ದೇವದುರ್ಗ: ಪಟ್ಟಣದ ಮಿನಿ ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಒಂದು ವರ್ಷದಿಂದ ಕಚೇರಿಗೆ ಕಾಯಂ ಅಧಿಕಾರಿ ಇಲ್ಲ. ಹೀಗಾಗಿ 700ಕ್ಕೂ ಹೆಚ್ಚು ತಿದ್ದುಪಡಿ, 1500ಕ್ಕೂ ಹೆಚ್ಚು ವಿವಿಧ ಅರ್ಜಿಗಳ ವಿಲೇವಾರಿ ಬಾಕಿ ಉಳಿದಿದ್ದು, ರೈತರು, ಜನಸಾಮಾನ್ಯರು ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ.
ಖಾಲಿ ಹುದ್ದೆಗಳು: ಇಲ್ಲಿನ ಸರ್ವೇ ಕಚೇರಿಯಲ್ಲಿ ಭೂದಾಲೆಗಳ ಸಹಾಯಕ ನಿರ್ದೇಶಕ ಹುದ್ದೆ ವರ್ಷದಿಂದ ಖಾಲಿ ಇದ್ದು, ಸಿಂಧನೂರು ಅಧಿಕಾರಿಗೆ ಪ್ರಭಾರ ವಹಿಸಲಾಗಿದೆ. ಎಸ್.ಎ.ಎಸ್. ಅಧಿಧೀಕ್ಷಕರು, ಪರಿವೀಕ್ಷಕರು, ಮೂವರು ಭೂ ಮಾಪಕರು, ಆರು ಜನ ಪರಿಚಾರಕ ಹುದ್ದೆಗಳು ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕ ಹುದ್ದೆ ಭರ್ತಿ ಇದ್ದು, ವಿನೋದ ಎಂಬ ಅಧಿಕಾರಿ ರಾಯಚೂರಿಗೆ ಎರವಲು ಹೋಗಿದ್ದಾರೆ. ಪರಿವೀಕ್ಷಕರೊಬ್ಬರು ಎರವಲು ಹೋದ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಕಡತಗಳು ಸಕಾಲಕ್ಕೆ ವಿಲೇವಾರಿ ಆಗುತ್ತಿಲ್ಲ.
ಅರ್ಜಿ ವಿಲೇವಾರಿ ವಿಳಂಬ: ಪಟ್ಟಣ ಸೇರಿ ತಾಲೂಕಿನಾದ್ಯಂತ ನೂರಾರು ರೈತರು, ಜನಸಾಮಾನ್ಯರು ವಿವಿಧ ಕೆಲಸಕ್ಕಾಗಿ ಸಲ್ಲಿಸಿದ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ತಿದ್ದುಪಡಿಗಾಗಿ 700 ಅರ್ಜಿಗಳು ಬಂದಿವೆ. ಸರ್ವೇ, ಹದ್ದುಬಸ್ತು, 11/ ಇ ಖರೀದಿ ವಿಭಾಗ, ತಾತ್ಕಲಿಕ ಪೋಡಿ ಸೇರಿ ಇತರೆ 1500 ಅರ್ಜಿಗಳು ಸಲ್ಲಿಕೆ ಆಗಿದ್ದು, ವಿಲೇವಾರಿ ಆಗಿಲ್ಲ. ಹೀಗಾಗಿ ನಿತ್ಯ ನೂರಾರು ರೈತರು ಕಚೇರಿಗೆ ಅಲೆಯಬೇಕಾಗಿದೆ.
ಪೋಡಿ ಮುಕ್ತ ಗ್ರಾಮಗಳು: ರಾಜ್ಯ ಸರಕಾರ ಪೋಡಿ ಮುಕ್ತ ಗ್ರಾಮ ಘೋಷಣೆಗೆ ಮುಂದಾಗಿದ್ದು, ತಾಲೂಕಿನಲ್ಲಿ 35 ಗ್ರಾಮಗಳನ್ನು ಪೋಡಿ ಮುಕ್ತ ಮಾಡಲಾಗಿದೆ. ಸರ್ವೇ ಇಲಾಖೆ ಅ ಧಿಕಾರಿಗಳು ಪೋಡಿ ಮುಕ್ತವೆಂದು ಆಯ್ಕೆಯಾದ ಗ್ರಾಮಗಳಿಗೆ ಹೋಗಿ ಪಹಣಿಯಲ್ಲಿರುವ ಸಮಸ್ಯವನ್ನು ಸ್ಥಳದಲ್ಲಿ ಬಗೆಹರಿಸಿ ಉಚಿತ ಪೋಡಿ ಮಾಡಬೇಕಾಗಿದೆ. ಗಲಗ, ಮುಂಡರಗಿ, ಹಿರೇರಾಯಕುಂಪಿ, ಹೇಮನೂರು, ಚಿಕ್ಕಬೂದೂರು, ಕೋತಿಗುಡ್ಡ, ಕೊಪ್ಪರ, ಕ್ಯಾದಿಗೇರಾ, ಚಿಂತಲಕುಂಟಿ, ಸೋಮನಮರಡಿ, ಕೊಳ್ಳೂರು, ನಾಗೋಲಿ ಸೇರಿ 35 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳೆಂದು ಆಯ್ಕೆ ಮಾಡಲಾಗಿದೆ. ಮೇಲಾಧಿಕಾರಿಗಳ ಸೂಚನೆಯಂತೆ 188 ಗ್ರಾಮಗಳಲ್ಲಿ ಪೋಡಿ ಮುಕ್ತ ಕೆಲಸ ನಡೆಯಲಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ.
