Advertisement
ಹಳ್ಳಿ-ನಗರಗಳ ಭೇದವಿಲ್ಲದೆ ಇತ್ತೀಚೆಗೆ ವೀಕೆಂಡ್‌ಗಳು ರಂಗೇರುತ್ತಿವೆ. ಔಟಿಂಗ್, ಹೋಟೆಲ…, ಸಿನಿಮಾ, ಸಂಗೀತ ಕಾರ್ಯಕ್ರಮ… ಹೀಗೆ ಒಂದಲ್ಲಾ ಒಂದು ಮನರಂಜನೆಯನ್ನು ಅಪೇಕ್ಷಿಸುವುದು ತಪ್ಪಲ್ಲ. ಖುಷಿ ಅನ್ನುವುದು ಬರೀ ವೀಕೆಂಡಿನ ಮ್ಯಾಟರ್ ಅಲ್ಲದಿದ್ದರೂ ವಾರವಿಡೀ ಜಂಜಾಟಗಳಲ್ಲಿ ಮುಳುಗುವ ಜೀವಗಳಿಗೆ ವಾರಾಂತ್ಯದಲ್ಲಿ ಒಂದು ಕಳೆ ಬರೋದು ವೀಕೆಂಡ್‌ನಿಂದಲೇ. ಇದು ಬರೀ ದುಡಿಯುವ ವರ್ಗಕ್ಕಷ್ಟೇ ಸೀಮಿತವಲ್ಲ, ವಿದ್ಯಾರ್ಥಿಗಳೂ ವೀಕೆಂಡ್‌ಗಾಗಿ ಕಾಯುವವರೇ. ವಿದ್ಯಾರ್ಥಿಯೋ, ನೌಕರನೋ ವೀಕೆಂಡ್ ಮೋಜಿಗೆ ಕಾಸಂತೂ ಬೇಕು. ದುಡಿಯುವವರಾದರೆ ಸ್ವಂತ ದುಡಿಮೆಯಿಂದ ಪಾರ್ಟಿ ಮಾಡುತ್ತಾರೆ. ಅದೇ ವಿದ್ಯಾರ್ಥಿ ವರ್ಗವಾದರೆ ಪಾಕೆಟ್ ಮನಿಯಿಂದಲೋ ಸ್ನೇಹಿತರ ಕೃಪಾಕಟಾಕ್ಷದಿಂದಲೋ ಪಾರ್ಟಿ ಮಾಡಬೇಕಾದ ಅನಿವಾರ್ಯತೆ. ಪಾರ್ಟಿಯಂತೂ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ.
ಅಪ್ಪ- ಅಮ್ಮಂದಿರ ಕೈಗೆ ವೇತನ ಸಿಗುವ ದಿನವೇ ಮಕ್ಕಳ ಪಾಲಿಗೂ “ಸಂಬಳದ ದಿನ’. ಅಪ್ಪನಿಗೆ ಇರುವಂತೆ ಮಕ್ಕಳಿಗೂ ಕೂಡ ತಿಂಗಳಲ್ಲಿ ಒಂದು ಪಾಕೆಟ್ ಮನಿ ದಿನವಿದೆ. ಹೇಳಿ ಕೇಳಿ ನಾವು ಕಾಲೇಜು ವಿದ್ಯಾರ್ಥಿಗಳು. ಓದಲಿಕ್ಕೆಂದು ಊರು, ಮನೆ ಬಿಟ್ಟು ಬಂದಿರುತ್ತೇವೆ. ಅಪ್ಪನಿಂದ ಬರುವ ಮನಿ ಆರ್ಡರ್ ಅಥವಾ ಬ್ಯಾಂಕ್ ಅಕೌಂಟ್‌ಗೆ ಬೀಳುವ ಮೊತ್ತ ರೂಮ್ ಬಾಡಿಗೆಗೆ, ಎರಡು ಕೆಜಿ ಅಕ್ಕಿಗೆ, ಇಲ್ಲವೇ ಹಾಸ್ಟೆಲ್ ಮೆಸ್ ಬಿಲ್‌ಗೆ ಮುಗಿದು ಹೋಗುತ್ತದೆ. ಊರಿಂದ ಹೊರಡುವಾಗ ಅವ್ವ ಸೆರಗಿನ ತುದಿಯಿಂದ ಬಿಚ್ಚಿ ಕೊಟ್ಟ ನೂರು ಮಡಿಕೆಯ ಗಾಂಧಿ ನೋಟನ್ನು ವಾರದ ಸಿನಿಮಾ ನುಂಗಿ ಹಾಕಿರುತ್ತದೆ. ಉಳಿದ ಚೂರು ಪಾರು, ಸಂಜೆ ಹೊತ್ತಿನ ರಸ್ತೆ ಬದಿಯ ಘಾಟು ತಿನಿಸಿಗೆ. ವಾರ ಮುಗಿಯುವ ಮೊದಲೇ ಜೇಬು ಸ್ವತ್ಛವಾಗಿರುತ್ತದೆ. ಎಷ್ಟರ ಮಟ್ಟಿಗೆ ಸ್ವತ್ಛವೆಂದರೆ ಮಿನಿಮಂ ಬ್ಯಾಲೆನ್ಸ್ ಬಿಡದ ಬ್ಯಾಂಕ್ ಖಾತೆ ಅವರಿಗೆ ಮತ್ತೆ ಮತ್ತೆ ಮೆಸೇಜ… ಮಾಡಿ ಉಗಿಯುತ್ತಲೇ ಇರುತ್ತದೆ. ಕಾಲೇಜಿನ ದಿನಗಳಲ್ಲಿ ಕರೆನ್ಸಿ ಸಿಸ್ಟಮ್ ಮಾತ್ರವಲ್ಲದೆ, ಬಾರ್ಟರ್ ಸಿಸ್ಟಮ್‌ಗಳನ್ನೂ ಅನುಸರಿಸುವುದಿದೆ. ಅಂದರೆ ಸಾಲ ಕೊಡು- ತಗೊಳ್ಳುವಿಕೆಯ ನಡುವೆ, ವಸ್ತುಗಳ ವಿನಿಮಯವೂ ನಡೆಯುತ್ತದೆ. ಹಿಂದಿನ ದಿನಗಳಲ್ಲಿ ಪಕ್ಕದ ಮನೆಯಿಂದ ಒಂದು ಕಪ್ ಸಕ್ಕರೆ ತಗೊಂಡು, ಕಪ್ ವಾಪಸ್ ಕೊಡುವಾಗ ಮತ್ತಿನ್ಯಾವುದಾದರೂ ಪದಾರ್ಥ ಕೊಡುತ್ತಿದ್ದ ಹಾಗೆ ಒಬ್ಬ ಸ್ನೇಹಿತ ಫುಲ್‌ಮೀಲ್ಸ್ ಕೊಡಿಸಿದರೆ, ಇನ್ನೊಬ್ಬ ಸಿನಿಮಾ ಟಿಕೆಟ್ ಸ್ಪಾನ್ಸರ್ ಮಾಡುವುದು, ಹೀಗೆ… ವೀಕೆಂಡ್ ಬರುತ್ತಿದ್ದಂತೆಯೇ ಜೇಬಿಗೆ ಕೈ ಹಾಕಿಕೊಂಡಾಗ ಖಾಲಿ ಖಾಲಿ! ಹಾಗಂತ ವಿದ್ಯಾರ್ಥಿಗಳ ಪಾಲಿನ ಖುಷಿಯೂ ಖಾಲೀನಾ? ಖಂಡಿತವಾಗಲೂ ಇಲ್ಲ! ದುಡ್ಡು ಖಾಲಿಯಾದ ತಕ್ಷಣ ಜೇಬಿನ ತುಂಬಾ ಕನಸುಗಳು ಬಂದು ಕೂರುತ್ತವೆ. ಕಾಲೇಜ… ಕ್ಯಾಂಪಸ್‌ನ ನಗು ಬಂದು ಕೂರುತ್ತದೆ. ಚೆನ್ನಾಗಿ ಓದುವ ಆಸೆ ಬಂದು ಕೂರುತ್ತದೆ. ಪುಕ್ಸಟ್ಟೆ ದಕ್ಕುವ ಸಾಕಷ್ಟು ತರ್ಲೆಗಳು ಬಂದು ಕೂರುತ್ತವೆ. ಕಾಲೇಜಿನ ತಿರುವಿನಲ್ಲಿ ನಕ್ಕು ಹೋದ ಆ ಗುಂಗುರು ಕೂದಲಿನ ಹುಡುಗಿಯ ಆಪ್ತ ನಗು ನೆನಪಾಗಿರುತ್ತದೆ. ಸ್ನೇಹಿತರ ಮೂಟೆಗಟ್ಟಲೆಯ ಜೋಕುಗಳು, ಆಟಗಳು, ಒಡನಾಟಗಳು ಎಲ್ಲವೂ ತುಂಬುತ್ತವೆ.
