Advertisement

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

12:40 PM Dec 14, 2024 | Team Udayavani |

ಯದ್ಭಾವಂ ತದ್ಭವತಿ ಎಂಬಂತೆ ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ದೇವರು ಗೋಚರಿಸುತ್ತಾರೆ. ದೇವರ ಸೃಷ್ಟಿಯು ನಮ್ಮ ದೃಷ್ಟಿಯಂತೆ ಗೋಚರಿಸುತ್ತದೆ. ನಾವು ನೋಡುವ ದೃಷ್ಟಿಯು ಚೆನ್ನಾಗಿದ್ದರೆ ದೇವರ ಸೃಷ್ಟಿಯು ಚೆನ್ನಾಗಿಯೇ ಕಾಣುತ್ತದೆ. ನಾವು ನೋಡುವ ದೃಷ್ಟಿ ಕೆಟ್ಟದಿದ್ದರೆ ದೇವರ ಸೃಷ್ಟಿಯೂ ಕೆಟ್ಟದಾಗಿ ಕಾಣುತ್ತದೆ. ಒಮ್ಮೆ ಶ್ರೀಕೃಷ್ಣ ಪರಮಾತ್ಮನು, ಧರ್ಮರಾಯ ಹಾಗೂ ದುರ್ಯೋಧನರಲ್ಲಿ ಪ್ರಪಂಚ ಪರ್ಯಟನೆ ಮಾಡಲು ಹೇಳಿ, ಪ್ರಪಂಚದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ನನಗೆ ಬಂದು ತಿಳಿಸಬೇಕು ಎಂದನಂತೆ. ಶ್ರೀಕೃಷ್ಣ ಪರಮಾತ್ಮನ ಮಾತಿನಂತೆ ಇಬ್ಬರೂ ಪ್ರಪಂಚ ಪರ್ಯಟನೆ ಮಾಡಿ ಶ್ರೀಕೃಷ್ಣನ ಕಡೆಗೆ ಮರಳಿದರಂತೆ.

Advertisement

ಏಕಾಂತದಲ್ಲಿದ್ದ ಶ್ರೀಕೃಷ್ಣನು ಮೊದಲಿಗೆ ದುರ್ಯೋಧನನ ಬಳಿ ಪ್ರಪಂಚದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ಮಾಹಿತಿ ಕೇಳಿದಾಗ ದುರ್ಯೋಧನನು, ಪ್ರಪಂಚದಲ್ಲಿ ಕೊಲೆ, ಸುಲಿಗೆ, ಅನ್ಯಾಯ, ಅಕ್ರಮ, ಹಿಂಸೆ, ಅತ್ಯಾಚಾರಗಳು ತಾಂಡವವಾಡುತ್ತಿದೆ, ಎತ್ತ ನೋಡಿದರೂ ಉತ್ತಮರು ಕಾಣಸಿಗುವುದಿಲ್ಲ, ಪ್ರಪಂಚದಾದ್ಯಂತ ಕೆಟ್ಟ ಜನರೇ ತುಂಬಿರುವರು ಎಂದನಂತೆ.

ಶ್ರೀಕೃಷ್ಣನು ಧರ್ಮರಾಯನ ಬಳಿ ಪ್ರಪಂಚ ಪರ್ಯಟನೆಯ ವಿವರ ಕೇಳಲು ಧರ್ಮರಾಯನು, ಪ್ರಪಂಚ ಸುಭೀಕ್ಷ ವಾಗಿದೆ, ಜನರೆಲ್ಲಾ ಉತ್ತಮ ಸಂಸ್ಕೃತಿ, ಸಂಪ್ರದಾಯಗಳನ್ನು ಹೊಂದಿ ಸಭ್ಯತೆಯನ್ನು ಉಳ್ಳವರಾಗಿದ್ದಾರೆ, ಮನೆ, ಮಠ, ದೇವಸ್ಥಾನಗಳಲ್ಲಿ ದೇವತಾ ಕಾರ್ಯಗಳು ನೆರವೇರುತ್ತಿದೆ ಎಂದನಂತೆ.

ಹೀಗೆ ನಮ್ಮ ಯೋಚನಾ ಲಹರಿಯಂತೆ, ನಾವು ನೋಡುವ ದೃಷ್ಟಿಕೋನದಂತೆ ನಮಗೆ ದೈವ ಸೃಷ್ಟಿಯು ಗೋಚರಿಸುತ್ತದೆ. ನಮ್ಮ ಕಣ್ಣು ಸುಂದರವಾಗಿದ್ದರೆ ಇಡೀ ಜಗತ್ತೇ ನಮಗೆ ಸುಂದರವಾಗಿ ಕಾಣುತ್ತದೆ, ನಮ್ಮ ಮನಸ್ಸು ಸುಂದರವಾಗಿದ್ದರೆ ಇಡೀ ಜಗತ್ತಿಗೆ ನಾವು ಸುಂದರವಾಗಿ ಕಾಣುತ್ತೇವೆ ಎಂಬ ಮಾತಿನಂತೆ ಒಳ್ಳೆಯದು, ಕೆಟ್ಟದ್ದು ಎಂಬುದು ನಮ್ಮ ಚಿಂತನೆಯಲ್ಲಿಯೇ ಇರುತ್ತದೆ.

ಮನದಲ್ಲಿ ಸದ್ವಿಚಾರ, ಸದ್ಚಿಂತನೆ ತುಂಬಿದ್ದರೆ ಎಲ್ಲವೂ ನಮಗೆ ಚೆನ್ನಾಗಿಯೇ ಕಾಣಿಸುತ್ತವೆ. ಹಾಗೆಯೇ ಮನದಲ್ಲಿ ಕೆಟ್ಟ ಆಲೋಚನೆಗಳೇ ತುಂಬಿದ್ದರೆ ಎಲ್ಲವೂ ನಮಗೆ ಕೆಟ್ಟದರಂತೆ ಕಾಣಿಸುತ್ತದೆ. ಕಣ್ಣು ಎಂಬುದು ಮನಸ್ಸಿನ ಕಿಟಿಕಿಯಿದ್ದಂತೆ. ನಾವು ಬಾಹ್ಯ ಪ್ರಪಂಚವನ್ನು ಕಣ್ಣಿನಿಂದ ನೋಡುತ್ತೇವೆಯಾದರೂ ನೋಡುವ ದೃಷ್ಟಿಯು ಮನಸ್ಸೆಂಬ ಒಳಗಣ್ಣಿನಲ್ಲಿ ಅಡಗಿರುತ್ತದೆ. ನಾವು ನೋಡುವ ದೃಷ್ಟಿ ಚೆನ್ನಾಗಿದ್ದರೆ ಕೆಡುಕಿನಲ್ಲಿಯೂ ಒಳಿತನ್ನೇ ಕಾಣಲು ಸಾಧ್ಯ ಆದರೆ ನಾವು ನೋಡುವ ದೃಷ್ಟಿಯೇ ಕೆಟ್ಟದಿದ್ದರೆ ಒಳಿತು ಕೂಡ ಕೆಡುಕಾಗಿ ಕಂಡೀತು!

Advertisement

ಮೊಸರಿನಲ್ಲಿಯೂ ಕಲ್ಲು ಹುಡುಕುವವರಂತೆ! ಶ್ರೀರಾಮ, ಧರ್ಮರಾಯರು ಸದ್ಚಿಂತನೆ, ಸದ್ವಿಚಾರಗಳಿಂದಲೇ ಆದರ್ಶ ವ್ಯಕ್ತಿಗಳಾಗಿ ಬದುಕಿ ತೋರಿಸಿದವರು. ಅವರಿತ್ತ ಆದರ್ಶ ಯುಗಯುಗಕ್ಕೂ ಅನ್ವಯಿಸುವಂಥದ್ದು. ಸದಿcಂತನೆ, ಸದ್ವಿಚಾರಗಳಿಂದ ಮಾನವ ದೇವರಾಗಬಲ್ಲ ಎಂಬುದನ್ನು ಶ್ರೀರಾಮನ ಬದುಕಿನುದ್ದಕ್ಕೂ ನಾವು ನೋಡಬಹುದು. ರಾವಣ, ದುರ್ಯೋಧನರಂಥವರಿಗೆ ಒಳಿತು ಕೂಡ ಕೆಡುಕಾಗಿಯೇ ಕಾಣುತ್ತದೆ.

ಇಡೀ ಲೋಕ ಸುತ್ತಿದರೂ ರಾಮ ಹಾಗೂ ಧರ್ಮರಾಯರಿಗೆ ಕೆಟ್ಟ ವ್ಯಕ್ತಿಗಳು ಕಾಣಸಿಗಲಿಲ್ಲವಂತೆ ಹಾಗೆಯೇ ಇಡೀ ಲೋಕ ಸುತ್ತಿದರೂ ರಾವಣ ಹಾಗೂ ದುರ್ಯೋಧನರಿಗೆ ಒಳ್ಳೆಯವರು ಕಾಣಸಿಗಲಿಲ್ಲವಂತೆ! ಇದೇ ಉದಾಹರಣೆ ಸಾಕಲ್ಲವೇ ನಮ್ಮ ದೃಷ್ಟಿಯಂತೆ ಈ ಸೃಷ್ಟಿ ಇರುತ್ತದೆಯೇ ಹೊರತು ಇನ್ಯಾವುದರಿಂದಲೂ ಅಲ್ಲ ಎಂದು ಅರಿಯಲು?!

ನಮ್ಮ ಮನಸ್ಸಿನ ಯೋಚನೆಗಳೇ ನಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಬೆಳೆದ ಪರಿಸರ ಹಾಗೂ ಸ್ನೇಹಿತರಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬಹುದು ಎಂಬ ಮಾತಿದೆ ಹಾಗಾಗಿ ಸಜ್ಜನರ ಸಂಗವದು ಹೆಜ್ಜೆàನು ಸವಿದಂತೆ ಎಂಬ ನುಡಿಯಂತೆ ಉತ್ತಮರ ಸಂಗದಿಂದ ನಾವು ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ಸದ್ಚಿಂತನೆ, ಸದ್ವಿಚಾರಗಳು ಮಾನವನನ್ನೂ ದೇವರನ್ನಾಗಿ ಮಾಡಬಲ್ಲದು ಎಂಬುದಕ್ಕೆ ಆದರ್ಶ ಪುರುಷ ಶ್ರೀ ರಾಮನ ವ್ಯಕ್ತಿತ್ವವೇ ಸಾಕ್ಷಿ. ದುರಾಲೋಚನೆ, ದುರ್ವಿಚಾರಗಳು ಮಾನವನನ್ನು ದಾನವನನ್ನಾಗಿ ಮಾಡಬಲ್ಲದು ಎಂಬುದಕ್ಕೆ ರಾವಣ, ದುರ್ಯೋಧನರಂಥವರೇ ಸಾಕ್ಷಿ.

 ಪ್ರಜ್ಞಾ ರವೀಶ್‌ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next