ಪರ್ತ್: ಬಾರ್ಡರ್ ಗಾವಸ್ಕರ್ ಟ್ರೋಫಿ ಆರಂಭಕ್ಕೆ ಮೊದಲೇ ಟೀಂ ಇಂಡಿಯಾಗೆ ಗಾಯಾಳುಗಳ ಚಿಂತೆ ಕಾಡುತ್ತಿದೆ. ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಅಭ್ಯಾಸದ ವೇಳೆ ಗಾಯಗೊಂಡಿದ್ದರು. ಇವರಲ್ಲಿ ರಾಹುಲ್ ಮತ್ತು ವಿರಾಟ್ ಕೊಹ್ಲಿ ಗುಣಮುಖರಾಗಿದ್ದು, ನಂತರ ಮತ್ತೆ ಅಭ್ಯಾಸದಲ್ಲಿ ತೊಡಗಿದ್ದಾರೆ.
ಆದರೆ ಶುಭಮನ್ ಗಿಲ್ (Shubhman Gill) ಅವರು ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಗಾಯಗೊಂಡಿದ್ದಾರೆ. ಗಿಲ್ ಅವರ ಹೆಬ್ಬೆರಳಿನ ಮೂಳೆ ಮುರಿತವಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಅವರು ಪರ್ತ್ ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಈ ಸವಾಲುಗಳ ಮಧ್ಯೆ ಕರ್ನಾಟಕದ ದೇವದತ್ ಪಡಿಕ್ಕಲ್ (Devdutt Padikkal) ರಾಷ್ಟ್ರೀಯ ತಂಡದ ಟೆಸ್ಟ್ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಆಸ್ಟ್ರೇಲಿಯಾ ಎ ವಿರುದ್ದದ ಪಂದ್ಯಕ್ಕಾಗಿ ಭಾರತ ಎ ತಂಡದ ಸದಸ್ಯರಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ಪಡಿಕ್ಕಲ್ ಅವರನ್ನು ಮತ್ತೆ ಅಲ್ಲಿಯೇ ಉಳಿಸಿಕೊಳ್ಳಲಾಗಿದೆ. ಅವರು ಇದೀಗ ಭಾರತ ಟೆಸ್ಟ್ ತಂಡದ ಭಾಗವಾಗಿದ್ದಾರೆ.
ಗಿಲ್ ಗಾಯಗೊಂಡಿದ್ದು, ಹೆಚ್ಚುವರಿಯಾಗಿ ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಂದ ಮೊದಲ ಟೆಸ್ಟ್ ಗೆ ಅಲಭ್ಯರಾದ ಕಾರಣ ಪಡಿಕ್ಕಲ್ ಪರ್ತ್ ನಲ್ಲಿ ತಂಡ ಆಡುವ ಬಳಗದಲ್ಲಿ ಸೇರಲು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.
ಕಳೆದ ಒಂದು ತಿಂಗಳಿನಿಂದ ಆಸ್ಟ್ರೇಲಿಯಾದ ಪರಿಸ್ಥಿತಿಗಳನ್ನು ಅರಿತಿರುವ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್ಗಳ ವಿರುದ್ಧ ನೆಟ್ ಸೆಷನ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಪಡಿಕ್ಕಲ್ ಕಡೆಗೆ ಆಯ್ಕೆದಾರರು ಗಮನ ಹರಿಸಿದ್ದಾರೆ. ಆಸ್ಟ್ರೇಲಿಯಾಕ್ಕೆ ಭಾರತ ಎ ಪ್ರವಾಸದಲ್ಲಿ ಅವರ ಸಾಧಾರಣ ಪ್ರದರ್ಶನದ ಹೊರತಾಗಿಯೂ, ಬ್ಯಾಕ್ಅಪ್ ಬ್ಯಾಟ್ಸ್ಮನ್ ಆಗಿ ಪಡಿಕ್ಕಲ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಕರ್ನಾಟಕದ ಎಡಗೈ ಬ್ಯಾಟರ್ ದೇಶೀಯ ಕ್ರಿಕೆಟ್ ನಲ್ಲಿ ನಿರಂತರ ಪ್ರದರ್ಶನ ನೀಡಿದವರು. ಇಂಗ್ಲೆಂಡ್ ವಿರುದ್ಧ ಈ ವರ್ಷದ ಆರಂಭದಲ್ಲಿ ಪಡಿಕ್ಕಲ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು.
ಪಡಿಕ್ಕಲ್ ಬ್ಯಾಟರ್ ಆಗಿ ಗಮನ ಸೆಳೆದರೆ, ಯುವ ವೇಗಿ ಹರ್ಷಿತ್ ರಾಣಾ ಕೂಡ ಪರ್ತ್ ಟೆಸ್ಟ್ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಇಂಟ್ರಾ-ಸ್ಕ್ವಾಡ್ ಮ್ಯಾಚ್ ಸಿಮ್ಯುಲೇಶನ್ಗಳ ಸಮಯದಲ್ಲಿ ಅವರ ಅಸಾಧಾರಣ ಬೌನ್ಸರ್ಗಳು ತಂಡದ ಮ್ಯಾನೇಜ್ಮೆಂಟ್ ಗೆ ಸಂತಸ ತಂದಿದೆ.