ಕನ್ನಡದ ಪ್ರೀತ್ಸೇ ಚಿತ್ರದ ಯಾರಿಟ್ಟರಿ ಚುಕ್ಕಿ ಹಾಡು ನನಗೆ ಬಾಲ್ಯದಿಂದಲೂ ಈ ಹಾಡು ಅಂದ್ರೆ ತುಂಬಾನೆ ಇಷ್ಟ, ನನಗೂ ಹಾಡಿಗೆ ಏನೋ ಸಂಬಂಧ ಇದೆ ಎನ್ನುವ ಸಣ್ಣ ಭಾವನೆ ನನ್ನಲ್ಲಿ, ಬಹುಷಃ ನನ್ನ ಗಲ್ಲದ ಎರಡೂ ಭಾಗದಲ್ಲಿ ಸಣ್ಣ ಚುಕ್ಕಿ ಇರೋದರಿಂದ ಈ ಭಾವನೆ ಬಂದಿರಬಹುದು ಎಂದು ಸಂಶಯ. ನನಗೆ ಈ ಹಾಡು ಇಷ್ಟ ಎಂದು ತಿಳಿದ ನನ್ನ ಸ್ನೇಹಿತರು ಈ ಹಾಡಿನ ಮೂಲಕ ಕಾಲೇಳಿಯುತ್ತಲೇ ಇದ್ದರು.
ನನ್ನ ಮುಖದ ಮೇಲೆ ಯಾಕಿತರಾ ಕಪ್ಪು ಕಪ್ಪು ಸಣ್ಣ ಚುಕ್ಕಿ ಇದೆ?, ನನ್ನ ಮುಖ ಯಾಕೆ ಎಲ್ಲರ ತರಾ ಇಲ್ಲಾ ಎಂದು ಸ್ಕೂಲಿಗೆ ಹೋಗೋ ಸಮಯದಲ್ಲಿ ಅಮ್ಮನ ಹತ್ರ ಕೇಳಿದಾಗ, ಅದಕ್ಕೆ ಅಮ್ಮಾ “ಅವರು ನಿನ್ನ ನಿಜವಾದ ಗೆಳತಿಯರು, ಈ ಜನ್ಮದಲ್ಲಿ ನಿನ್ನ ಜತೆ ಇರೋ ಸಖೀಯರು’ ಅಂತಾ ಹೇಳಿ ಸಮಾಧಾನ ಮಾಡುತ್ತಿದ್ದರು.
ದಕ್ಷಿಣ ಕರ್ನಾಟಕದಲ್ಲಿ ಇದಕ್ಕೆ ಮಚ್ಚೆ ಅಂತಾ ಕರೀತಾರೆ, ನಮ್ಮ ಕಡೆಯವರು ಅಂತ್ರು (ಉತ್ತರ ಕರ್ನಾಟಕ) “ಗಲ್ಲದ ಮ್ಯಾಲ್ ಗೆಳತಿ ಐತಿ ನೋಡ್ಲೆ ಪಾ ಅಕಿಗಿ’ಅನ್ನುತ್ತಿದ್ದರು. ಹೆಣ್ಣಿಗೆ ಎಡ ಭಾಗದಲ್ಲಿರುವ ಚುಕ್ಕಿ ಯಿಂದ ಮನೆಗೆ ಶ್ರೇಯಸ್ಸು ಅಂತಾ ಹಿರಿಯರ ನಂಬಿಕೆ ಹಾಗೆ ಜೋತಿಷದ ಪ್ರಕಾರ ಬಲಬಾಜು ಇದ್ದರೆ ಮನೆಗೆ ಲಾಭ ಶಾಸ್ತ್ರಿಗಳ ಅಭಿಪ್ರಾಯ. ಆದರೆ ನನಗೆ ಇದಾವುದರ ಮೇÇಯೂ ನಂಬಿಕೆ ಇಲ್ಲ.
ಸ್ಕೂಲಿನಲ್ಲಿ ನಡಿಯೋ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲರೂ ಯಾರದು ದೃಷ್ಟಿಬಿಳಬಾರದು ಅಂತಾ ದೃಷ್ಟಿಬೊಟ್ಟು ಇಟ್ಟುಕೊಳ್ಳುತ್ತಾ ಇದ್ದರು. ಡಾನ್ಸ್‌ನಲ್ಲಿ ಭಾಗವಹಿಸಿದಾಗ ನಮ್ ಟೀಚರ್ ದೃಷ್ಟಿ ಬೋಟ್ಟ ಇಡಲು ಬಂದಾಗ “ಬೇಡಾ ಮೇಡಂ ನನಗ್ ಇದೆ, ದೇವ್ರು ನಂಗ್ ದೃಷ್ಟಿ ಆಗಬಾರದು ಎಂದು ಹುಟ್ಟುತ್ತಲೇ ಕೊಟ್ಟಿಬಿಟ್ಟಿದ್ದಾರೆ ಅಂತಾ ಜಂಬದಿಂದ ಹೇಳುತ್ತಿದ್ದೆ.
ಮುಖದ ಮೇಲಿರುವ ಚುಕ್ಕಿ ಹೆಣ್ಣಿನ ಮುಖದ ಸೌಂದರ್ಯ ದುಪ್ಪಟ್ಟು ಪಟ್ಟು ಹೆಚ್ಚಿಸುವುದಾಗಿದೆ. ಚುಕ್ಕಿ ಹೊತ್ತ ಚಹರೆ ಸಾಧಾರಣಕ್ಕಿಂತ ವಿಶೇಷವಾಗಿ ಹಾಗೂ ಆಕರ್ಷಣೀಯವಾಗಿ ಕಾಣಿಸುವುದು, ಕೊನೆಯದಾಗಿ ನನಗೆ ಚುಕ್ಕಿಯನ್ನ ಗಲ್ಲದ ಮೇಲೆ ಇಟ್ಟವರು ಯಾರು? ಚುಕ್ಕಿನ ದೇವರು ಕೊಟ್ಟದ್ದಾ ಅಥವಾ ಯಾರಾದ್ರು ಇಟ್ಟಿದ್ದಾ ? ಯಾರಿಟ್ಟರಿ ಈ ಚುಕ್ಕಿ ?ಯಾಕಿಟ್ಟರಿ ಈ ಚುಕ್ಕಿ ಅನ್ನೋ ಪ್ರಶ್ನೆ ನನ್ನಲ್ಲಿ ಉಳಿದುಬಿಟ್ಟಿದೆ.
ಮಲ್ಲಮ್ಮ
ವಿಜಯಪುರ