ಅಂತ ಹೇಳಿಕೊಳ್ಳುವಂಥ ಯಾವ ನೆಂಟರಿಷ್ಟರೂ ಇಲ್ಲ. ಯಾವ ಅಜ್ಜ-ಅಜ್ಜಿಯರೂ ನಮ್ಮನ್ನು ಕರೆಯುವುದಿಲ್ಲ” ಕಣ್ಣಿನಲ್ಲಿ ನೀರು ತುಂಬಿಕೊಂಡರು.

ಗೆಳತಿಯ ಮಾತಿನಿಂದ ಬೇಜಾರಾದರೂ ಅದನ್ನೆಲ್ಲಾ ಗಮನಿಸುವಷ್ಟು ತಾಳ್ಮೆ ಯಾರಲ್ಲಿಯೂ ಇರಲಿಲ್ಲ. ನಮ್ಮ ಮನಸ್ಸುಗಳು ನಾಗಾಲೋಟದಿಂದ ಎಲ್ಲಿಗೋ ಹಾರಿಹೋಗಿದ್ದವು. ಪರೀಕ್ಷೆ ಯಾವಾಗ ಮುಗಿಯುತ್ತೋ, ನಾವು ಯಾವಾಗ ಹೋಗುತ್ತೇವೋ ಅಂತ ಜಾತಕಪಕ್ಷಿಗಳಂತೆ ಕಾಯುತ್ತಿದ್ದೆವು.
.
ಹೌದು, ಕೆಲವಾರು ದಶಕಗಳ ಹಿಂದಿನ ವಿಷಯ. ನಾವೆಲ್ಲ ಚಿಕ್ಕಪುಟ್ಟ ಕ್ಲಾಸುಗಳಲ್ಲಿ ಕಲಿಯುತ್ತಿದ್ದಾಗಿನ ಕಾಲ. ಪರೀಕ್ಷೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿರಲೇ ಇಲ್ಲ. ಶಾಲೆಯಲ್ಲಿ ಹೇಳಿಕೊಟ್ಟ ಪಾಠಗಳನ್ನು ಓದಿ, ಪರೀಕ್ಷೆ ಬರೆದರೆ ಆಯ್ತು. ಫ‌ಲಿತಾಂಶ ಬರುವವರೆಗೂ ಅದರ ಚಿಂತೆಯೇ ಇರುತ್ತಿರಲಿಲ್ಲ. ರಜಾದಿನಗಳನ್ನು ಅಜ್ಜಿ , ಮಾವನ ಮನೆಯಲ್ಲಿ ಕಳೆದು ಶಾಲೆ ಶುರುವಾಗುವ ಎರಡು ದಿನಗಳ ಮೊದಲೇ ಖಾಲಿ ಮನಸ್ಸಿನಿಂದ ಬರುತ್ತಿದ್ದೆವು.

ನಮ್ಮ ಅಜ್ಜಿಮನೆ ಹಳ್ಳಿಯಲ್ಲಿದ್ದರೂ ಅಲ್ಲಿ ನಮಗೊಂದು ಆಕರ್ಷಣೆಯಿತ್ತು. ಬೆಳಗಿನ ಜಾವ ಐದೂವರೆ ಗಂಟೆಗೆಲ್ಲಾ ಎದ್ದು ತೋಟಕ್ಕೆ ಓಡುತ್ತಿದ್ದೆವು. ರಂಜೆ ಮರದಿಂದ ಬೀಳುತ್ತಿದ್ದ ಹೂವುಗಳನ್ನು ಹೆಕ್ಕಿ ತಂದು ಬಾಳೆಯ ನಾರಿನಲ್ಲಿ ಪೋಣಿಸಿ, ದೇವರ ಪೂಜೆಗೆ ಕೊಟ್ಟು ನಂತರ ನಾವು ಮುಡಿದುಕೊಳ್ಳುತ್ತಿದ್ದೆವು. ಅದರ ಪರಿಮಳ ಎರಡು-ಮೂರು ದಿನಗಳವರೆಗೂ ಕೂದಲಿನಲ್ಲಿ ಘಮಘಮಿಸುತ್ತಿತ್ತು. “”ಅಷ್ಟು ಬೇಗ ಹೋಗಬೇಡಿರೋ, ಕಾಲು ಕೆಳಗೆ ಏನಿದ್ದರೂ ಗೊತ್ತಾಗಲ್ಲ. ಏನಾದರೂ ಹಾವು ಹಲ್ಲಿ ಕಚ್ಚಿದರೆ ಏನ್‌ ಗತಿ” ಎಂಬ ಅಜ್ಜಿಯ ಬುದ್ಧಿಮಾತು ನಮ್ಮ ಕಿವಿಗೆ ತಲುಪುತ್ತಲೇ ಇರಲಿಲ್ಲ.

