Advertisement
ಆದರೆ ಇಷ್ಟು ದಿನಗಳ ಕಾಲ ಬಿಜೆಪಿಯನ್ನು ಕಾಡಿದ ಸೋಮಣ್ಣ ಅವರ “ತುಮುಲ’ದ ಮರ್ಮವೇನು ? ಯಾರ ಕಾರಣಕ್ಕಾಗಿ ಅವರು ಇಷ್ಟೊಂದು ವ್ಯಾಕುಲಗೊಂಡರು? ಕೊನೆಗೆ ಪಕ್ಷದಲ್ಲೇ ಉಳಿದುಕೊಳ್ಳುವಂತೆ ಮಾಡಿದ ವ್ಯಕ್ತಿಗಳು ಯಾರು? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದ್ದು, ಒಟ್ಟಾರೆಯಾಗಿ ಅವರ ಸ್ಥಿತಿ ಗುರಿ ತಲುಪದ ಬಾಣವಾದಂತಾಗಿದೆ.
ಸೋಮಣ್ಣ ಅವರನ್ನು ಮನವೊಲಿಸುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಒಟ್ಟು ಮೂರು ಬಾರಿ ಸಂಧಾನ ಸಭೆ ನಡೆಸಿದ್ದರು ಎನ್ನಲಾಗಿದೆ. ಚುನಾವಣಾ ಹೊಸ್ತಿಲಲ್ಲಿ ಯಾರೂ ಪಕ್ಷ ತೊರೆಯದಂತೆ ತಡೆಯಬೇಕೆಂಬ ಉದ್ದೇಶ ಸಿಎಂ ಬೊಮ್ಮಾಯಿ ಅವರದ್ದಾಗಿತ್ತು. ಇದೆಲ್ಲ ಬೆಳವಣಿಗೆ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ರಾತ್ರಿ ಸೋಮಣ್ಣ ಅವರಿಗೆ ಕರೆ ಮಾಡಿ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ತಾವು ಪಕ್ಷ ತೊರೆಯುವುದಿಲ್ಲ ಎಂಬ ಭರವಸೆಯನ್ನು ಸೋಮಣ್ಣ ನೀಡಿದ್ದರು ಎನ್ನಲಾಗಿದೆ.
Related Articles
Advertisement
ಇನ್ನೊಂದೆಡೆ ಬಿಜೆಪಿಯಿಂದ ಪುತ್ರನಿಗೆ ಟಿಕೆಟ್ ಗಟ್ಟಿಯಾಗದೇ ಇದ್ದರೂ ಸೋಮಣ್ಣ ಅವರಿಗೆ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ತಪ್ಪಿಸುವುದಿಲ್ಲ ಎಂಬ ಭರವಸೆ ಸಿಕ್ಕಿತ್ತು. ಹೀಗಾಗಿ ಕ್ಷೇತ್ರವನ್ನಾದರೂ ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಕ್ಕ ಸೋಮಣ್ಣ ಬಿಜೆಪಿಯಲ್ಲೇ ಉಳಿಯುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅರುಣ್ ಸೋಮಣ್ಣ ಕಿಡಿಗೋವಿಂದರಾಜನಗರ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅರುಣ್ ಸೋಮಣ್ಣ ಮಾತನಾಡಿರುವ ವಿಡಿಯೋ ವೈರಲ್ ಆಗಿರುವುದು ಈಗ ಬಹಳ ಚರ್ಚೆಗೆ ಗ್ರಾಸವಾಗಿದೆ. ನಮ್ಮ ಪಕ್ಷದಲ್ಲಿ ಹಿರಿಯರೊಬ್ಬರಿದ್ದಾರೆ, ದೊಡ್ಡ ನಾಯಕರು, ಅವರ ಸೀಟನ್ನು ಮಗನಿಗಾಗಿ ತ್ಯಾಗ ಮಾಡಿದ ಬಳಿಕ ಅವರು ಆ ಸೀಟಲ್ಲಿ ಕೂತುಕೊಂಡು ನಾನೇ ನೆಕ್ಟ್ ಲೀಡರ್ ಎಂದು ಹೇಳಿಕೊಂಡು ಇಡೀ ರಾಜ್ಯದಲ್ಲಿ ಓಡಾಡುತ್ತಿದ್ದಾರೆ. ಅವರಿಗೆ ಫೋನ್ ಮಾಡಿದರೆ ಏಕ ವಚನದಲ್ಲಿ ಮಾತನಾಡುತ್ತಾರೆ. ನನಗೂ ಮಾತನಾಡುವುದಕ್ಕೆ ಬರುತ್ತದೆ, ಹಾಗೆಲ್ಲಾ ಮಾತನಾಡಬೇಡಿ ಎಂದು ಹೇಳಿದೆ. ಸರ್ ಮರ್ಯಾದೆ ಕೊಟ್ಟು ಮಾತನಾಡುತ್ತಿದ್ದೇನೆ ಎಂದು ಹೇಳಿರುವುದು ಈಗ ವಿವಾದ ಸೃಷ್ಟಿಸಿದೆ.
