Advertisement

ಶಾಂತಿ ಕದಡಿದವರಿಗೆ ನೋಟಿಸ್‌ ನೀಡಿಲ್ಲ : ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಆಕ್ರೋಶ

04:31 PM Mar 27, 2022 | Team Udayavani |

ಕೋಲಾರ: ಶಾಂತಿ, ಸುವ್ಯವಸ್ಥೆ ಗಮನದಲ್ಲಿಟ್ಟು ಕೊಂಡು ಎಚ್ಚರಿಕೆ ವಹಿಸಬೇಕಾಗಿತ್ತು. ಜಿಲ್ಲಾಡಳಿತವೇ ಶಾಸಕರ ಸಭೆ ಕರೆದು ಈ ಸಂಬಂಧ ಚರ್ಚಿಸಿ ಸಲಹೆ ಕೇಳಬಹುದಾಗಿತ್ತು. ಶಾಂತಿ ಸಭೆಯನ್ನು ನಡೆಸಬಹುದಾಗಿತ್ತು. ಆದರೆ, ಶಾಂತಿ ಕದಡುವ ಪ್ರಯತ್ನ ನಡೆಸಿದವರಿಗೆ ನೋಟಿಸ್‌ ನೀಡುವ ಗೋಜಿಗೂ ಹೋಗಲಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿ.ಆರ್‌. ಸುದರ್ಶನ್‌ ದೂರಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಮುನಿಸ್ವಾಮಿ ಮುಳಬಾಗಿಲಿನಲ್ಲಿ ಮಾಡಿರುವ ಪ್ರಚೋದಕ ಭಾಷಣ ಹಾಗೂ ಜಿಲ್ಲಾಡಳಿತ ಗಡಿಯಾರ ಗೋಪುರದಲ್ಲಿ
ರಾಷ್ಟ್ರಧ್ವಜ ಹಾರಿಸಿದ ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ, ರಾಷ್ಟ್ರಧ್ವಜ ಹಾರಿಸುವುದಕ್ಕೆ ಅದರದೆ ಆದ ನೀತಿ ಸಂಹಿತೆ ಇರುತ್ತದೆ. ಇದು ಅಧಿಕಾರಿಗಳಿಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದರು.

ಎಂ.ಬಿ.ಪಾಟೀಲ್‌ ಅಧಿಕಾರ ಸ್ವೀಕಾರ: ಪ್ರದೇಶ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಮಾ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಲಿದ್ದು, ಜಿಲ್ಲೆಯಿಂದ ಪಕ್ಷದ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಮಾಜಿ, ಹಾಲಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸದಸ್ಯತ್ವ ಅಭಿಯಾನ: ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು, ರಾಜಕಾರಣದಲ್ಲಿ ಆಸಕ್ತಿ ಇರುವವರು ಡಿಜಿಟಲ್‌
ಸದಸ್ಯತ್ವ ಸ್ವೀಕರಿಸಬಹುದು ಎಂದು ತಿಳಿಸಿ, ಇದಕ್ಕಾಗಿ ಎನ್ರೊಲರ್ ನೇಮಕ ಮಾಡಿದ್ದು, ಅವರು ಆ ನೋಂದಣಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಪ್ರಜಾ ಪ್ರಭುತ್ವ ಸದೃಢಗೊಳ್ಳಲು ವಿರೋಧ ಪಕ್ಷವೂ ಸದೃಢವಾಗಿರಬೇಕು. ಸದಸ್ಯತ್ವ ಹೆಚ್ಚು ಮಾಡಿದವರಿಗೆ ಪಕ್ಷ ದಲ್ಲಿ ಉತ್ತಮ ನಾಯಕತ್ವ ಲಭಿಸಲಿದೆ ಎಂಬುದನ್ನು ಹೇಳ ಬಹುದು. ಆದರೆ, ಕೆಲವು ಕಡೆ ಆಮಿಷ ತೋರಲಾಗುತ್ತಿದೆ ಎಂಬುದು ತಮ್ಮ ಗಮನಕ್ಕೆ ಬಂದಿಲ್ಲ ಎಂದರು.

ಇದನ್ನೂ ಓದಿ :ಬರಡು ಭೂಮಿಯಲ್ಲಿ ಬಂಗಾರದ ಸ್ಟ್ರಾಬೆರಿ ಬೆಳೆ : ಉತ್ತಮ ಇಳುವರಿ ಪಡೆದು ಮಾದರಿಯಾದ ರೈತ 

Advertisement

ಪಕ್ಷದ ಹಿತ ಮುಖ್ಯ: ನಗರಸಭೆ ಉಪಾಧ್ಯಕ್ಷರ ಕುರಿತು ಅವಿಶ್ವಾಸ ಮಂಡನೆ ಕುರಿತಂತೆ ಈವರೆಗೂ ಪಕ್ಷದ ಗಮನಕ್ಕೆ ತಂದಿರಲಿಲ್ಲ, ಈಗ ತಂದಿದ್ದಾರೆ. ಈ ಸಂಬಂಧ ಪಕ್ಷದ ಎಲ್ಲ ನಗರಸಭಾ ಸದಸ್ಯರ ಸಭೆ ನಡೆಸಿ ಮಾತನಾಡಿದ್ದೇನೆ. ಈ ಸಂಬಂಧ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ, ಶಾಸಕ ಕೆ.ಆರ್‌. ರಮೇಶ್‌ಕುಮಾರ್‌, ಎಂಎಲ್‌ಸಿ ಅನಿಲ್‌ ಕುಮಾರ್‌ ಅವರೊಂದಿಗೆ ಚರ್ಚಿಸಲು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು, ಮಾಜಿ ನಗರಸಭೆ ಅಧ್ಯಕ್ಷ ಮುಬಾರಕ್‌ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.

ಒಟ್ಟಾರೆ, ನಗರಸಭೆ ಅಭಿವೃದ್ಧಿ ಹಾಗೂ ಪಕ್ಷದ ಹಿತಕ್ಕೆ ಧಕ್ಕೆಯಾಗದಂತೆ ಅವಿಶ್ವಾಸದ ಕುರಿತು ನಿರ್ಣಯ ಕೈಗೊಳ್ಳಲು ಸೂಚಿಸಿದ್ದೇನೆ. ಅವಿಶ್ವಾಸವನ್ನು ಕಾಂಗ್ರೆಸ್‌ ಸದಸ್ಯರು ಮಾತ್ರವಲ್ಲ, ಜೆಡಿಎಸ್‌ ಸದಸ್ಯರೂ ಮಂಡಿಸಿದ್ದು, ಈ ಕುರಿತು ಜಿಲ್ಲೆಯ ಮೂವರು ಮುಖಂಡರ ಸಲಹೆ ಪಡೆಯಲು ಸೂಚಿಸಿದ್ದೇನೆ ಎಂದರು.

ಶ್ರದ್ಧಾಂಜಲಿ: ಮಾಲೂರು ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದು, ವಿಧಿವಶರಾಗಿರುವ ಮುನಿಯಪ್ಪ ಅವರಿಗೆ ಜಿಲ್ಲಾ ಕಾಂಗ್ರೆಸ್‌ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಿರುವುದಾಗಿ ತಿಳಿಸಿ, ಅವರು ಪಕ್ಷಕ್ಕಾಗಿ
ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಮೈಸೂರು ಮಿನರಲ್ಸ್‌ ಮಾಜಿ ನಿರ್ದೇಶಕ ಆರ್‌.ಕಿಶೋರ್‌ ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು, ಪಕ್ಷದ ಉಪಾಧ್ಯಕ್ಷ ಮುರಳಿಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next