Advertisement

ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಹುದ್ದೆಗಳ ಕಾರುಬಾರು

01:37 PM May 04, 2022 | Team Udayavani |

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆತು ಹತ್ತು ವರ್ಷ ತುಂಬುತ್ತ ಬಂದಿದೆ. ಆದರೂ, ಆ ಭಾಗದಲ್ಲಿ ಖಾಲಿ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲು ಸಾಧ್ಯವಾಗಿಲ್ಲ.

Advertisement

ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಾದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳು ಅತ್ಯಂತ ಹಿಂದುಳಿದ ಪ್ರದೇಶವೆಂದು ಪರಿಗಣಿಸಿ 2013ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಪ್ರಕಾರ ವಿಶೇಷ ಸ್ಥಾನ ಮಾನ ನೀಡಲಾಗಿದೆ. ಕಳೆದ ಹತ್ತು ವರ್ಷದಲ್ಲಿ ರಾಜ್ಯದಲ್ಲಿ ಪ್ರಮುಖ ಮೂರು ಪಕ್ಷಗಳ ಸರ್ಕಾರಗಳು ಅಧಿಕಾರ ನಡೆಸಿ ದ್ದರೂ, ಖಾಲಿ ಹುದ್ದೆಗಳ ಭರ್ತಿಗೆ ಆದ್ಯತೆ ನೀಡದಿರುವುದು ಆ ಭಾಗದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ. ಖಾಲಿ ಹುದ್ದೆಗಳೆ ಜಾಸ್ತಿ: ಪ್ರಸ್ತುತ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಎ.ಬಿ. ಮತ್ತು ಸಿ ದರ್ಜೆಯ ಸುಮಾರು 56,500 ಹುದ್ದೆಗಳಿದ್ದು, ಅವುಗಳಲ್ಲಿ ನೇರ ನೇಮಕಾತಿಯ ಮೂಲಕ 32,252 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ಅವುಗಳಲ್ಲಿ 13,371 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದ್ದು, ಇನ್ನೂ ಸುಮಾರು 18,549 ಹುದ್ದೆಗಳು ಖಾಲಿ ಇವೆ. ಈಗ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ 6,204 ಹುದ್ದೆಗಳನ್ನು ನೇರ ನೇಮಕಾತಿ ನಡೆಸಲು ಪ್ರಕಟಣೆ ಹೊರಡಿಸಿದೆ.

ಇದರ ಹೊರತಾಗಿಯೂ ಇನ್ನೂ ಸುಮಾರು 12,345 ಹುದ್ದೆಗಳು ಖಾಲಿ ಉಳಿದು ಕೊಂಡಿವೆ. ಕಳೆದ ಮೂರು ವರ್ಷದಿಂದ ರಾಜ್ಯ ಸರ್ಕಾರ ಕೊರೊನಾ ಕಾರಣದಿಂದಾಗಿ ನೇಮಕಾತಿ ತಡೆ ಹಿಡಿದಿತ್ತು. ಈಗ ಮತ್ತೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಆದರೆ, ನೇಮಕಾತಿಗಳಿಗೂ ಹಗರಣಗಳ ಸೋಂಕು ತಗುಲಿದ್ದು, ಆ ಭಾಗದ ಉದ್ಯೋಗಾಕಾಂಕ್ಷಿ ಗಳಿಗೆ ಮತ್ತಷ್ಟು ನಿರಾಸೆಯುಂಟಾಗುವಂತೆ ಮಾಡಿದೆ.

ಮುಂಬಡ್ತಿಯಲ್ಲಿಯೂ ಖಾಲಿ: ನೇರ ನೇಮಕಾತಿ ಯಷ್ಟೇ ಅಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಬಡ್ತಿ ಅಡಿಯಲ್ಲಿಯೂ ಖಾಲಿ ಹುದ್ದೆಗಳ ದರ್ಬಾರು ಮುಂದುವರಿದಿದೆ. 24,197 ಹುದ್ದೆಗಳು ಮುಂಬಡ್ತಿ ಮೂಲಕ ಭರ್ತಿ ಮಾಡಬೇಕಿದ್ದು, ಪ್ರಸ್ತುತ 14,043 ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲಾಗಿದೆ. ಇನ್ನೂ 10,154 ಹುದ್ದೆಗಳು ಖಾಲಿ ಉಳಿದಿದ್ದು, ಈ ಭಾಗದ ಉದ್ಯೋಗಗಳಿಗೆ ಬಡ್ತಿ ಭಾಗ್ಯ ದೊರೆಯದಂತಾಗಿದೆ.

ಅತ್ಯಂತ ಮಹತ್ವದ ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 7659 ಹುದ್ದೆಗಳಲ್ಲಿ ಕೇವಲ 116 ಹುದ್ದೆಗಳನ್ನು ಮಾತ್ರ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿದ್ದು, 6779 ಹುದ್ದೆಗಳು ಖಾಲಿ ಇವೆ. ಮುಂಬಡ್ತಿಯಿಂದ ತುಂಬಬೇಕಿರುವ 3835 ಹುದ್ದೆಗಳಲ್ಲಿ 2488 ಹುದ್ದೆಗಳು ಖಾಲಿ ಉಳಿದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಐಟಿ ಬಿಟಿ ನೇರ ನೇಮಕಾತಿ ಮಾಡಿಕೊಳ್ಳುವ ಪ್ರಯತ್ನವನ್ನೇ ನಡೆಸಿಲ್ಲ.

Advertisement

ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆತರೂ ಈ ಭಾಗದಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡುತ್ತಿಲ್ಲ. ಕಟ್ಟಡ, ರಸ್ತೆ ನಿರ್ಮಾಣಕ್ಕೆ ನೀಡುವ ಆದ್ಯತೆ, ನೇಮಕಾತಿಗೆ ನೀಡದಿರುವುದು ಖಾಲಿ ಹುದ್ದೆಗಳು ಹೆಚ್ಚಾಗಲು ಕಾರಣವಾಗಿದೆ.    -ಭೀಮನಗೌಡ ಪರಗೊಂಡ, ಸಾಮಾಜಿಕ ಕಾರ್ಯಕರ್ತ

● ಶಂಕರ ಪಾಗೋಜಿ

ನೇರ ನೇಮಕಾತಿಯಲ್ಲಿನ ಸ್ಥಿತಿ

ಒಟ್ಟು ಹುದ್ದೆಗಳು – 32352

ನೇಮಕಾತಿಯಾಗಿರುವ ಹುದ್ದೆಗಳು – 13711

ಖಾಲಿ ಹುದ್ದೆಗಳು – 18549

ನೇಮಕಾತಿಗೆ ಪ್ರಸ್ತಾವನೆ – 6204

ಮುಂಬಡ್ತಿಯಲ್ಲಿನ ಸ್ಥಿತಿ

ಒಟ್ಟು ಹುದ್ದೆಗಳು – 24197

ಮುಂಬಡ್ತಿಯಾಗಿರುವ ಹುದ್ದೆಗಳು – 14043

ಖಾಲಿ ಹುದ್ದೆಗಳು – 10154

Advertisement

Udayavani is now on Telegram. Click here to join our channel and stay updated with the latest news.

Next