Advertisement
ನಿಜಕ್ಕೂ ಅದೃಷ್ಟವಂತನೆಂದರೆ ಯಾರು? ಅದು ಹಣೆಯಲ್ಲಿ ಬ್ರಹ್ಮ ಬರೆದು ಕಳಿಸಿದರೆ, ಇದನ್ನು ಓದಿ ಹೇಳಿದವರಾರು? ಹೀಗೆ ಅದೃಷ್ಟ ರೇಖೆಯ ಬಗ್ಗೆ ಕೆದಕುತ್ತಾ ಹೋದರೆ ಪ್ರಶ್ನೆಗಳು ಸಾಲು ಸಾಲಾಗಿ ಕಣ್ಮುಂದೆ ಅಪ್ಪಳಿಸುತ್ತವೆ ವಿನಃ ಅದಕ್ಕೆ ಸೂಕ್ತ ಪರಿಹಾರ ಲಭಿಸುವ, ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳುವ ಉಪಾಯದ ಮಾರ್ಗದತ್ತ ಯಾರಾದರೂ ಗಮನಹರಿಸುವರೇ? ಬಡತನದಲ್ಲಿ ಹುಟ್ಟಿದವರೆಲ್ಲಾ ನತದೃಷ್ಟರೇ ಎಂದುಕೊಂಡಿದ್ದರೆ, ನಾವಿಂದು ಭವ್ಯ ಭಾರತದಲ್ಲಿ ಸ್ವತಂತ್ರತೆಯ ಬದುಕನ್ನು ಬದುಕುತ್ತಲೇ ಇರಲಿಲ್ಲ!
Related Articles
Advertisement
ಬೀದಿ ದೀಪಗಳ ಮಂದ ಬೆಳಕಿನಲ್ಲಿ, ತಮ್ಮ ವಿದ್ಯಾರ್ಥಿವೇತನದಿಂದಲೇ ಓದಿನ ಸಾಧನೆಗೈದವರು ಸರ್. ಎಂ. ವಿಶ್ವೇಶ್ವರಯ್ಯ. ಹೀಗೇ ಹೇಳುತ್ತಾ ಹೋದರೆ ಸಾವಿರಾರು ಮಹನೀಯರು, ಸಾಧಕರು ನಮ್ಮ ಕಣ್ಮುಂದೆ ಸುಳಿಯುತ್ತಾರೆ. ಆ ಕಾಲದಲ್ಲಿದ್ದ ದುಸ್ಥಿತಿಯನ್ನು ನಾವೀಗ ಅನುಭವಿಸುತ್ತಿಲ್ಲ, ಆದರೆ ಈಗ ನಮಗೆ ದೊರಕಿರುವ ಸವಲತ್ತುಗಳಲ್ಲೇ ತೃಪ್ತಿಪಟ್ಟುಕೊಳ್ಳುತ್ತಾ, ಅದೃಷ್ಟ ರೇಖೆಯ ಬಗ್ಗೆ ಚರ್ಚಿಸುತ್ತಾ ಶಿಕ್ಷಣದ ಮೌಲ್ಯ ಮರೆತುಹೋಗಿದ್ದೇವೆ. ಇಂತಹ ಮಹಾನ್ ಸಾಧಕರ ಪರಿಶ್ರಮದ ಬೆಲೆಯು ಅವರು ಅವಕಾಶಗಳನ್ನ ಸೃಷ್ಟಿಸಿಕೊಂಡಂತಹ ಜಾಣತನವು ನಮಗೆಲ್ಲಾ ಮಾದರಿಯಾಗಬೇಕಿದೆ.
