Advertisement
ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ಪ್ರಸ್ತಾವಿಸಿದ ಹೇಮಲತಾ ನಾಯಕ್, ಇಲಾಖೆಯಲ್ಲಿ ಸಾಕಷ್ಟು ತಾರತಮ್ಯ ನಡೆಯುತ್ತಿದೆ. ಭಡ್ತಿ ನ್ಯಾಯಯುತವಾಗಿ ನಡೆಯುತ್ತಿಲ್ಲ. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪಾಲಿಸುತ್ತಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳ ಹುದ್ದೆಗಳಿಗೆ ಒಂದೇ ಪದನಾಮ ಇದೆ. ಇದರಿಂದ ಆಡಳಿತಾತ್ಮಕ ತೊಂದರೆ ಆಗುತ್ತಿದೆ. ಈ ಬಗ್ಗೆ ನೌಕರರು ಪ್ರತಿಭಟನೆ ನಡೆಸಿದರೂ, ಸರಕಾರ ಸ್ಪಂದಿಸಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾವಿಸಿದಾಗ ಸಮಸ್ಯೆ ಸರಿಪಡಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ, ಏನೂ ಆಗಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಹುದ್ದೆಗಳ ಭಡ್ತಿ ಭೋಂಡಾ, ಭಜ್ಜಿ ತರ ಮಾರಾಟ ಆಗುತ್ತಿವೆ. 3 ಲಕ್ಷಕ್ಕೆ ಬಿಕರಿ ಆಗುತ್ತಿವೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾಕರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಪರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉತ್ತರಿಸಿ, ಸಂಬಂಧಪಟ್ಟ ಸಚಿವರ ಗಮನಕ್ಕೆ ವಿಚಾರ ತಂದು ಸಭೆ ನಡೆಸಲು ಹೇಳುತ್ತೇನೆ ಎಂದು ಭರವಸೆ ನೀಡಿದರು. ಇಲಾಖೆಯ ಸಚಿವರೇ ಉತ್ತರ ಕೊಟ್ಟರೆ ಒಳ್ಳೆಯದಿತ್ತು ಎಂದು ಹೇಮಲತಾ ನಾಯಕ್ ಹೇಳಿದರು. ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಇದೊಂದು ಗಂಭೀರ ವಿಚಾರವಾಗಿದ್ದು, ಇಲಾಖೆಯ ಸಚಿವರೇ ಉತ್ತರಿಸಬೇಕಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಚಿವರು ಸಭಾಪತಿಯವರ ಅನುಮತಿ ಪಡೆದುಕೊಂಡಿದ್ದಾರೆ ಎಂದು ಸಭಾನಾಯಕ ಎನ್.ಎಸ್. ಬೋಸರಾಜ್ ಸಮಜಾಯಿಷಿ ನೀಡಿದರು.