ಚಿಕ್ಕಬಳ್ಳಾಪುರ: ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಬರೋಬ್ಬರಿ 6 ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ಸರದಾರ ಎನಿಸಿಕೊಂಡಿದ್ದ ಕೈ ಧುರೀಣರಾದ ವಿ.ಮುನಿಯಪ್ಪಗೆ ಲೋಕ ಸಭಾ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗದೇ ಅಲ್ಪ ಮತಗಳ ಅಂತರದಿಂದ ಸಂಸತ್ತು ಪ್ರವೇಶ ಕೈ ತಪ್ಪಿತು.
ಹೌದು, ಮೊದಲ ಬಾರಿಗೆ 1983ಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಯತ್ನದಲ್ಲಿಯೆ ವಿಧಾನಸಭೆ ಪ್ರವೇಶಿಸಿದ ಹೆಗ್ಗಳಿಕೆ ವಿ.ಮುನಿಯಪ್ಪ ಅವರದು, ನಂತರ ಶಿಡ್ಲಘಟ್ಟ ಕ್ಷೇತ್ರದಿಂದ ಸತತವಾಗಿ 1989, 1994 ರಲ್ಲಿ ಹಾಗೂ 1999 ರ ಚುನಾವಣೆಯಲ್ಲಿ ವಿ.ಮುನಿಯಪ್ಪ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದು ಅಲ್ಲದೇ 6 ಬಾರಿ ಕ್ಷೇತ್ರದಿಂದ ಶಾಸಕರಾಗಿದ್ದು ಈಗ ಇತಿಹಾಸ.
ಲೋಕಸಭೆಯಲ್ಲಿ ಸೋಲು: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿ ಅತ್ಯಂತ ಹಿರಿಯ ನಾಯಕರಾಗಿರುವ ವಿ.ಮುನಿಯಪ್ಪ 1985 ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪ್ರತಿ ಸ್ಪರ್ಧಿ ಜನತಾ ಪಕ್ಷದ ಎಸ್.ಮುನಿಶಾಮಪ್ಪ ವಿರುದ್ಧ ಸೋಲುತ್ತಾರೆ. ಚುನಾವಣೆಯಲ್ಲಿ ಆಗ ಮುನಿಶಾಮಪ್ಪ 44,199 ಮತ ಪಡೆದರೆ ವಿ.ಮುನಿಯಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 33,998 ಮತಗಳನ್ನು ಪಡೆದು ಮುನಿಶಾಮಪ್ಪ ವಿರುದ್ಧ 10,201 ಮತಗಳ ಅಂತರದಿಂದ ಸೋಲುತ್ತಾರೆ. ಆದರೆ 1996 ರಲ್ಲಿ ಲೋಕಸಭಾ ಚುನಾವಣೆ ಎದುರಾದಾಗ ಆಗ ಮೊದಲ ಬಾರಿಗೆ ಜನತಾ ದಳದಿಂದ ಚುನಾವಣೆಗೆ ನಿಲ್ಲುವ ಆರ್.ಎಲ್.ಜಾಲಪ್ಪ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಾಲಪ್ಪ ಎದುರು ವಿ.ಮುನಿಯಪ್ಪ ಸೋಲು ಅನುಭವಿಸುತ್ತಾರೆ. ಜಾಲಪ್ಪ ಜನತಾ ದಳದಿಂದ ಸ್ಪರ್ಧಿಸಿ ಬರೋಬ್ಬರಿ 3,37,542 ಮತಗಳು ಪಡೆದರೆ ವಿ.ಮುನಿಯಪ್ಪಗೆ ಲೋಕಸಭೆಗೆ ಸಿಕ್ಕಿದ್ದು 3,20,728 ಮತಗಳು, 16,814 ಮತಗಳ ಅಂತರದಿಂದ ವಿ.ಮುನಿಯಪ್ಪ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ಹಿಂದಿನ ಚುನಾವಣೆಗಳ ಫಲಿತಾಂಶ ಅವಲೋಕಿಸಿದರೆ ಅತಿ ಕಡಿಮೆ ಮತಗಳ ಅಂತರ ದಿಂದ ವಿ.ಮುನಿಯಪ್ಪ ಲೋಕಸಭಾ ಚುನಾವಣೆಯ ಲ್ಲಿ ಸೋಲು ಕಾಣುತ್ತಾರೆ. ವಿ.ಮುನಿಯಪ್ಪ ಬಳಿಕ ಎಂ.ವೀರಪ್ಪ ಮೊಯಿಲಿ ವಿರುದ್ಧ 2019 ರಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿದ್ದ ಬಿ.ಎನ್.ಬಚ್ಚೇಗೌಡ ಕೇವಲ 9,520 ಮತಗಳ ಅಂತರದಿಂದ ಸೋಲುತ್ತಾರೆ.
ವಿ.ಮುನಿಯಪ್ಪ ರಾಜಕೀಯ ನಿವೃತ್ತಿ ಘೋಷಣೆ :
ಸದ್ಯ ವಿ.ಮುನಿಯಪ್ಪ 2023ರ ವಿಧಾನಸಭಾ ಚುನಾವಣೆಗೂ ಮೊದಲೇ ತಮ್ಮ ರಾಜಕೀಯ ನಿವೃತ್ತಿ ಘೋಷಿಸಿದರು. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ವಿ.ಮುನಿಯಪ್ಪ, ಮಹತ್ವದ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದರು. ಇದಕ್ಕೂ ಮೊದಲು ರೇಷ್ಮೆ ಹಾಗೂ ಇಂಧನ ಸಚಿವರಾಗಿಯು ಬಂಗಾರಪ್ಪ ಹಾಗೂ ವೀರಪ್ಪ ಮೊಯಿಲಿ ಸರ್ಕಾರದಲ್ಲಿ ಸಚಿವರಾಗಿದ್ದರು.
-ಕಾಗತಿ ನಾಗರಾಜಪ್ಪ