ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ ಚುನಾವಣೆಗಿಂತಲೂ ಅಧಿಕ ಮತಗಳನ್ನು ಪಡೆದು ತನ್ನ ನೆಲೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಸಾಗಿದೆ ಎಂಬುದನ್ನು ಈ ಬಾರಿ ಲಭಿಸಿದ ಮತಗಳ ಅಂಕಿಅಂಶ ಸಾರುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.15.53 ವೋಟ್ ಪಡೆದಿದ್ದು ಈ ಹಿಂದಿನ ವರ್ಷಗಳ ದಾಖಲೆಗಳನ್ನು ಹಿಂದಿಕ್ಕಿದೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 14.93 ಮತ ಪಡೆದಿದ್ದರೆ, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.10.81 ಮತ ಪಡೆದಿತ್ತು.
ಕೇರಳದಲ್ಲಿ ಅಕೌಂಟ್ ತೆರೆಯದಿದ್ದರೂ, ಪ್ರಸ್ತುತ ಲೋಕಸಭೆಯಲ್ಲಿ ಕೇರಳದಿಂದ ಸಚಿವ ಪದವಿಯನ್ನು ಬಿಜೆಪಿ ಕೇರಳ ಘಟಕ ನಿರೀಕ್ಷಿಸಿದೆ.
ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿ ತಿರುವನಂತಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಕುಮ್ಮನಂ ರಾಜಶೇಖರನ್ ಅವರು ಕೇಂದ್ರ ಸಚಿವರಾಗುವ ಸಾಧ್ಯತೆಯಿದೆ.
ಬಿಜೆಪಿ ಕೇರಳ ರಾಜ್ಯ ಮಾಜಿ ಅಧ್ಯಕ್ಷ ವಿ. ಮುರಳೀಧರನ್, ಕೇಂದ್ರ ಸಚಿವ ಅಲ್ಫಾನ್ಸ್ ಕಣ್ಣಂತಾನಂ, ಚಲನಚಿತ್ರ ನಟ ಸುರೇಶ್ ಗೋಪಿ ರಾಜ್ಯ ಸಭಾ ಸದಸ್ಯರಾಗಿದ್ದಾರೆ.
ಇವರಲ್ಲಿ ವಿ. ಮುರಳೀಧರನ್ ಹೊರತುಪಡಿಸಿ ಕಣ್ಣಂತಾನಂ ಮತ್ತು ಸುರೇಶ್ ಗೋಪಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ವಿ. ಮುರಳೀಧರನ್ ಬಿಜೆಪಿ ಕೇರಳ ಘಟಕದ ಪ್ರಮುಖ ನೇತಾರರಲ್ಲೋರ್ವರಾಗಿದ್ದಾರೆ. ಪ್ರಸ್ತುತ ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಕಣ್ಣಂತಾನಂ ಅವರಿಗೆ ಮತ್ತೆ ಸಚಿವ ಹುದ್ದೆ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ತಿರುವನಂತಪುರದಲ್ಲಿ ಸ್ಪರ್ಧಿಸಿದ ಕುಮ್ಮನಂ ರಾಜಶೇಖರನ್ ಅವರು ಗೆಲುವು ಸಾಧಿಸಿದರೆ ಕೇಂದ್ರ ಸಚಿವರಾಗುವರೆಂದು ಪ್ರಚಾರ ಮಾಡಲಾಗಿತ್ತು. ಆದರೆ ಅವರು ಪರಾಭವಗೊಂಡರೂ ಕಮ್ಮನಂ ಅವರನ್ನು ತಿರಸ್ಕರಿಸಲಾಗದು ಎಂದೇ ಕೇಳಿ ಬರುತ್ತಿದೆ. ಕೇರಳದಲ್ಲಿ ಈ ಬಾರಿ ಒಂದು ಕ್ಷೇತ್ರದಲ್ಲಾದರೂ ಬಿಜೆಪಿ ಗೆಲುವು ಸಾಧಿಸಬಹುದೆಂದು ಕೇಂದ್ರ ನೇತೃತ್ವ ನಿರೀಕ್ಷಿಸಿತ್ತು. ಆದರೆ ಅಕೌಂಟ್ ತೆರೆಯಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಸಚಿವ ಸ್ಥಾನ ನೀಡಬಹುದೇ ಎಂಬ ಕುತೂಹಲ ಮೂಡಿದೆ.