Advertisement

Childhood: ಬಾಲ್ಯಕ್ಕೆ ಸರಿಸಾಟಿಯಾದ ಸುಖವೆಲ್ಲಿದೆ?

12:19 PM Jun 24, 2024 | Team Udayavani |

ಈಗಲೂ ಒಮ್ಮೊಮ್ಮೆ ಮನೆ ಹೊರಗೆ ನೋಡಿದರೆ ಚಳಿಗಾಳಿಯ ಸಹಿತ ಮಳೆಗಾಲದ ಮಳೆ. ಮೆಲುದನಿಯಲ್ಲಿ ಶಬ್ದ ಮಾಡುತ್ತಿರುವ ಗುಡುಗು. ಮಳೆ ಬಂದಾಗ ಕಂಡುಬರುವ ಪ್ರಕೃತಿಯ ರಮಣೀಯ ಚಿತ್ರಣವನ್ನು ಛಾಯಾಚಿತ್ರಿಸುತ್ತಿರಬೇಕು ಎಂದೆನಿಸುವಂತೆ ಮಿಂಚಿನ ಬೆಳಕು.

Advertisement

ಆಗಷ್ಟೇ ಅಮ್ಮ, “ಬಿಸಿ ಬಿಸಿ ಊಟ ತಯಾರಾಗಿದೆ, ಬಾ ಊಟ ಮಾಡುವ, ಇವತ್ತೇನೂ ಸಾರು, ಸಾಂಬಾರು ಮಾಡಿಲ್ಲ. ಆದರೂ ನಿನಗೆ ಊಟ ಇಷ್ಟವಾಗುತ್ತೆ. ಬೇಗ ಬಾ… ಎನ್ನುತ್ತಿದ್ದಾಗ ಕುತೂಹಲದಿಂದ ಓಡಿ ಹೋಗಿ ತಟ್ಟೆಯಿಟ್ಟು  ಊಟಕ್ಕೆ ಸಜ್ಜಾಗಿ ಕುಳಿತದ್ದು. ಅತ್ತ ಅಮ್ಮ ಬಿಸಿ ಬಿಸಿ ಅನ್ನದ ಜತೆಗೆ ಮನೆಯಲ್ಲಿಯೇ ತಯಾರಿಸಿದ ತುಪ್ಪ, ಉಪ್ಪು ಹಾಗೂ ಲಿಂಬೆ-ಗಾಂಧಾರಿ ಮೆಣಸಿನ ಉಪ್ಪಿನಕಾಯಿ ತರುತ್ತಿರಬೇಕಾದರೆ ಬಾಯಲ್ಲಿ ಒಂದೇ ಸಮನೆ ನೀರೂರುತ್ತಿತ್ತು, ಮನಸ್ಸಿಗೆ ಅದೇನೋ ಆನಂದ. ಇದಕ್ಕೂ ಮೇಲೆ, ಬಿಸಿ ಬಿಸಿ ಅನ್ನ, ತುಪ್ಪ ಹಾಗೂ ಉಪ್ಪನ್ನು ಬೆರೆಸಿ, ಲಡ್ಡಿನ ಗಾತ್ರದ ಸಣ್ಣ ಸಣ್ಣ  ಉಂಡೆಗಳನ್ನಾಗಿ ಮಾಡಿ, ಆ ಉಂಡೆಗಳನ್ನು ಸ್ವಲ್ಪ ಲಿಂಬೆಯ ಉಪ್ಪಿನಕಾಯಿ ಜತೆಗೆ ತಟ್ಟೆಯಲ್ಲಿ ಹಾಕಿ ಕೈಗೆ ಕೊಟ್ಟರೆ, ಅದೆಷ್ಟು ಬೇಗ ತಟ್ಟೆ ಖಾಲಿ ಮಾಡುತ್ತಿದ್ದೆನೆಂದರೆ..!

ವಾಹ್‌! ಅದೆಂತಾ ಸುವರ್ಣಕಾಲ… ಬಡತನವಿದ್ದರೂ ಯಾವ ಪ್ರೀತಿಗೂ ಕೊರತೆಯಿರಲಿಲ್ಲ . ಚಿಕ್ಕಂದಿನಿಂದ ಹತ್ತನೇ ತರಗತಿಯ ವರೆಗೂ ಹಾಗೂ ಅದಾದ ಬಳಿಕವೂ ಆಗಾಗ್ಗೆ ಅಮ್ಮನ ಕೈತುತ್ತು ತಿನ್ನುವುದರಲ್ಲಿದ್ದ ಸುಖಕ್ಕೆ ಎಂದಿಗೂ ಯಾವುದೂ ಸಾಟಿಯಿಲ್ಲ.