Advertisement

ಬೆಳಗಾಗುತ್ತಿದ್ದಂತೆ ಹತ್ತಿರದಲ್ಲೇ ಇದ್ದ ಒಂದು ಸಣ್ಣ ತೋಡಿನಲ್ಲಿ ನಮ್ಮ ಸ್ನಾನ. ನೀರಿನಲ್ಲಿ ಕಾಲುಬಿಟ್ಟು ಗಂಟೆಗಟ್ಟಳೆ ಕುಳಿತಿರುವಾಗ ಚಿಕ್ಕಪುಟ್ಟ ಮೀನುಗಳು ಕಾಲಿನ ಬಳಿ ಬಂದು ಕಚ್ಚುತ್ತಿದ್ದರೆ ಸ್ವಲ್ಪ ಹೆದರಿಕೆಯಾದರೂ ಮಜಾ ಇರುತ್ತಿತ್ತು. ಅತ್ತೆ ತೊಳೆಯಲೆಂದು ತಂದಿಟ್ಟ ಅನ್ನದ ಪಾತ್ರೆಗೆ ಮೀನುಗಳು ಮುತ್ತಿಗೆ ಹಾಕಿದಾಗ ಅದರ ಮುಚ್ಚಳ ಮುಚ್ಚಿ , ಕೆಲವಾರು ಕ್ಷಣಗಳ ಕಾಲ ಅವುಗಳನ್ನು ಬಂಧಿಸಿ, ಮತ್ತೆ ನೀರಿಗೆ ಬಿಟ್ಟುಬಿಡುತ್ತಿದ್ದೆವು.

ಸ್ನಾನ ಮುಗಿಸುತ್ತಿದ್ದಂತೆ ಮನೆಯಿಂದ “ಕೂ’ ಎಂಬ ಕರೆ ಕೇಳಿಬರುತ್ತಿತ್ತು. ಬಿಸಿಬಿಸಿ ಕುಸಲಕ್ಕಿಯ ಗಂಜಿ, ಎರಡು ಚಮಚ ತುಪ್ಪ , ಮಿಡಿ ಉಪ್ಪಿನಕಾಯಿಯ ಜೊತೆ ಊಟಮಾಡುತ್ತಿದ್ದರೆ ಎಷ್ಟು ತಿಂದೆವೋ ನಮಗೇ ಗೊತ್ತಾಗುತ್ತಿರಲಿಲ್ಲ. ಹತ್ತು ಗಂಟೆಯಾಗುತ್ತಿದ್ದಂತೆ ಸುತ್ತಮುತ್ತಲಿನ ಮಕ್ಕಳ ಜೊತೆ ನಮ್ಮ ಸೈನ್ಯ ಗೇರುಮರದ ಬುಡದಲ್ಲಿರು ತ್ತಿತ್ತು. ತೃಪ್ತಿಯಾಗುವಷ್ಟು ಹಣ್ಣುಗಳನ್ನು ತಿಂದು, ಒಂದು ಕಡೆ ದರಲೆ ಗಳನ್ನು ಒಟ್ಟು ಮಾಡಿ, ಬೆಂಕಿ ಹಾಕಿ ಬೀಜಗಳನ್ನು ಸುಟ್ಟು ತಿನ್ನುತ್ತಿದ್ದೆವು.

