Advertisement

ದಶಕದ ಬಳಿಕ ಖಾಲಿ ಹುದ್ದೆಗಳ ಭರ್ತಿ

07:18 AM Jan 03, 2019 | |

ಬೆಂಗಳೂರು: ಬಿಬಿಎಂಪಿಯ ಆಡಳಿತ ಯಂತ್ರಕ್ಕೆ ವೇಗ ನೀಡಲು ಮುಂದಾಗಿರುವ ಪಾಲಿಕೆ, ದಶಕದ ಬಳಿಕ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.

Advertisement

ರಾಜ್ಯ ಸರ್ಕಾರ 2008ರಲ್ಲಿ 110 ಹಳ್ಳಿಗಳನ್ನು ಸೇರಿಸಿ ಪಾಲಿಕೆಯ ವಿಸ್ತೀರ್ಣವನ್ನು 250 ಚದರ ಮೀಟರ್‌ಗಳಿಂದ 800 ಚದರ ಮೀಟರ್‌ಗಳಿಗೆ ಹೆಚ್ಚಿಸಿತ್ತು. ಆದರೆ, ಪಾಲಿಕೆಗೆ ಹೆಚ್ಚುವರಿಯಾಗಿ ಹುದ್ದೆಗಳನ್ನು ಮಂಜೂರು ಮಾಡಿರಲಿಲ್ಲ. ಇದರೊಂದಿಗೆ ಸದ್ಯ ಪಾಲಿಕೆಗೆ ಮಂಜೂರಾಗಿರುವ ಹುದ್ದೆಗಳಲ್ಲಿಯೂ ಶೇ.50ಕ್ಕಿಂತ ಹೆಚ್ಚಿನ ಹುದ್ದೆಗಳು ಭರ್ತಿಯಾಗಿಲ್ಲ.

ಇದರಿಂದಾಗಿ ಆಡಳಿತಾತ್ಮಕ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಪಾಲಿಕೆಗೆ
ಸವಾಲಿನ ಕೆಲಸವಾಗಿದೆ. ಜತೆಗೆ ಹಾಲಿ ಪಾಲಿಕೆ ನೌಕರರು ಒತ್ತಡದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸರ್ಕಾರ ದಿಂದ ಪಾಲಿಕೆಗೆ ಒಟ್ಟಾರೆ ಯಾಗಿ 17,391 ಹುದ್ದೆಗಳು ಮಂಜೂರಾಗಿದ್ದರೂ, ಆ ಪೈಕಿ 10 ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಹಲವು ವರ್ಷಗಳಿಂದ ಖಾಲಿಯಿವೆ. ಅದರಲ್ಲಿಯೂ ಪ್ರಮುಖವಾಗಿ ಸಾರ್ವಜನಿಕರಿಗೆ ಸೇವೆ ಒದಗಿಸುವ ಆರೋಗ್ಯ, ಕಾಮಗಾರಿ, ಸಾಮಾನ್ಯ ಆಡಳಿತ, ಶಿಕ್ಷಣ ವಿಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಖಾಲಿ ಹುದ್ದೆಗಳಿರುವುದು ಆಡಳಿತದ ಮೇಲೆ ದುಷ್ಪರಿಣಾಮ
ಬೀರುತ್ತಿದೆ ಎಂಬ ಆರೋಪಗಳು 

ಕೇಳಿಬಂದಿದ್ದವು. ಇದರಿಂದ ಎಚ್ಚೆತ್ತುಕೊಂಡಿರುವ ಪಾಲಿಕೆಯ ಆಡಳಿತ ವಿಭಾಗವು ಮೊದಲ ಹಂತದಲ್ಲಿ 17 ವಿಭಾಗಳಲ್ಲಿನ 867 ಹುದ್ದೆಗಳನ್ನು ಭರ್ತಿ ಮಾಡಿಕೊಡುವಂತೆ ಐಐಎಸ್‌ಸಿ ಮೊರೆ ಹೋಗಿತ್ತು. ಆದರೆ, ಐಐಎಸ್‌ಸಿ ಮೂಲಕ ನೇಮಕಾತಿ
ಮಾಡಿಕೊಳ್ಳಲು ಅವಕಾಶವಿಲ್ಲದ ಕಾರಣ ಇದೀಗ ಪಾಲಿಕೆಯಿಂದ ಕೆಪಿಎಸ್‌ ಸಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಈ ಕುರಿತು ಕೆಪಿಎಸ್‌ಸಿಯಿಂದ ನೇಮಕಾತಿ ಆದೇಶ ಹೊರಬೀಳುವ ಸಾಧ್ಯತೆಯಿದೆ.

