Advertisement
ಶಾಲೆಯಿಂದ ಆರಂಭವಾಗುವ ಸ್ನೇಹ ಆಲದ ಮರದಂತೆ ಜೀವನದುದ್ದಕ್ಕೂ ವಿಶಾಲವಾಗಿ ಹರಡು ತ್ತದೆ. ಶಾಲೆಯಲ್ಲಿ ಶಿಕ್ಷಕರು ಮಾಡುವ ಪಾಠಕ್ಕಿಂತ ಮೊದಲು ಗೆಳತನವೇ ಹೆಚ್ಚು ಆತ್ಮೀಯ ವಾಗಿರುತ್ತದೆ. ಅದು ಅಮೂಲ್ಯವೂ ಆಗಿರುತ್ತದೆ. ಗೆಳೆತನ ನಿಜವೇ ಆಗಿದ್ದರೆ ಅದನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿಗೂ ಮೊದಲ ಗೆಳೆತನವನ್ನು ಮರೆಯಲು ಸಾಧ್ಯವಿಲ್ಲ. ಬದುಕಿನಲ್ಲಿ ಯಾವುದೇ ಸಂದರ್ಭದಲ್ಲೂ ನೆನಪಾಗುವ ವ್ಯಕ್ತಿಯೇ ಆ ಗೆಳೆಯ ಅಥವಾ ಗೆಳತಿ.
Related Articles
Advertisement
ಸಣ್ಣ ಕೋಪ, ಪ್ರೀತಿಯ ಭಾವನೆ, ಒಂದಿಷ್ಟು ಕಾಳಜಿ, ಕೆಲವೊಂದಷ್ಟು ಸುಳ್ಳು, ನೂರಾರು ಬೈಗುಳ ಇದೆಲ್ಲ ಇದ್ದರೆ ಮಾತ್ರ ಗೆಳೆತನ ಎನ್ನಿಸಿಕೊಳ್ಳಲು ಸಾಧ್ಯ. ನಮ್ಮ ಸಂತೋಷಕ್ಕೆ ಕಾರಣವೇ ಈ ಗೆಳೆಯರು. ನನಗೂ ನನ್ನ ಜೀವನದಲ್ಲಿ ಒಳ್ಳೆ ಗೆಳೆಯರು ಸಿಕ್ಕಿದ್ದಾರೆ. ಅಷ್ಟರಮಟ್ಟಿಗೆ ನಾನು ಕೂಡ ಅದೃಷ್ಟಶಾಲಿ. ಯಾವತ್ತೂ ಯಾವ ಸಂದರ್ಭದಲ್ಲೂ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದವರಲ್ಲ ಅವರು.
ಗೆಳೆಯರಿಂದ ಕಲಿತ ಪಾಠಗಳು ಸಾವಿರಾರು. ಪ್ರೀತಿಯಲ್ಲಿ ಸೋತು ನಿಂತಾಗಲೂ ಹೆಗಲು ಕೊಟ್ಟು ನಿಂತಿದ್ದಾರೆ. ಕೆಲವೊಮ್ಮೆ ಬದುಕು ಇಷ್ಟೇ ಎಂದು ಬೈದು ಬುದ್ಧಿ ಹೇಳಿದ್ದೂ ಇದೆ. ಅದೇ ರೀತಿ ಗೆಳೆಯರ ಜತೆ ಸೇರಿ ಮಾಡಿದ ತುಂಟಾಟಗಳಿಗೇನೂ ಕಡಿಮೆ ಇಲ್ಲ. ಗೆಳೆತನ ಎಂದರೇನೇ ಹಾಗೆ. ಯಾವುದೇ ಸ್ವಾರ್ಥವಿಲ್ಲದ್ದು, ನಿಷ್ಕಲ್ಮಶ ಅನುಭೂತಿ. ಅದನ್ನು ಪಡೆದವನೇ ನಿಜವಾದ ಶ್ರೀಮಂತ.
ಸ್ನೇಹ ಎನ್ನುವುದು ಬಡವ-ಶ್ರೀಮಂತ, ಜಾತಿ-ಧರ್ಮ, ಯಾವುದೇ ಹಂಗಿಲ್ಲದೆ ಬೆಳೆಯುತ್ತದೆ. ಪ್ರತೀ ವ್ಯಕ್ತಿಗೆ ಧೈರ್ಯ ತುಂಬುವ, ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಸ್ನೇಹಿತರ ಬಳಗ ಆನಂದದ ಸಾಗರವನ್ನೇ ಸೃಷ್ಟಿಪಡಿಸುತ್ತದೆ. ನೀವೂ ಅಷ್ಟೇ, ನಿಮ್ಮ ನಿಜವಾದ ಗೆಳೆತನ ಹಾಗೂ ಗೆಳೆಯ ಅಥವಾ ಗೆಳತಿಯನ್ನು ಎಂದಿಗೂ ಕಳೆದುಕೊಳ್ಳದಿರಿ.
- ವಿಧೀಕ್ಷಿತಾ
ಮಂಗಳೂರು ವಿವಿ