Advertisement
“ನಾನೊಬ್ಬ ನಿರ್ದೇಶಕನಾಗಿ ಹೇಳುವುದಾದರೆ, ವಿಕ್ರಮ್‌ನನ್ನು ಈಗಾಗಲೇ ನಿರ್ದೇಶನ ಮಾಡಿದ್ದೇನೆ. ಅವನಲ್ಲಿ ಒಂದು ಶಾರ್ಪ್‌ನೆಸ್ ಲುಕ್ ಕೂಡ ಚೆನ್ನಾಗಿದೆ. ಅವನ ಕೂದಲು ಮುಂದೆ ಬಿಡಬೇಕು. ಅವನಿಗೆ ಕಣ್ಣೇ ಕಾಣಿಸದ ರೀತಿ ಕೂದಲು ಬಿಡಬೇಕು. ಅವನು ಎಷ್ಟು ಗಲೀಜ್ ಆಗಿ ಇರ್ತಾನೋ, ಅಷ್ಟು ಚೆನ್ನಾಗಿ ಕಾಣಾ¤ನೆ. ಸುಮ್ಮನೆ ಅವನಿಗೆ ಮೇಕಪ್ ಮಾಡಿ ಬೆಳ್ಳಗೆ ಮಾಡೋಕೆ ಹೋಗಿ ಕೆಡಿಸಬಾರದು. ಸುಮ್ಮನೆ ಬಿಟ್ಟು ಬಿಡಿ. ಅವನಿಗೆ ಏನೂ ಮಾಡದೆ ಬಿಟ್ಟು ಬಿಡಬೇಕು. ಹಾಗೊಮ್ಮೆ ಬಿಟ್ಟು ನೋಡಿ, ಹಿಂಗೆ ಆ್ಯಕ್ಟ್ ಮಾಡು, ಹಾಗೆ, ಹೀಗೆ ಅಂತ ಹೇಳ್ಳೋಕೆ ಹೋಗಬೇಡಿ. ಅವನು ಮಾಡ್ತಾನೆ. ಅಷ್ಟರ ಮಟ್ಟಿಗೆ ಅವನನ್ನು ನಾನು ತಯಾರು ಮಾಡಿದ್ದೇನೆ’ ಎಂಬುದು ರವಿಚಂದ್ರನ್ ಅವರ ಮಾತು.ಸಾಮಾನ್ಯವಾಗಿ ಮಕ್ಕಳು ಹೀರೋ ಆಗುತ್ತಿದ್ದಾರೆ ಅಂದಾಕ್ಷಣ, ಅವರ ಅಪ್ಪ,ಅಮ್ಮಂದಿರಿಗೆ ಕೊಂಚ ಟೆನ್ಸ್ ನ್ ಕಾಮನ್. ಅಂಥದ್ದೊಂದು ಟೆನ್ಸ್ ನ್ ರವಿಚಂದ್ರನ್ ಅವರಿಗೇನಾದರೂ ಇದೆಯಾ? ಇದಕ್ಕೆ ಉತ್ತರಿಸುವ ರವಿಚಂದ್ರನ್, “ಟೆನ್ಸ್ ನ್ ಅಂದರೆ ಏನು?’ ಹೀಗೆ ಪ್ರಶ್ನಿಸುತ್ತಲೇ, “ನನಗೆ ಯಾವುದೇ ಟೆನ್ಸ್ ನ್ ಇಲ್ಲ. ಟೆನ್ಸ್ ನ್ ಅನ್ನೋದು ನನ್ನ ಡಿಕ್ಷನರಿಯಲ್ಲೇ ಇಲ್ಲ. ಯಾಕೆಂದರೆ, ತಾಯಿ ಗರ್ಭದಲ್ಲಿದ್ದಾಗಲೇ ನನ್ನಮ್ಮ ನಾನು ಬೇಡ ಅಂತ ಪಪ್ಪಾಯಿ ತಿಂದೋರು. ಆ ಸಂದರ್ಭದಲ್ಲೇ ನಾನು ಸುಲಭವಾಗಿ ಹೊರ ಬಂದವನು. ನನಗೆ ಯಾವ ಟೆನ್ಸ್ ನ್ ಹೇಳಿ? ಟೆನ್ಸ್ ನ್ ಏನಿದ್ದರೂ ಮಗನಿಗಿರಬೇಕು ನನಗಲ್ಲ’ ಎಂದು ಹೇಳುವ ರವಿಚಂದ್ರನ್, “ಇಲ್ಲೊಂದು ವಿಷಯ ಸ್ಪಷ್ಟವಾಗಿ ಹೇಳ್ತೀನಿ. ರವಿಚಂದ್ರನ್ ಮಗ ಅಂತ ನೀವು ಯಾವತ್ತೂ ಅಂದುಕೊಳ್ಳುವುದು ಬೇಡ. ನೀವು ಒಬ್ಬ ಹೊಸ ಹೀರೋನನ್ನು ತಯಾರು ಮಾಡಿ ಅಷ್ಟೇ. ಮೊದಲು ಯಾರೇ ಹೊಸ ಪ್ರತಿಭೆಗಳು ಸಿನಿಮಾರಂಗಕ್ಕೆ ಎಂಟ್ರಿಯಾದರೂ, ಅವರನ್ನು ಕಾಮನ್ ಮ್ಯಾನ್ ಅಂದುಕೊಂಡೇ ಸ್ಕ್ರೀನ್ ಮೇಲೆ ತೋರಿಸಬೇಕು. ಸಿನಿಮಾ ಹೊರಬಂದಾಗ, ಅವನು ಹೀರೋ ಆಗಬೇಕು. ಸ್ಟಾರ್ ಅಂತ ಎನಿಸಿಕೊಳ್ಳಬೇಕು. ಹಾಗೆ ಮಾಡೋದು ನಿಮ್ಮ ಕೆಲಸ’ ಎಂದು ಚಿತ್ರತಂಡಕ್ಕೆ ಸಲಹೆ ಕೊಡುತ್ತಾರೆ ರವಿಚಂದ್ರನ್.
ಕನ್ನಡ ಚಿತ್ರರಂಗದ ಬಹುತೇಕ ಹೀರೋಗಳು ಅವರದೇ ಆದ ಒಂದು ಐಡೆಂಟಿಯಿಂದ ಗುರುತಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಆಸೆ ಕೂಡಾ ಅದೇ. ಪ್ರತಿಯೊಬ್ಬ ಹೀರೋನೂ ಅವನದೇ ಆದ ಐಡೆಂಟಿಯೊಂದಿಗೆ ಗುರುತಿಸಿಕೊಳ್ಳಬೇಕು ಎನ್ನುವುದು ಕ್ರೇಜಿಸ್ಟಾರ್ ಆಸೆ. ಈ ಬಗ್ಗೆ ಮಾತನಾಡುವ ಅವರು, “ನನ್ನ ಮಗ ವಿಕ್ರಮ್ ನನಗೆ ಚಿಕ್ಕ ಕೂಸು. ಅವನನ್ನು ನೀವೆಲ್ಲರೂ ಪ್ರೀತಿಯಿಂದ ಸ್ವೀಕಾರ ಮಾಡಿ ಅಷ್ಟೇ. ಈಗಲೇ ಅವನನ್ನು ಎಲ್ಲರೂ ಸೇರಿ ಹೀರೋ ಮಾಡಬೇಡಿ. ಸಿನಿಮಾ ಆದಮೇಲೆ ಹೀರೋ ಮಾಡಿ. ಸಿನಿಮಾ ಹೀರೋ ಅಂತ ಮಾಡೋದು ಒಬ್ಬ ನಿರ್ದೇಶಕರ ಕೆಲಸ. ಮಗ ವಿಕ್ರಮ್ ಈಗ ಹೀರೋ ಅಲ್ಲ, ಒಬ್ಬ ಸಾಮಾನ್ಯ ಹುಡುಗ ಅಷ್ಟೇ. ಸ್ಕ್ರೀನ್ ಮೇಲೆ ಒಬ್ಬ ಸಾಮಾನ್ಯ ಹುಡುಗನ್ನು ತೋರಿಸಬೇಕು. ಅವನಲ್ಲಿ ಪ್ರತಿಭೆ ಇದೆಯಾ, ತಾಕತ್ತು ಇದೆಯಾ ಆಗ ಅವನು ಹೀರೋ ಆಗ್ತಾನೆ, ಸ್ಟಾರ್ ಎನಿಸಿಕೊಳ್ತಾನೆ. ವಿಕ್ರಮ್ ನನ್ನ ಮಗ, ಯಾವತ್ತಿದ್ದರೂ ಅವನು ನನ್ನ ಹೆಗಲ ಮೇಲೆ ಬೆಳೆಯಬೇಕು ಎಂಬ ಆಸೆ ಇದ್ದೇ ಇರುತ್ತೆ. ಆದರೆ, ಆ ಜವಬ್ದಾರಿಯನ್ನು ಈಗ ನಿಮಗೆ ವಹಿಸುತ್ತಿದ್ದೇನೆ. ನಿಮಗೇ ಆ ಜವಾಬ್ದಾರಿ ಜಾಸ್ತಿ ಇದೆ. ನಿಮ್ಮ ಕೈಗೆ ಕೊಟ್ಟಿದ್ದೇನೆ ಹೇಗೆ ಬೆಳೆಸುತ್ತೀರಿ ನೀವೇ ನಿರ್ಧರಿಸಿ. ಇನ್ನು, ಕನ್ನಡದ ಜನರ ಮೇಲೆ ಅಪಾರವಾದ ನಂಬಿಕೆ ನನಗಿದೆ. ಅವರು ಪ್ರೀತಿಯಿಂದ ಸಾಕುತ್ತಾರೆ ಎಂಬ ವಿಶ್ವಾಸವೂ ಇದೆ. ಉಳಿಸಿಕೊಳ್ಳಬೇಕಾಗಿರುವಂತಹ ಜವಾಬ್ದಾರಿ ನಿಮಗಿರಬೇಕು. ನನ್ನ ಮಗನಿಗೂ ಸೇರಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳ್ತೀನಿ. ನನ್ನನ್ನು ಇಷ್ಟು ದಿನ ಹೇಗೆ ಉಳಿಸಿ, ಬೆಳೆಸಿದ್ದೀರೋ, ಹಾಗೆಯೇ, ನನ್ನ ಮಗನನ್ನು ಉಳಿಸಿ, ಬೆಳೆಸುತ್ತೀರಿ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಅವರು. ವಿಕ್ರಮ್ ಅವರನ್ನು ಥಟ್ಟನೆ ನೋಡಿದರೆ, ಹಳೆಯ ಚಿತ್ರಗಳಲ್ಲಿ ಯುವನಟರಾಗಿದ್ದ ರವಿಚಂದ್ರನ್ ಥರಾನೇ ಕಾಣಿಸ್ತಾನೆ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲಾ, ನಿಮಗೆ ಹೇಗನ್ನಿಸುತ್ತೆ? ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ನಗುತ್ತಲೇ, “ಚಾನ್ಸೇ ಇಲ್ಲ. ಇದು ಸಿಂಗಲ್ ಪೀಸ್. ಅವನು ಕೂಡ ಸಿಂಗಲ್ ಪೀಸ್ ಆಗಬೇಕು. ಅವನದೇ ಒಂದು ಐಡೆಂಟಿಟಿ ಪಡೆದುಕೊಳ್ಳಬೇಕು. ರವಿಚಂದ್ರನ್ ಥರಾ ಆಗಬಾರದು’ ಎಂಬ ಕಿವಿಮಾತು ಹೇಳುವ ರವಿಚಂದ್ರನ್, “ಹೀರೋಗಳು ಯಾವತ್ತೂ ಹೀರೋಯಿನ್ ಥರಾ ಇರಬಾರದು. ಹೀರೋಯಿನ್‌ಗೆ ಚೆನ್ನಾಗಿ ತಲೆಬಾಚಿ, ಮೇಕಪ್ ಮಾಡಿ, ಒಳ್ಳೇ ಡ್ರೆಸ್ ಹಾಕಿ ತೋರಿಸಿ. ವಿಕ್ರಮ್‌ನನ್ನು ತೆರೆಯ ಮೇಲೆ ನೋಡಿದರೆ, ಯಾರೋ, ಇವ್ನು, ನಮ್ಮ ಹುಡುಗನ ಥರಾನೇ ಇದ್ದಾನೆ ಅನ್ನಬೇಕು. ಆ ರೀತಿ ಕಾಣಿಸಬೇಕು’ ಎನ್ನುವುದು ರವಿಚಂದ್ರನ್ ಮಾತು.