ದಲ್ಲಾಳಿಗಳ ಹಾವಳಿ: ಮಿನಿ ವಿಧಾನಸೌಧ ಅಕ್ಕಪಕ್ಕದಲ್ಲಿ ದಲ್ಲಾಳಿಗಳ ಹಾವಳಿ ಮಿತಿ ಮೀರಿದೆ. ಅದರಲ್ಲೂ ಸರ್ವೇ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ದಲ್ಲಾಳಿಗಳೇ ಹೆಚ್ಚಾಗಿದ್ದಾರೆ. ಗ್ರಾಮೀಣ ಪ್ರದೇಶದಿಂದ ಆಗಮಿಸುವ ಅವಿದ್ಯಾವಂತ ರೈತರು ಕಚೇರಿಗೆ ಹೋಗುತ್ತಿದ್ದಂತೆ ದಲ್ಲಾಳಿಗಳು ಏನಪ್ಪ ನಿಮ್ಮ ಕೆಲಸ ಎಂದು ವಿಚಾರಿಸಿ ಅವರಿಂದ ನೂರಾರು ರೂ.ನಲ್ಲಿ ಆಗುವ ಕೆಲಸಕ್ಕೆ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ. ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಶಾಸಕರ ಎದುರೇ ಸರ್ವೇ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ಬಗ್ಗೆ ಗಮನಕ್ಕಿದೆ ಎಂದು ಹೇಳಿದ ಶಾಸಕರು, ಇಲ್ಲಿವರೆಗೆ ಚುರುಕು ಮುಟ್ಟಿಸುವ ಕೆಲಸ ಮಾಡಿಲ್ಲ ಎಂದು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಗೋಪಾಳಪುರ ಆರೋಪಿಸಿದ್ದಾರೆ.
ವೇತನವಿಲ್ಲ: ಸರ್ವೇ ಇಲಾಖೆಯಲ್ಲಿ ಖಾಸಗಿ ಏಜೆನ್ಸಿ ಮೂಲಕ ಗುತ್ತಿಗೆ ಆಧಾರದ ಮೇಲೆ 10 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಇವರಿಗೆ ವೇತನ ಪಾವತಿ ಆಗಿಲ್ಲ ಎನ್ನಲಾಗಿದೆ. ಏಜೆನ್ಸಿ ಮಾಲೀಕರು ಅಧಿಕಾರಿಗಳಿಗೆ ವೇತನ ಸಮಸ್ಯೆ ಮುಂದಿಟ್ಟರು ಇಂದು-ನಾಳೆ ಎನ್ನುವ ಭರವಸೆಗೆ ಬಹುತೇಕರು ಬೇಸತ್ತು ಹೋಗಿದ್ದಾರೆ.
16 ಜನ ಲೈಸನ್ಸ್ ಸರ್ವೇಯರ್: ಭೂ ದಾಖಲೆಗಳ ಕಚೇರಿಯಲ್ಲಿ 16 ಜನ ಲೈಸನ್ಸ್ ಸರ್ವೇಯರ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಬಡ ರೈತರ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡದೇ ಸತಾಯಿಸುತ್ತಾರೆ. ಆಂಧ್ರ ಮೂಲದ ರೈತರಿಗೆ, ಶ್ರೀಮಂತ ರೈತರ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿವೆ. ಇದಕ್ಕೆ ಶಾಸಕರು, ಮೇಲಾಧಿಕಾರಿಗಳು, ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ರೈತ ಭೀಮಪ್ಪ, ರವಿಕುಮಾರ ಆಗ್ರಹಿಸಿದ್ದಾರೆ.
-ನಾಗರಾಜ ತೇಲ್ಕರ್