ಉಳ್ಳಾಲ/ಮಂಗಳೂರು:ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಇಲ್ಲಿನ ನೇತ್ರಾವತಿ ನದಿ ತೀರದಲ್ಲಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದಾರೆ.
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮತ್ತು ಡಿಸಿಪಿ ಹನುಮಂತರಾಯ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು, ತಡರಾತ್ರಿ 2.30ರ ವರೆಗೂ ನದಿ, ಸಮುದ್ರ ತೀರ ಸಹಿತ ಪರಿಸರದಲ್ಲಿ ಬಿರುಸಿನ ಶೋಧ ಕಾರ್ಯ ಮಂದುವರಿದಿತ್ತು.
ನಾಪತ್ತೆಯಾದ ವ್ಯಕ್ತಿ ಸಿದ್ಧಾರ್ಥ ಎಂದು ಕಾರಿನ ಚಾಲಕ ತಿಳಿಸಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಖಾಸಗಿ ಕಂಪೆನಿಯ ಹೆಸರಿನಲ್ಲಿ ನೋಂದಣಿಯಾಗಿರುವ ಕೆಎ 03, ಎನ್‌ಸಿ-2592 ಸಂಖ್ಯೆ ಹೊಂದಿರುವ ಟೊಯೊಟಾ ಕ್ರೈಸ್ಟಾ ಕಾರಿನಲ್ಲಿ ಅವರು ಬಂದಿದ್ದರು.
ಕಾರಿನ ಚಾಲಕ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಅವರು ಬೆಂಗಳೂರಿನಿಂದ ಮಂಗಳೂರಿಗೆಂದು ಹೇಳಿ ಚಾಲಕ ಮತ್ತು ಇಬ್ಬರ ಜತೆಗೂಡಿ ಕಾರಿನಲ್ಲಿ ಹೊರಟಿದ್ದರು. ಪಂಪ್‌ವೆಲ್ ತಲುಪಿದಾಗ ಜತೆಗಿದ್ದ ಇಬ್ಬರು ಕಾರಿನಿಂದ ಇಳಿದಿದ್ದರು. ಬಳಿಕ ಮಾಲಕನ ಸೂಚನೆಯಂತೆ ಚಾಲಕ ಕಾರನ್ನು ಕಾಸರಗೋಡು ಹೆದ್ದಾರಿಯತ್ತ ತಿರುಗಿಸಿದ್ದನು. ನೇತ್ರಾವತಿ ಸೇತುವೆ ಬಳಿ ತಲುಪುತ್ತಿದ್ದಂತೆ ಕಾರನ್ನು ಎಡ ಬದಿಯಲ್ಲಿರುವ ಕಂರ್ಬಿಸ್ಥಾನದ ರಸ್ತೆಯಲ್ಲಿ ಚಲಾಯಿಸಲು ಹೇಳಿದ್ದರು. ಕೆಲವು ಮೀಟರ್ ಮುಂದೆ ಸಾಗಿದ ಬಳಿಕ ಕಾರನ್ನು ನಿಲ್ಲಿಸಲು ಹೇಳಿ ಮೊಬೈಲ್‌ನಲ್ಲಿ ಮಾತನಾಡುತ್ತ ಸ್ವಲ್ಪ ಮುಂದಕ್ಕೆ ಹೋದವರು ಬಳಿಕ ನಾಪತ್ತೆಯಾಗಿದ್ದಾರೆ. ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್xಆಫ್ ಸಂದೇಶ ಬರುತ್ತಿದೆ.
ಮಂಗಳೂರಿಗೆಂದು ಬಂದ ಅವರು ಪಂಪ್‌ವೆಲ್‌ನಿಂದ ಕಾಸರಗೋಡಿನತ್ತ ವಾಹನವನ್ನು ತಿರುಗಿಸಿದ್ದೇಕೆ? ನೇತ್ರಾವತಿ ಸಮೀಪಿಸುತ್ತಿದ್ದಂತೆ ಕಾರನ್ನು ನದಿ ತೀರದ ರಸ್ತೆಗೆ ಇಳಿಸಿ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದೇಕೆ?, ಈ ಸಂದರ್ಭ ಅವರ ಮೊಬೈಲ್‌ಗೆ ಬಂದ ಕರೆ ಯಾರದು? ಇದ್ದಕ್ಕಿದ್ದಂತೆ ನಾಪತ್ತೆಯಾಗಲು ಕಾರಣವೇನು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸ್ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಅಗ್ನಿಶಾಮಕ ದಳದ ಸಿಬಂದಿಯೂ ಶೋಧದಲ್ಲಿ ನಿರತರಾಗಿದ್ದಾರೆ. ನದಿ ಪರಿಸರದಲ್ಲಿ ಶೋಧ ನಡೆಸಲು ಬೋಟ್‌ಗಳನ್ನು ತರಿಸಲಾಗಿದೆ.