Advertisement

ಹನೂರು ಕ್ಷೇತ್ರ ಬಿಟ್ಟುಕೊಟ್ಟ ವಿ.ಸೋಮಣ್ಣ

12:32 PM Apr 02, 2018 | Team Udayavani |

ಬೆಂಗಳೂರು: ಹನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ವಿಚಾರದಲ್ಲಿ ಎದ್ದಿದ್ದ ಗೊಂದಲಕ್ಕೆ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ತೆರೆ ಎಳೆದಿದ್ದು, “ನಾನು ಹನೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ,’ ಎಂದು ಹೇಳಿದ್ದಾರೆ.

Advertisement

“ಯಡಿಯೂರಪ್ಪ ಅವರ ತೀರ್ಮಾನಕ್ಕೆ ತಲೆಬಾಗಿ ಹನೂರು ಕ್ಷೇತ್ರ ಪರಿಮಳಾ ನಾಗಪ್ಪ ಅವರ ಪುತ್ರ ಪ್ರೀತಮ್‌ಗೆ ಬಿಟ್ಟುಕೊಟ್ಟಿದ್ದೇನೆ. ನನ್ನ ಸ್ಪರ್ಧೆ ಯಾವ ಕ್ಷೇತ್ರದಿಂದ ಎಂಬುದು ಮುಂದಿನ ನಾಲ್ಕು ದಿನಗಳಲ್ಲಿ ಗೊತ್ತಾಗುತ್ತದೆ,’ ಎಂದು ಅವರು ತಿಳಿಸಿದರು. ಈ ನಡುವೆ ಸೋಮಣ್ಣ ಅವರು ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ತಮ್ಮ ನಿವಾಸದಲ್ಲಿ ನಡೆದ ಸಂಧಾನದಲ್ಲಿ ಹನೂರು ಕ್ಷೇತ್ರವನ್ನು ಪರಿಮಳಾ ನಾಗಪ್ಪ ಅವರ ಕುಟುಂಬಕ್ಕೆ ಬಿಟ್ಟುಕೊಡಲು ಸೋಮಣ್ಣ ಅವರನ್ನು ಮನವೊಲಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಆದರೆ, ಸೋಮಣ್ಣ ಅವರು ಟಿಕೆಟ್‌ ತಪ್ಪಿದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

“ಐದು ವರ್ಷಗಳಿಂದ ಅಲ್ಲಿ ಕೆಲಸ ಮಾಡಿದ್ದೇನೆ, ನನಗೆ ಟಿಕೆಟ್‌ ಕೊಡುವುದಿಲ್ಲ ಎಂದರೆ ಹೇಗೆ’ ಎಂದು ಸೋಮಣ್ಣ ಪ್ರಶ್ನಿಸಿದರು ಎಂದು ಹೇಳಲಾಗಿದೆ. ಜತೆಗೆ ಯಡಿಯೂರಪ್ಪ ನಿವಾಸದ ಮುಂದೆಯೇ ತಮ್ಮ ಶಿಷ್ಯ ಶಿವಕುಮಾರ್‌ರನ್ನು ತರಾಟೆಗೆ ತೆಗೆದುಕೊಂಡ ಅವರು, “ನಿಮ್ಮಂಥವರಿಂದಲೇ ನನಗೆ ಹೀಗಾಯಿತು, ಮುಂದಿದೆ ನಿನಗೆ ಮಾರಿ ಹಬ್ಬ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಗಿ ತಿಳಿದುಬಂದಿದೆ.

ವಿ.ಸೋಮಣ್ಣ ಅವರು ಬಯಸಿದ ಕ್ಷೇತ್ರದಲ್ಲಿ ಟಿಕೆಟ್‌ ಸಿಗುತ್ತಿಲ್ಲ. ಹೀಗಾಗಿ, ಬೇಸರಗೊಂಡಿರುವ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪರ್ಕಿಸಿದ್ದು ರಾಜಾಜಿನಗರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೊಡುವುದಾಗಿ ಭರವಸೆ ನೀಡಿದ್ದಾರೆ.

Advertisement

ರಾಜಾಜಿನಗರದಲ್ಲಿ ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿ ಇಲ್ಲದ ಕಾರಣ ಸೋಮಣ್ಣ ಅವರನ್ನು ಸೆಳೆಯಲಾಗಿದೆ  ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಭಾನುವಾರ ತುರ್ತು ಪತ್ರಿಕಾಗೋಷ್ಠಿ ಕರೆದ ಸೋಮಣ್ಣ, ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next