Related Articles
ನೂರಾರು ಕನಸು ಹೊತ್ತು ಬರುವ ಹೊಸಬರಿಗೆ ಕಿವಿಮಾತು ಹೇಳಿದ ರವಿಚಂದ್ರನ್, “ಮೊದಲು ಸಿನಿಮಾ ಮಾಡಬೇಕು ಅಂತ ಇಲ್ಲಿಗೆ ಬರುವವರಿಗೆ ಶ್ರದ್ಧೆ ಇರಬೇಕು, ಭಕ್ತಿ ಮೂಡಬೇಕು. ನನ್ನ ಮಕ್ಕಳಿಗೆ ನಾನು ಆ ಮಾತನ್ನು ಹೇಳುವುದಿಲ್ಲ. ಹೇಳಿಕೊಟ್ಟೂ ಇಲ್ಲ. ಯಾಕೆಂದರೆ, ಅದು ಬ್ಲಿಡ್‌ನಲ್ಲೇ ಇದೆ. ಅವರು ನನ್ನ ಜೊತೆ ಇದ್ದಾರೆಂದ ಮೇಲೆ, ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ ಮತ್ತು ಭಕ್ತಿ ಇದ್ದೇ ಇರುತ್ತದೆ. ಚಿತ್ರಗಳಲ್ಲಿ ಫೈಯರ್ ಇರಬೇಕು. ಹಾಗೆಯೇ, ಹೀರೋ ಆಗುವವನ ಮಾತಲ್ಲಿ, ನಡತೆಯಲ್ಲಿ, ನಡೆಯಲ್ಲಿ ಆ ಫೈಯರ್ ಬೇಕು. “ತ್ರಿವಿಕಮ’ ಟೀಸರ್‌ನಲ್ಲಿ ಅಂಥದ್ದೊಂದು ಫೈಯರ್ ಇದೆ. ಅದು ಸಿನಿಮಾದಲ್ಲೂ ಕಾಣಬೇಕು. ಸಿನಿಮಾದಲ್ಲಿದ್ದರೆ ತಾನಾಗಿಯೇ ಜ್ವಾಲೆ ಉರಿಯುತ್ತೆ. ಅದನ್ನು ಚೆನ್ನಾಗಿ ಉರಿಸಿ, ಬೆಳೆಸಿ, ಬೆಳೆಯಿರಿ. ಮೊದಲು ನೀವು ನನ್ನನ್ನು ಖುಷಿಪಡಿಸಿದರೆ, ಎಲ್ಲರನ್ನೂ ಖುಷಿಪಡಿಸಿದಂತೆ’ ಎಂದು ನಿರ್ದೇಶಕರಿಗೆ ಹೇಳಿ ಸುಮ್ಮನಾದರು ರವಿಚಂದ್ರನ್.
Advertisement
– ವಿಜಯ್ ಭರಮಸಾಗರ