ಇವೆಲ್ಲದರ ಜತಜತೆಗೆ ತಪ್ಪು ಮಾಡಿದರೆ ಯುಗಾದಿ ಅಲ್ಲದೇ ಇದ್ದರೂ ಮನೆಯ ಪಕ್ಕದಲ್ಲೇ ಇದ್ದ ಕಹಿಬೇವಿನ ರುಚಿ ಅದರ ಕೋಲಿನಲ್ಲಿ ಕೊಡುತ್ತಿದ್ದ ಪೆಟ್ಟಿನ ಮುಖಾಂತರ ಗೊತ್ತಾಗುತ್ತಿತ್ತು. ಕಹಿಬೇವಿನ ಕಹಿಗೋ? ಪೆಟ್ಟಿನ ನೋವಿಗೋ? ಅಮ್ಮ ಹೊಡೆದರು ಎಂದೋ? ಅಥವಾ ನನ್ನ ತಪ್ಪು ಅವರಿಗೆ ತಿಳಿಯಿತೆಂದೋ, ಒಟ್ಟಿನಲ್ಲಿ ನನ್ನ ಕಣ್ಣಿನಿಂದ ನೀರು ಉಕ್ಕಲು ಪ್ರಾರಂಭ, ಸ್ವರಪೆಟ್ಟಿಗೆ ತೆರೆದು ಆರ್ಭಟದ ಅಳು. ಇದನ್ನು ನೋಡಿದ ಮರುಕ್ಷಣವೇ ಸಿಗುತ್ತಿದ್ದ ಅಮ್ಮನ ಮುದ್ದಿಗೆ ಬೆಲೆ ಕಟ್ಟಲಾಗದು. ಇವೆಲ್ಲ ಗತಕಾಲ, ಈಗ ಅವಳಿಲ್ಲ.

ಅದೇನೇ ಹೇಳಿ, ಇಂತಹ ಮಧುರ ಕ್ಷಣಗಳನ್ನು ಕಳೆಯುತ್ತಾ ಬೆಳೆದ ನಾನು 90ರ ದಶಕದ ಕೊನೆಯ ವರುಷದಲ್ಲಿ ಜನಿಸಿದರೂ ಅದೇ ದಶಕದಲ್ಲಿ ಜನಿಸಿದವರೊಂದಿಗೇ ನನ್ನ ಒಡನಾಟ ಹೆಚ್ಚಿದ್ದುದು. ಅವರು ತೊಡುತ್ತಿದ್ದ ಉಡುಗೆ-ತೊಡುಗೆಯ ಶೈಲಿಯಾಗಲಿ, ಆಡುತ್ತಿದ್ದ ಆಟಗಳಾಗಲಿ, ನೋಡುತ್ತಿದ್ದ ಸಿನೆಮಾಗಳಾಗಲಿ ಎಲ್ಲವೂ ನನ್ನಲ್ಲೂ ಒಂದಾಗತೊಡಗಿದ್ದವು. ಬಾಲ್ಯದ ದಿನಗಳೇ ಚೆನ್ನ ಎಂದು ಎಲ್ಲರಿಗೂ ಮನವರಿಕೆಯಾಗುವುದು ಆ ದಿನಗಳು ಕಳೆದ ಬಳಿಕವೇ.

Advertisement

ಸೃಷ್ಟಿಯ ಪ್ರತಿಯೊಂದು ನಿಯಮಗಳು ಕೂಡ ಅದೆಷ್ಟು ಅದ್ಭುತ! ನನಗದೆಷ್ಟೋ ಬಾರಿ ವಿಲಿಯಂ ವರ್ಡ್ಸ್‌ವರ್ತ್‌ನ ಪ್ರಕೃತಿಪ್ರೇಮ ಮನಸಿಗೆ ಮುದ ನೀಡುವುದುಂಟು. ಕಾರಣ ನಾನೂ ಕೂಡ ನಮ್ಮ ಹಾಗೂ ಪ್ರಕೃತಿ ನಡುವೆ ಅದೆಷ್ಟು ಹೋಲಿಕೆಗಳಿವೆಯಲ್ಲವೇ ಎಂದು ಆಗಾಗ್ಗೆ ಯೋಚಿಸುವುದಿದೆ.

ಹಂಚಿಕೊಳ್ಳುವ ರೀತಿ ಭಿನ್ನವಿದ್ದರೂ ಭಾವನೆಗಳಿವೆ. ಒಂದು ಬೀಜ ಮರವಾಗಿ ಸಾಯುವವರೆಗೂ ಹೇಗೆ ಬದುಕು ಕಳೆಯುತ್ತವೆಯೋ ನಮ್ಮ “ಜೀವನ’ವೂ ಹಾಗೆಯೇ ಅಲ್ಲವೇ? ಸಾವು ಒಂದಲ್ಲ ಒಂದು ದಿನ ಬಂದೇ ಬರುತ್ತದೆ ಆದರೆ ಇರುವಷ್ಟು ದಿನಗಳಲ್ಲಿ ನಾವು ಹೇಗೆ ಬದುಕುತ್ತೇವೆಯೋ ಅದು ನಮಗೆ ಬೇಕಾದುದು. ಬಾಲ್ಯ ಕಳೆಯಿತು ಎಂದು ಕೊರಗುವುದರ ಬದಲು, ನೀವು ನಿಮ್ಮ ಬಾಲ್ಯದಲ್ಲಿ ಕಳೆದ ಅಮೂಲ್ಯ ಕ್ಷಣಗಳ ಮೆಲುಕು ಹಾಕುತ್ತಾ ವಾಸ್ತವದಲ್ಲಿ ಖುಷಿಯಿಂದ ಜೀವಿಸಿ. ಸಂತೋಷದ ಬದುಕು ನಿಮ್ಮದಾಗಲಿ.

- ಅವನೀಶ್‌ ಭಟ್‌

ಸವಣೂರು

Advertisement

Udayavani is now on Telegram. Click here to join our channel and stay updated with the latest news.

Next