Related Articles
ಖರ್ಚಿಗೆ ಹಣವಿಲ್ಲವೆಂದು ವಿದ್ಯಾರ್ಥಿ ತಲೆ ಮೇಲೆ ಕೈ ಹೊತ್ತು ಕೂರುವುದಿಲ್ಲ. ದುಡ್ಡೇ ಎಲ್ಲವೂ ಅಲ್ಲ ಎನ್ನುವಂತೆ ಜೀವನದ ಚಿಕ್ಕಪುಟ್ಟ ಸಂತಸಗಳನ್ನು ಆತ ಅನುಭವಿಸುತ್ತಾನೆ. ಮುಂದೆ ಇವೇ ಮಧುರ ನೆನಪುಗಳಾಗಿ ಶಾಶ್ವತವಾಗಿ ಅವನೊಂದಿಗೂ ಉಳಿದುಬಿಡುತ್ತದೆ. ಬದುಕಿನುದ್ದಕ್ಕೂ ಕೈ ಹಿಡಿದು ಮುನ್ನಡೆಸುತ್ತದೆ. ಆ ವಯಸ್ಸು, ಗೆಳೆಯರು, ಓದು, ಬರಹ, ಆಟ, ತರ್ಲೆಗಳು ಸಂಭ್ರಮಿಸಲು ಇರುವ ತೆಕ್ಕೆಗಟ್ಟಲೆ ಕಾರಣಗಳು, ದುಡ್ಡನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿಬಿಡುತ್ತವೆ. ಇಲ್ಲಿ ಖುಷಿಗಷ್ಟೇ ಮೊದಲ ಸ್ಥಾನ. ಹಣವಿಲ್ಲದೆ ವಾರಾಂತ್ಯ ಕಳೆಯುವವರನ್ನು ನೋಡಿ ಕೆಲವರು, ಅಯ್ಯೋ ಪಾಪವೆನ್ನುವಂತೆ ಲೊಚಗುಟ್ಟುತ್ತಾರೆ. ಆದರೆ ಮಜಾ ಅಂದರೆ, ದುಡ್ಡಿಲ್ಲದವರಿಗೆ ಅಂಥವರನ್ನು ನೋಡಿ ಪಾಪ ಅನಿಸುತ್ತದೆ. ದುಡ್ಡಿದ್ದರೂ ಒಳ್ಳೆಯ ಟೇಸ್ಟ್ ಇಲ್ಲವಲ್ಲ ಎಂದು ಮರುಕ ಪಡುತ್ತಾರೆ. ಹಣವಿಲ್ಲದೆಯೂ ಮೂಟೆಗಟ್ಟಲೆ ಖುಷಿ ಬಾಚುವ ನಾವೆಷ್ಟು ಶ್ರೀಮಂತರೆಂದು ಅರಿಯದೇ ಹೋದರಲ್ಲಾ ಅನಿಸುತ್ತದೆ.
Advertisement
ಓದು ಮುಗಿಸಿ ನೌಕರಿಯೊಂದನ್ನು ಗಿಟ್ಟಿಸಿಕೊಂಡು ದುಡಿಯಲು ತೊಡಗಿದಾಗ ವಿದ್ಯಾರ್ಥಿ ದುಡ್ಡಿನ ಮುಖ ನೋಡಲು ಪ್ರಾರಂಭಿಸುತ್ತಾನೆ. ಮೊದ ಮೊದಲು ಅದೆಂಥ ಸಡಗರ ಅಂತೀರಿ. ಬರ್ತಾ ಬರ್ತಾ ದುಡ್ಡಿಗಿಂತ ಇನ್ನೆಲ್ಲೋ ಖುಷಿ ಇದೆ ಅನಿಸುತ್ತೆ. ಆಗ ನೆನಪಾಗುವುದೇ ಕಾಲೇಜಿನ ದಿನಗಳು. ಆ ದಿನಗಳಲ್ಲಿ ಎಷ್ಟೊಂದು ಖುಷಿ ಇತ್ತು ಅನಿಸುತ್ತದೆ. ಹತ್ತು ರೂಪಾಯಿ ಜೇಬಿನಲ್ಲಿದ್ದರೂ ನಾವೇ ರಾಜರು ಅಂದುಕೊಂಡ ದಿನಗಳವು. ಅಲ್ಲಿ ಎಲ್ಲದಕ್ಕೂ ಲಿಮಿಟ್, ಆದ್ರೆ ಖುಷಿಗೆ ಮಾತ್ರ ಲಿಮಿಟ್ ಇರುತ್ತಿರಲಿಲ್ಲ. ಅಂದಿನ ದಿನಗಳ ಮುಂದೆ ದುಡ್ಡಿನ ದಿನಗಳೇ ಸಪ್ಪೆ ಎನಿಸಿಬಿಡುತ್ತದೆ. ಬದುಕಿನ ಸಂಕಟಗಳು ಆರಂಭವಾದಾಗ ಕಾಲೇಜಿನ ಖಾಲಿ ಜೇಬಿನ ದಿನಗಳನ್ನು ನೆನಪಿಸಿಕೊಂಡು ಖುಷಿ ಪಡುತ್ತೇವೆ. ಅದೇ ನೋಡಿ ಖಾಲಿ ಜೀಬಿನ ದಿನಗಳಿರುವ ತಾಕತ್ತು!
ಸದಾಶಿವ್ ಸೊರಟೂರು