ಇಲ್ಲಿಯವರೆಗೆ ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ಸ್ಪರ್ಧಿಗಳ ಪ್ರತಿಭೆಯನ್ನು ಆಧರಿಸಿ ” ಜಡ್ಜ್ ಮೆಂಟ್’ ಕೊಡುವುದನ್ನು ಬಹುತೇಕರು ನೋಡಿರುತ್ತೀರಿ. ಕಿರುತೆರೆಯಲ್ಲಿ ತೀರ್ಪುಗಾರನಾಗಿ ಜಡ್ಜ್ ಮೆಂಟ್ ಕೊಟ್ಟಿದ್ದ ರವಿಚಂದ್ರನ್, ಈಗ ಬಿಗ್‌ಸ್ಕ್ರೀನ್‌ನಲ್ಲಿ ಹೊಸದೊಂದು ಜಡ್ಜ್ ಮೆಂಟ್ ಕೊಡಲು ತಯಾರಾಗುತ್ತಿದ್ದಾರೆ. ಹೌದು, ರವಿಚಂದ್ರನ್ ಅಭಿನಯದ ಹೊಸ ಸಿನಿಮಾಕ್ಕೆ “ದಿ ಜಡ್ಜ್ ಮೆಂಟ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗಷ್ಟೇ ಈ ಸಿನಿಮಾ ಅದ್ಧೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದೆ.
ಇನ್ನು ಸಿನಿಮಾದ ಹೆಸರೇ ಹೇಳುವಂತೆ “ದಿ ಜಡ್ಜ್ ಮೆಂಟ್’ ಕಾನೂನು ವ್ಯವಸ್ಥೆಯ ಸುತ್ತ ನಡೆಯುವ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಕನ್ನಡದಲ್ಲಿ ಅಪರೂಪ ಎಂದೇ ಹೇಳಲಾಗುತ್ತಿರುವ ಲೀಗಲ್ ಥ್ರಿಲ್ಲರ್ ಶೈಲಿಯ ಸಿನಿಮಾದಲ್ಲಿ ಮೊದಲ ಬಾರಿಗೆ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಈ ಹಿಂದೆ “ಅಮೃತ್ ಅಪಾರ್ಟ್ ಮೆಂಟ್’ ಸಿನಿಮಾವನ್ನು ನಿರ್ದೇಶಿಸಿದ್ದ ಗುರುರಾಜ ಬಿ. ಕುಲಕರ್ಣಿ (ನಾಡಗೌಡ) “ದಿ ಜಡ್ಜ್ ಮೆಂಟ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ತಮ್ಮ ಹೊಸ ಸಿನಿಮಾ “ದಿ ಜಡ್ಜ್ ಮೆಂಟ್’ ಬಗ್ಗೆ ಮಾತನಾಡುವ ನಟ ರವಿಚಂದ್ರನ್, “ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಮ್ಮ ಲೀಗಲ್ ಸಿಸ್ಟಂನಲ್ಲಿರುವ ಒಂದಷ್ಟು ಥ್ರಿಲ್ಲರ್ ಎಲಿಮೆಂಟ್ಸ್ ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ನಿರ್ದೇಶಕರು ನನ್ನನ್ನು ಮುಂದಿಟ್ಟುಕೊಂಡು, ಅವರು ಹಿಂದೆಯಿದ್ದು ಹೊಸಥರದ ಸಿನಿಮಾವನ್ನು ಮಾಡಲು ಹೊರಟಿದ್ದಾರೆ. ಹೊಸಥರದ ಕಥೆಯ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಈ ಪ್ರಯತ್ನದಲ್ಲಿ ನಿರ್ದೇಶಕರು ಮತ್ತು ಇಡೀ ಚಿತ್ರತಂಡ ಯಶಸ್ವಿಯಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಹೂರ್ತದ ವೇಳೆ ಮಾತನಾಡಿದ ನಿರ್ದೇಶಕ ಗುರುರಾಜ ಕುಲಕರ್ಣಿ, “ಇದೊಂದು ಲೀಗಲ್ ಥ್ರಿಲ್ಲರ್ ಶೈಲಿಯ ಸಿನಿಮಾ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯುವ ಕೆಲ ಬೆಳವಣಿಗೆಗಳು ಮತ್ತು ಬದಲಾವಣೆಗಳ ಸುತ್ತ ಇಡೀ ಸಿನಿಮಾ ನಡೆಯುತ್ತದೆ. ಕನ್ನಡದಲ್ಲಿ ಇದೊಂದು ಅಪರೂಪದ ಪ್ರಯತ್ನ. ಸಾಕಷ್ಟು ಥ್ರಿಲ್ಲಿಂಗ್ ಅಂಶಗಳ ಜೊತೆ ಒಂದು ಮೆಸೇಜ್ ಕೂಡ ಸಿನಿಮಾದಲ್ಲಿದೆ’ ಎಂದರು.
“ದಿ ಜಡ್ಜ್ ಮೆಂಟ್’ ಸಿನಿಮಾದಲ್ಲಿ ನಟ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಉಳಿದಂತೆ ದಿಗಂತ್, ಲಕ್ಷ್ಮೀ ಗೋಪಾಲಸ್ವಾಮಿ, ಧನ್ಯಾ ರಾಮಕುಮಾರ್, ಟಿ. ಎಸ್ ನಾಗಾಭರಣ, ರೂಪಾ ರಾಯಪ್ಪ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರಾಜೇಂದ್ರ ಕಾರಂತ್, ಕೃಷ್ಣ ಹೆಬ್ಟಾಳೆ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಈ ಹಿಂದೆ “ಆ್ಯಕ್ಸಿಡೆಂಟ್’, “ಲಾಸ್ಟ್‌ಬಸ್’, “ಅಮೃತ್ ಅಪಾರ್ಟ್ ಮೆಂಟ್’ ಸಿನಿಮಾಗಳನ್ನು ನಿರ್ಮಿಸಿದ್ದ “ಜಿ 9 ಕಮ್ಯುನಿಕೇಶನ್ ಮೀಡಿಯಾ ಆ್ಯಂಡ್ ಎಂಟರ್ ಟೈನ್ಮೆಂಟ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಏಪ್ರಿಲ್ 24ರಿಂದ “ದಿ ಜಡ್ಜ್ಮೆಂಟ್’ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಸುಮಾರು 40 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಬಹುತೇಕ ಚಿತ್ರೀಕರಣ ನಡೆಯಲಿದೆ.