ಫೋನು, ಟಿ.ವಿ., ಕಂಪ್ಯೂಟರ್‌ಗಳ ಹೆಸರುಗಳನ್ನೇ ಕೇಳಿರದ, ನೋಡಿರದ ಕಾಲದಲ್ಲಿ ನಾವು ಇದ್ದೇವೆಂದರೆ ನಮ್ಮನ್ನೇ ಜಿವುಟಿ ನೋಡಬೇಕೆನಿಸುತ್ತದೆ. ಆಟಗಳಾಡಿ ಸುಸ್ತಾಗಿದ್ದ ನಾವು ಎಂಟು ಗಂಟೆಗೆ ನಿದ್ರೆಗೆ ಜಾರುತ್ತಿದ್ದೆವು. ಹಳ್ಳಿಗಳಲ್ಲಿ ವಿದ್ಯುತ್‌ ದೀಪಗಳೂ ಇರುತ್ತಿರಲಿಲ್ಲ. ಇಂಥ ಗಡಿಬಿಡಿಯಲ್ಲಿ ನಮಗೆ ದಿನ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಶಾಲೆ ಶುರುವಾಗಲು ಒಂದು ವಾರದ ಮುಂಚೆ ಅಮ್ಮನ ಕಾಗದ ಬಂದಾಗಲೇ ನಾವು ಈ ಲೋಕಕ್ಕೆ ಮರಳುತ್ತಿದ್ದುದು. ಭಾರವಾದ ಹೃದಯ ಹೊತ್ತು ಅಳುತ್ತಳುತ್ತಾ ಅಜ್ಜಿಯ ಮನೆಯನ್ನು ಬಿಟ್ಟು ಹಿಂದಿರುಗುತ್ತಿದ್ದೆವು.
.
ಈಗಿನ ಮಕ್ಕಳಿಗೆ ಹೋಲಿಸಿದರೆ ನಮ್ಮದು ತೃಪ್ತಜೀವನ. ಅಷ್ಟೇ ಮುಗ್ಧರೂ ಕೂಡ. ಯಾವುದೇ ಹೆಚ್ಚಿನ ಬೇಡಿಕೆಗಳೂ ಇರುತ್ತಿರಲಿಲ್ಲ. ಈಗ ಕಾಲ ಬದಲಾಗಿದೆಯೋ ಅಥವಾ ಮಕ್ಕಳ ಮನಸ್ಸನ್ನು ಐಷಾರಾಮಿ ವಸ್ತುಗಳು ಬದಲಾಯಿಸಿಬಿಟ್ಟಿದೆಯೋ ಒಂದೂ ಅರ್ಥವಾಗುವುದಿಲ್ಲ. ನೋಡಿದ್ದೆಲ್ಲಾ ಬೇಕೆಂಬ ಕೊಳ್ಳುಬಾಕತನ ಅವರದು.

ಮಕ್ಕಳು ಶಾಲೆಗೆ ಸೇರಿದ ದಿನದಿಂದಲೇ ಒತ್ತಡದ ಬದುಕಿಗೆ ಒಗ್ಗಿಕೊಂಡು ಬಿಟ್ಟಿರುತ್ತಾರೆ. ಪರೀಕ್ಷೆ ನಂತರದ ದಿನಗಳನ್ನು ಹೇಗೆ ಕಳೆಯುವುದಪ್ಪಾ ಎಂಬ ಆತಂಕ ಪೋಷಕರಿಗೆ. ಏಕೆಂದರೆ ಅಷ್ಟು ಪುಟ್ಟ ಮಕ್ಕಳ ಬಾಯಲ್ಲಿ ಬರುವ ಒಂದೇ ಪದ ಬೋರ್‌. ಅವರಿಗೆ ಹಳ್ಳಿಗಳಿಗೆ ಕಾಲಿಡಲು ಇಷ್ಟವಿಲ್ಲ. ಕಂಪ್ಯೂಟರ್‌, ಮೊಬೈಲ್‌ಗ‌ಳಿಲ್ಲದ ಜೀವನವೇ ಅವರಿಗೆ ಗೊತ್ತಿಲ್ಲ. ಹಳ್ಳಿಗಳಲ್ಲಿರುವ ವಿದ್ಯುತ್‌ ಕಡಿತ ಇವರಿಗೆ ಭಾರಿ ಸಮಸ್ಯೆ.

