Advertisement
ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗದೆ ಹೊಟ್ಟೆಕಿಚ್ಚಿನಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಆ ಧರ್ಮ ನೀನು ಈ ಧರ್ಮ, ನಾನು ಮೇಲ್ಜಾತಿ ನೀನು ಕೆಳ ಜಾತಿ, ನಾನು ಶ್ರೀಮಂತ ನೀನು ಬಡವ ಎಂದು ಕೆಲಸಕ್ಕೆ ಬಾರದ ಆಲೋಚನೆಗಳಿಂದ ಬದುಕನ್ನು ಸಾಗಿಸುತ್ತಿರುವುದು ಸಾಮಾನ್ಯವಾಗಿದೆ.
Related Articles
Advertisement
ಜಾತಿ, ಮತವೆಂದು ಬದುಕದೇ ನಿಸ್ವಾರ್ಥದಿಂದ ಜೀವನವನ್ನು ಸಾಗಿಸಿದರೆ ದೇವರು ಸದಾ ನಮ್ಮೊಂದಿಗೆ ಇರುವನು. ಯಾವ ಜಾತಿಯೂ ಮೇಲಲ್ಲ ಯಾವ ಜಾತಿಯೂ ಕೀಳಲ್ಲ. ಇರುವುದೊಂದೇ ಜಾತಿ. ಅದುವೇ ಮನುಷ್ಯ ಜಾತಿ. ಅದನ್ನರಿತು ಬದುಕುವುದು ಉತ್ತಮ.
ತಂದೆ, ತಾಯಿ, ಗುರು – ಹಿರಿಯರಲ್ಲಿ ದೇವರನ್ನು ಕಾಣಬೇಕು. ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಮಕ್ಕಳಿಗೋಸ್ಕರ ಜೀವನದಲ್ಲಿ ತುಂಬಾ ಕಷ್ಟ ಪಟ್ಟಿರುತ್ತಾರೆ. ಹೀಗೊಂದು ಒಂದು ಮಾತಿದೆ, ಭೂಮಿ ಮೇಲೆ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ-ತಂದೆ ಇರುವುದಿಲ್ಲ. ಆದರೆ ಇಂದಿನ ಕಾಲದಲ್ಲಿ ಮಕ್ಕಳು ಹೆತ್ತವರ ಆಸೆ, ಆಕಾಂಕ್ಷೆ, ಪ್ರೀತಿ, ತ್ಯಾಗ ಇವುಗಳಾವುದನ್ನೂ ಅರಿಯದೆ ಆಕರ್ಷಣೆಯ ಬದುಕಿಗೆ ಮಾರುಹೋಗಿ ಹೆತ್ತವರ ಕಣ್ಣೀರಿಗೆ ಕಾರಣವಾಗಿರುವ ಬೇಸರದ ಸಂಗತಿ ಎದುರಾಗಿದೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಅತಿಯಾದರೆ ಅಮೃತವೂ ವಿಷವಾಗುವುದು. ನಮ್ಮ ಯೋಗ್ಯತೆಗೂ ಮೀರಿ ಬಯಸುವುದು ತಪ್ಪು. ಇರುವುದರಲ್ಲಿಯೇ ಸಂತೋಷವನ್ನು ಕಾಣುವುದು ಒಳ್ಳೆಯದು. ಹೆತ್ತವರ ನೋವಿಗೆ ಕಾರಣವಾಗದೆ ಅವರ ಆನಂದಕ್ಕೆ ಕಾರಣವಾಗಬೇಕು.
ಕೇವಲ ತಂದೆ- ತಾಯಿಯರಲ್ಲಿ ಮಾತ್ರ ದೇವರನ್ನು ಕಾಣುವುದಲ್ಲ, ವಿದ್ಯೆ ಎಂಬ ಬದುಕಿನ ಅಸ್ತ್ರವನ್ನು ಧಾರೆ ಎರೆಯುವ ಗುರುಗಳಲ್ಲಿ, ಬದುಕಿನ ಉತ್ತಮ ಮಾರ್ಗವನ್ನು ತಿಳಿಸಿ ಕೊಡುವ ಹಿರಿಯರಲ್ಲೂ ದೇವರನ್ನು ಕಾಣಬೇಕು. ಇತ್ತೀಚಿಗಂತೂ ಕಾಲೇಜುಗಳಲ್ಲಿ ಗುರುಗಳಿಗೆ ನೀಡುವ ಗೌರವದಲ್ಲೂ ಬದಲಾಗಿದೆ. ವಿದ್ಯಾರ್ಥಿಗಳ ಸ್ವಭಾವ ಗುರುಗಳಿಗೆ ಗೌರವವನ್ನು ನೀಡದೆ, ಯಾರು ಗುರುಗಳು ಯಾರು ವಿದ್ಯಾರ್ಥಿಗಳು ಎಂದು ಗುರುತಿಸಲು ಕಠಿನವಾಗುವಷ್ಟು ಬದಲಾಗಿದೆ.
ನಾವಿಲ್ಲಿ ನಾ ಮೇಲು ತಾ ಮೇಲು ಎಂದು ಹೊಡೆದಾಡಿಕೊಂಡು ಬದುಕುತ್ತಿದ್ದೇವೆ. ಆದರೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ಹಗಲಿರುಳೆನ್ನದೆ ಕರ್ತವ್ಯದಲ್ಲಿ ನಿರತರಾಗಿ ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ದೇವರೆಂದರೆ ತಪ್ಪಿಲ್ಲ. ಅಂತಹ ಎಲ್ಲ ಸೈನಿಕರಿಗೂ ನನ್ನ ಕೋಟಿ ಕೋಟಿ ನಮನಗಳು.
“ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ಕೂಡಲಸಂಗಮ ದೇವನೊಲಿಸುವ ಪರಿ’ ಎಂಬ ಬಸವಣ್ಣನವರ ವಚನ ನೆನಪಿಗೆ ಬರುತ್ತದೆ. ಇದರ ಅರ್ಥ ಎಲ್ಲಿ ಮನಸ್ಸು ಶುದ್ಧವಾಗಿರುವುದೋ ಅಲ್ಲಿ ದೇವನೊಲಿಯುವನು. ನಿಷ್ಕಲ್ಮಶ ಬದುಕು ಸುಂದರ ಜೀವನಕ್ಕೆ ಸಹಕಾರ ಎಂಬುದು ಮನದಟ್ಟಾದರೆ ಉತ್ತಮ.
-ಪ್ರಿಯಾ ನಾಯ್ಕ
ಎಂ.ಇ.ಎಸ್. ಮಹಾವಿದ್ಯಾಲಯ, ಶಿರಸಿ