Advertisement

ಹೊರೆಯಾಗುತ್ತಿವೆ ಹೆಚ್ಚುವರಿ ಹುದ್ದೆಗಳು: ಪಾಲಿಕೆಯಲ್ಲಿ ಖಾಲಿಯಾಗುತ್ತಿರುವ ಪ್ರಮುಖ ಹುದ್ದೆಗಳು ಕಾಲಕಾಲಕ್ಕೆ ಭರ್ತಿಯಾಗದ ಹಿನ್ನೆಲೆಯಲ್ಲಿ ದರ್ಜೆ-1 ಹುದ್ದೆಯ ಅಧಿಕಾರಿಗಳಿಗೆ ತಮ್ಮ ವಿಭಾಗ ದೊಂದಿಗೆ ಹೆಚ್ಚುವರಿಯಾಗಿ ಮತ್ತೂಂದು ವಿಭಾಗದ ಜವಾಬ್ದಾರಿ ವಹಿಸಲಾಗಿದೆ. ಎರಡು ಮೂರು ವಿಭಾಗಗಳ ಕಾರ್ಯಗಳನ್ನು ನಿರ್ವಹಿಸಲಾಗದೆ ಅಧಿಕಾರಿಗಳು ಹೆಚ್ಚುವರಿ ಜವಾಬ್ದಾರಿ ಬೇಡವೆಂದು ಆಯುಕ್ತರಿಗೆ ಪತ್ರ ಬರೆದ ಉದಾಹರಣೆಯೂ ಇವೆ.

10 ವಲಯಗಳು ಹೆಸರಿಗೆ ಮಾತ್ರ: ಪಾಲಿಕೆಯ ಆಡಳಿತಾತ್ಮಕ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲಕ್ಕಾಗಿ ಹಿಂದಿನ ಸರ್ಕಾರ ಪಾಲಿಕೆಯ ಎಂಟು ವಲಯಗಳನ್ನು ಹತ್ತು ವಲಯಗಳಾಗಿ ವಿಂಗಡಿಸಿ ಆದೇಶ ಹೊರಡಿಸಿದೆ. ಆದರೆ, ಈವರೆಗೆ ಎರಡು ಹೊಸ ವಲಯಗಳಿಗೆ ಅಗತ್ಯವಾದ ಕಚೇರಿ, ಸಿಬ್ಬಂದಿ, ಅಧಿಕಾರಿಗಳನ್ನು ನಿಯೋಜಿಸಿಲ್ಲ. ಒಂದು ವೇಳೆ ಎರಡು ವಲಯಗಳು ಕಾರ್ಯಾರಂಭ ಮಾಡಿ ಎಂಟು ವಲಯಗಳಲ್ಲಿನ ಸಿಬ್ಬಂದಿಯನ್ನೇ ಅಲ್ಲಿಗೆ ನಿಯೋಜಿಸಿದರೆ ಆಡಳಿತ ಯಂತ್ರದ ಕಾರ್ಯಕ್ಷಮತೆ ಕುಸಿಯುತ್ತದೆ ಎಂಬುದು ತಜ್ಞರ ಅಭಿಮತ. 

ಬಿಬಿಎಂಪಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಪಾಲಿಕೆಯ 17 ವಿಭಾಗಗಳಲ್ಲಿನ 867 ಹುದ್ದೆಗಳನ್ನು ಭರ್ತಿ ಮಾಡಿಕೊಡುವಂತೆ ಕೆಪಿಎಸ್‌ಸಿ ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನೇಮಕಾತಿ ಪ್ರಕ್ರಿಯೆ ಮಾಡಿಕೊಡಲು ಕೆಪಿಎಸ್‌ಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ನೇಮಕಾತಿ ಆದೇಶ ಹೊರಬೀಳುವ ಸಾಧ್ಯತೆಯಿದೆ.
ರಂದೀಪ್‌, ವಿಶೇಷ ಆಯುಕ್ತರು (ಆಡಳಿತ)

ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next