ಅಜ್ಜ-ಅಜ್ಜಿಯರ ಸಂಪರ್ಕವಂತೂ ಹೆಚ್ಚಿನ ಮಕ್ಕಳಿಗೆ ಇರುವುದಿಲ್ಲ. ನ್ಯೂಕ್ಲಿಯರ್‌ ಕುಟುಂಬಗಳಲ್ಲಿ ಬೆಳೆದ ಮಕ್ಕಳಿಗೆ ಒಂಟಿ ಜೀವನವೇ ಬಹಳ ಇಷ್ಟ. ಸಹಜೀವನಕ್ಕೆ ಹೊಂದಿಕೊಳ್ಳಲು ಅವರು ಸಿದ್ಧರಿರುವುದಿಲ್ಲ. ದೊಡ್ಡಪ್ಪ , ಚಿಕ್ಕಪ್ಪ, ಅತ್ತೆ, ಮಾವ ಇವರುಗಳ ಸಂಬಂಧವೂ ಅಷ್ಟಕ್ಕಷ್ಟೇ. ಸಂಬಂಧವನ್ನು ಮುಂದುವರಿಸುವ ಇಷ್ಟವೂ ಇರುವುದಿಲ್ಲ. ರಜೆ ಶುರುವಾದೊಡನೆ ಅವರ ಅವಿನಾಭಾವ ಸಂಬಂಧ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ಗ‌ಳ ಜೊತೆ ಶುರುವಾಗಿಬಿಡುತ್ತದೆ. ದಿನಚರಿ ಪ್ರಾರಂಭವಾಗುವುದೇ ಇವುಗಳ ಒಡನಾಟದಲ್ಲಿ.

ಹಾಗಾಗಿ ಮಕ್ಕಳ ಮೇಲಿನ ಒತ್ತಡವನ್ನು ತಗ್ಗಿಸಲು, ಅವರನ್ನು ಮುಖ್ಯವಾಹಿನಿಗೆ ಕರೆತರಲು ಬೇಸಿಗೆ ಶಿಬಿರಗಳು ಶುರುವಾಗುತ್ತಿವೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮಕ್ಕಳನ್ನು ಅಲ್ಲಿಗೆ ಸೇರಿಸುವ ಪೋಷಕರ ಸಂಖ್ಯೆ ಸಾಲುಗಟ್ಟಿ ನಿಂತಿದೆ. ಶುದ್ಧಗಾಳಿ, ಹಚ್ಚಹಸುರಿನ ಪ್ರಕೃತಿ, ಅಜ್ಜ , ಅಜ್ಜಿ , ಅತ್ತೆ, ಮಾವಂದಿರ ಒಡನಾಟ ಎಲ್ಲಿ, ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುವ ಬೇಸಿಗೆ ಶಿಬಿರಗಳೆಲ್ಲಿ?

ಇನ್ನಾದರೂ ಪೋಷಕರು ಮಕ್ಕಳಿಗೆ ಸಂಬಂಧಗಳು, ಸಂಸ್ಕಾರ, ಹಳ್ಳಿಯ ವಾತಾವರಣದ ಬಗ್ಗೆ ತಿಳಿವಳಿಕೆ ಕೊಟ್ಟು , ಎಲ್ಲರೊಡನೆ ಬೆರೆತು ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವವನ್ನು ಬೆಳೆಸಬೇಕು. ನಶಿಸಿಹೋಗುತ್ತಿರುವ ಸಂಬಂಧಗಳ ಪರಿಚಯ ಮಾಡಿಸಿಕೊಡಬೇಕು. ಕಂಪ್ಯೂಟರ್‌, ಮೊಬೈಲ್‌ಗ‌ಳೇ ಜೀವನವಲ್ಲ. ಅದರ ಹೊರತಾಗಿಯೂ ಒಂದು ಪ್ರಪಂಚವಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಉಸಿರುಗಟ್ಟಿಸುವ ವಾತಾವರಣದಿಂದ ಮುಕ್ತ ಪರಿಸರಕ್ಕೆ ಮಕ್ಕಳನ್ನು ಕರೆತರುವ ಪ್ರಯತ್ನ ಮಾಡಬೇಕು. ಹೀಗಾದಾಗ ಮಾತ್ರ ನಮ್ಮ ಸಂಸ್ಕೃತಿಯನ್ನು ನಾವು ಉಳಿಸಿಕೊಳ್ಳಲು ಸಾಧ್ಯ.

ಪುಷ್ಪಾ  ಎನ್‌.ಕೆ. ರಾವ್‌

ಫೊಟೊ : ಬಡಗುಪೇಟೆ ಸಂತೋಷ್‌ ಪೈ

Advertisement

Udayavani is now on Telegram. Click here to join our channel and stay updated with the latest news.

Next