ವರುಣ ದೇವ ಗಿಡ ಮರಗಳ ಮೇಲೆಲ್ಲ ಜಾರಿ ಅಂಗಳ ತುಂಬಾ ರಾಶಿ ರಾಶಿ ತರಗೆಲೆ. ಮಣ್ಣ ವಾಸನೆ ಹೊತ್ತು ಬೀಸುವ ಗಾಳಿಗೆ ಮುಗಿಲ ಬೆನ್ನಟ್ಟಿ ಉಬ್ಬಸ. ಬಾನ ಮೂಲೆಯಲ್ಲಿ ಗುಡುಗಿನ ಮೊರೆತ. ಮಳೆಯಡುಗೆಯ ಪಾಕ ಬೇಯುವಾಗ ಇಷ್ಟು ಸದ್ದೇ! ಪಟಪಟನೆ ಸುರಿದ ಹನಿ ನೀರ ರಭಸಕ್ಕೆ ಕಾದ ನೆಲ ತುಂಬಾ ಒಣ ಮಣ್ಣು ಮತ್ತು ಹಸಿ ನೀರ ರಂಗೋಲಿ.
ಮೊದಲ ಮಳೆಗೆ ಮುಖವೊಡ್ಡಿ ನಿಂತ ಎಲೆಗಳು, ಮೀಯಿಸೆಂದು ಸಾಲಾಗಿ ಅಮ್ಮನೆದುರು ನಿಂತ ಬೆತ್ತಲೆ ಮಕ್ಕಳು. ಎಲೆ ತುದಿಯ ಮೊದಲ ಹನಿಗೆ ನಸುಗೆಂಪು ಬಣ್ಣ. ಅರ್ಥವಾಗದಿದ್ದರೂ ಹನಿಗಳ ಪಿಸುನುಡಿಗೆ, ಮೃದು ಸೋಕುವಿಕೆಗೆ ಜೀವ ಸಂಕುಲದಿ ಪುಳಕ!
ಹನಿಗಳನ್ನು ಮುಟ್ಟಿಸಿಕೊಳ್ಳದಂತೆ, ಮುಟ್ಟಾಟ ಆಡುವಂತೆ ಒಣ ಹಾಕಿದ ಬಟ್ಟೆಗಳ ಒಳ ತರಲು ಅಜ್ಜಿ, ಅತ್ತೆ, ಅಮ್ಮ ಓಡುತ್ತಿದ್ದಾರೆ. ತಲೆ ಒದ್ದೆ ಆಗದಿರಲಿ ಎಂದು ಸೆರಗಂಚ ಮುಡಿಗೇರಿಸಿದ್ದಾರೆ. ಬೇಕೆಂದೇ ಅಲ್ಲಲ್ಲಿ ಒದ್ದೆಯಾಗಿದ್ದಾರೆ. ಒಣ ಬಟ್ಟೆಗಳ ಅವಸರಿಸಿ ಎಳೆದ ರಭಸಕ್ಕೆ ಹಗ್ಗ ತುಂಡಾಗಿದೆ.
ಸುಡು ಬಿಸಿಲಿಗೆ ಅದೂ ಒಣಗಿರಬೇಕು. ಯಾರದೋ ಅಂಗಳದಲ್ಲಿ ಮಕ್ಕಳು ಮಳೆಹನಿಗಳ ಸೋಕಿಸಿಕೊಂಡು ಕೇಕೆ ಹಾಕಿ ಕುಣಿಯುತ್ತಿದ್ದಾರೆ. ಕೋಳಿ ಗೂಡಲ್ಲಿ ಮರಿ ಕೋಳಿಗಳ ಕಿಣಿ ಕಿಣಿ ಸದ್ದು. ಹಟ್ಟಿಯಲ್ಲಿ ದನ ಮೈ ಕೊಡವಿ ಬಾಯಾಡಿಸುತ್ತಿದೆ. ಅಪ್ಪ, ಮಾವ, ಅಣ್ಣ ಹಿತ್ತಿಲಿನಾಚೆ ಸೀಳಿಟ್ಟ ಕಟ್ಟಿಗೆಗೆ ಟರ್ಪಾಲು ಹೊದೆಯುತ್ತಿದ್ದಾರೆ. ಮಾಡಿನ ಹಂಚುಗಳ ತುದಿಯಂಚಿನಲ್ಲಿ ನೀರ್ಮುತ್ತ ಮಣಿ ಒಂದು ಇನ್ನೊಂದರ ಕೈ ಬಿಟ್ಟು ಜಾರಿ ಬಿದ್ದು ಪಟ್ಟೆಂದು ಒಡೆದ ಸದ್ದು!
ಮೋಡಗಳ ಗಾಳಿ ಹಾರಿಸಿಕೊಂಡು ದೂರದೂರಿಗೆ ಹೋಯಿತು. ಸುಮ್ಮನೇ ಗುಡು ಗುಡು ಮತ್ತು ನಾಲ್ಕು ಹನಿ! ಪಕ್ಕದ ಮನೆಯ ಅಜ್ಜಿ ಗೊಣಗುವುದು ಕೇಳಿಸಿದೆ. ಪಾಪಿಗಳು ಪುಣ್ಯವಂತರು ಎಲ್ಲೆಡೆ ಹಂಚಿ ಹೋಗಿರಬೇಕು, ಹಾಗಾಗಿ ಅಲ್ಲೂ ಒಂದಿಷ್ಟೂ, ಇಲ್ಲೂ ಒಂದಿಷ್ಟು ಮಳೆಯಾಗಿದೆಯಂತೆ ಎಂಬ ಸುದ್ದಿಗಳು ಬರುತ್ತಿವೆ. ತಂಪು ಗಾಳಿ ಕಚಗುಳಿಯಿಡುತ್ತಿದೆ. ನೀರ ಹೊತ್ತು ತಂದ ಅದಕ್ಕೂ ಚಳಿ ಹಿಡಿದಿದೆ.
ಆಕಾಶ ಹನಿಸಿದ ಜಲವೆಲ್ಲವನ್ನು ಬಾಯಾರಿದ ನೆಲ ಒಮ್ಮೆಗೇ ಹೀರಿದೆ. ಬಾನೀಗ ಭುವಿಗೆ ಮೊಲೆಯುಣಿಸಿ ಹಗುರವಾಗಿದೆ. ಬಾಗಿ ತೂಗುವ ರೆಂಬೆಗಳು ಅಲ್ಲೊಂದು ಇಲ್ಲೊಂದು ಅಳಿದುಳಿದ ಹನಿಗಳ ಜೋಪಾನವಾಗಿ ಹನಿಯುತ್ತಿವೆ. ಒಡೆದ ಮಳೆ ಬಿತ್ತುಗಳು ದೂರ ಬಯಲಲ್ಲಿ ನೀರ ಬಳ್ಳಿಗಳ ಹಡೆದಿವೆ. ಮರಿ ಹಕ್ಕಿಗಳು ಪುರ್ರೆಂದು ಹೊಸ ಹುರುಪಿನಲ್ಲಿ ಹಾರಿವೆ. ಬಿಸಿಲಿಗೆ ಬೇಸತ್ತು ಸತ್ತಂತಿದ್ದ ಬೇರುಗಳು ಸಣ್ಣಗೆ ಜಡ ಮುರಿಯುತ್ತಿವೆ. ನಾಳೆ ಬರುವೆ ಎನ್ನುವಂತೆ ಮೊದಲ ಮಳೆ ಮರಳಿದೆ.
-ರಾಜಶ್ರೀ ಟಿ. ರೈ
ಪೆರ್ಲ