ತಮ್ಮ ಆಡಿಯೋ ಭಾಷಣದ ಬಗ್ಗೆ ಸ್ಪಷ್ಟನೆ ನೀಡಿರುವ ಅರುಣ್ ಸೋಮಣ್ಣ, ನಾನು ಬೇಕಾದರೆ ಆ ಮಹಾಪುರುಷನ ಎದುರಿಗೆ ಮಾತನಾಡುತ್ತೇನೆ. ಒಂದು ಚುನಾವಣೆ ಗೆದ್ದರೆ ರಾಜಾಹುಲಿ, ಮರಿ ಹುಲಿಯೆಲ್ಲ ಆಗಿ ಬಿಡುತ್ತಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಾನು ವಿಡಿಯೋದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡಿದ್ದೇನೆ. ಆ ವ್ಯಕ್ತಿ ಪಕ್ಷವಾಗಲು ಸಾಧ್ಯವಿಲ್ಲ. ದೀನ್ ದಯಾಳ್ ಉಪಾಧ್ಯಾಯ, ಶ್ಯಾಮ ಪ್ರಸಾದ್ ಮುಖರ್ಜಿ ಅವರಂಥವರು ಕಟ್ಟಿದ ಪಕ್ಷ ನಮ್ಮದು. ಇವರು ಆಡಿಸಿದಂತೆಲ್ಲ ನಾವು ಆಡಬೇಕಾ ? ನಾನು ನಮ್ಮ ಅಪ್ಪನಿಗಾಗಿ ಪ್ರಾಣ ಕೊಡಲು ಸಿದ್ಧ. ಅವರು ದೇವದುರ್ಗ, ಚಿಂಚೊಳ್ಳಿ ಚುನಾವಣೆ ಗೆಲ್ಲಿಸಿಕೊಂಡು ಬಂದಾಗ ಯಾವ ಮರಿಹುಲಿಯೂ ಇರಲಿಲ್ಲ. ಬಸವಕಲ್ಯಾಣ, ತುಮಕೂರು ಚುನಾವಣೆ ಗೆಲ್ಲಿಸಿದವರು ಸೋಮಣ್ಣ. ಒಂದು ಚುನಾವಣೆ ಗೆಲ್ಲಿಸಿದವರೆಲ್ಲ ಮರಿ ಹುಲಿಯಾಗುತ್ತಾರೆ. ಪಕ್ಷ ಕೊಡುವ ಯಾವುದೇ ಕೆಲಸವನ್ನು ನಾನು ಮಾಡುತ್ತೇನೆ. ಪಕ್ಷದಲ್ಲಿ ಪಾಳೇಗಾರಿಕೆ, ಅಧಿಕಾರ ಹಸ್ತಾಂತರ ಎಲ್ಲ ಮುಗಿದ ಅಧ್ಯಾಯ ಎಂದು ಟೀಕಿಸಿದರು. 2009ರಲ್ಲಿ ನನಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕೊಡಲಿಲ್ಲ. 2013ರಲ್ಲಿ ಆರ್.ಅಶೋಕ ಅವರೇ ಭರವಸೆ ನೀಡಿದ್ದರೂ ಸಾಧ್ಯವಾಗಲಿಲ್ಲ. 2018ರಲ್ಲಿ ಖುದ್ದು ಯಡಿಯೂರಪ್ಪನವರೇ ಕರೆದು ಟಿಕೆಟ್ ಭರವಸೆ ನೀಡಿದ್ದರು. ಹದಿನೈದು ದಿನ ಕ್ಷೇತ್ರದಲ್ಲಿ ಓಡಾಡುವಷ್ಟರಲ್ಲಿ ಒಂದೇ ಮನೆಯಲ್ಲಿ ಇಬ್ಬರಿಗೆ ಟಿಕೆಟ್ ಕೊಡುವುದಿಲ್ಲ ಎಂದರು. ಎಲ್ಲ ಪಕ್ಷದಲ್ಲೂ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಾರೆ. ನನ್ನ ವಿಚಾರದಲ್ಲೂ ಹಾಗೆ ಆಗಿದೆ. ಕೆಲವರು ನನ್ನಿಂದಲೇ ಎಲ್ಲ ಎಂಬ ಮನಃಸ್ಥಿತಿ ಹೊಂದಿದ್ದಾರೆ. ನಾನು ಬಕೆಟ್ ಹಿಡಿದು ಬಂದಿಲ್ಲ. ಸಂಘ-ಸಂಸ್ಥೆ- ನಿಗಮದ ಅಧ್ಯಕ್ಷ ಸ್ಥಾನವನ್ನೂ ಪಡೆದಿಲ್ಲ ಎಂದರು. ಮಗ ತಪ್ಪು ಮಾಡಿದ್ದರೆ ಶಿಸ್ತು ಕ್ರಮ ಕೈಗೊಳ್ಳಿ
ನನ್ನ ಮಗ ಡಾಕ್ಟರ್. ಅವನು ಸ್ವತಂತ್ರವಾಗಿದ್ದಾನೆ. ಅವನಿಗೆ 47 ವರ್ಷ. ಸಣ್ಣ ಮಗು ಅಲ್ಲ. ಅವನಿಗೆ ಟಿಕೆಟ್ ನೀಡುವ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮಗ ಏನೋ ಆಗಬೇಕು ಅನ್ನೋ ಆಸೆ ನನಗಿಲ್ಲ. ನಮ್ಮಪ್ಪ ತಪ್ಪು ಮಾಡಿದ್ದರೂ ತಪ್ಪೇ. ನನ್ನ ಮಗ ಏನಾದರೂ ಪಕ್ಷದ ವಿರುದ್ಧ ನಡೆದುಕೊಂಡರೆ, ಅವನ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿ. ಪಕ್ಷಕ್ಕೆ ನಾನಾಗಲಿ, ನನ್ನ ಪುತ್ರನಾಗಲಿ ಮುಜುಗರ ತರುವುದಿಲ್ಲ ಎಂದು ಸೋಮಣ್ಣ ಹೇಳಿದರು.