ಅವಕಾಶಗಳನ್ನು ಹುಡುಕಿಕೊಂಡು ಹೋಗುವವ ಬುದ್ಧಿವಂತನಾದರೆ, ಅವಕಾಶಗಳು ತನ್ನಿಂದೆಯೇ ಬರುವಂತೆ ಮಾಡುವವ ಅತಿ ಬುದ್ಧಿವಂತಿಕೆಯ ಅವಕಾಶಗಳ ಸೃಷ್ಟಿಕರ್ತನಾಗುತ್ತಾನೆ
ಅವಶ್ಯಕತೆಯ ಅನುಗುಣವಾಗಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ಇರುವುದು ಚತುರನಿಗೆ ಮಾತ್ರ. ಒಬ್ಬ ಚತುರನಿಗೆ ನಿರ್ದಿಷ್ಟತೆ ಇರುತ್ತದೆ, ಅವನಿಗೆ ಅವನ ಸಾಮರ್ಥ್ಯದ ಬಗ್ಗೆ ಭೌತಿಕವಾಗಿ ಗೊತ್ತಿರುತ್ತದೆ. ಬುದ್ಧಿಶಕ್ತಿಯನ್ನು ಹೇಗೆ, ಎಲ್ಲಿ , ಯಾವ ಪ್ರಮಾಣದಲ್ಲಿ ವ್ಯಯಮಾಡಬೇಕೆಂಬ ಸಾಮಾನ್ಯ ಜ್ಞಾನ ಇದ್ದವನು ತನ್ನ ಗುರಿ ತಲುಪಬಲ್ಲ, ಸಾಧಿಸಬಲ್ಲ. ಇದಕ್ಕಾಗಿ ಕಠಿನ ತಪಸ್ಸು ಮಾಡಬೇಕೆಂದಿಲ್ಲ ತಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಚಂಚಲತೆಯ ಭಾವನೆಗಳು ಬಳಿ ಸುಳಿಯದಂತೆ ಎಚ್ಚರವಹಿಸಬೇಕು.
ದೊಡ್ಡ ಕೆಲಸಗಳನ್ನು ಸಾಧಿಸುವುದಕ್ಕೆ ನಾವು ಕೆಲಸ ಮಾಡಿದರೆ ಮಾತ್ರ ಸಾಲದು, ಕನಸನ್ನು ಕಾಣಬೇಕು; ಯೋಜನೆ ಹಾಕಿದರೆ ಮಾತ್ರ ಸಾಲದು, ಅದರಲ್ಲಿ ನಂಬಿಕೆಯು ಇರಬೇಕು ಎಂದು ಅನತೋಲಿ ಫ್ರಾನ್ಸ್ ಹೇಳಿದ್ದಾರೆ.
ಬದ್ಧತೆಯ ಬುನಾದಿಯನ್ನು ಭದ್ರಗೊಳಿಸಬೇಕು
ಒಮ್ಮೆ ಪುರಾಣದತ್ತ ಮುಖಮಾಡಿದರೆ, ಮಹಾಭಾರತದಲ್ಲಿ ಸೂತಪುತ್ರನಾದ ಕರ್ಣನನ್ನು ಅವನ ಸಾಮರ್ಥ್ಯದ ಮೇರೆಗೆ ದುರ್ಯೋಧನನು ಆಪ್ತಸ್ನೇಹಿತನನ್ನಾಗಿಸಿಕೊಳ್ಳುತ್ತಾನೆ ಹಾಗೂ ಸೂತಪುತ್ರನೆಂಬ ಕಾರಣಕ್ಕೆ ಅವಮಾನಕೀಡಾಗುವ ಅಂಗರಾಜ ಕರ್ಣನಿಗೆ ಕುರುವಂಶದ ಯುವರಾಜನ ಸ್ನೇಹದೊರಕಿದ ಕಥೆಯ ನಾವೆಲ್ಲ ಪುರಾಣದಲ್ಲಿ ಓದಿಯೋ, ದೃಶ್ಯಮಾಧ್ಯಮದಲ್ಲಿ ನೋಡಿಯೋ, ಕೇಳಿಯೋ ತಿಳಿದಿರುತ್ತೇವೆ ಮತ್ತೂ ಇಲ್ಲಿ ಅವಕಾಶಗಳನ್ನು ಅವರ ಸಾಮಾರ್ಥ್ಯದ ಅನುಸಾರದಲ್ಲಿ ಪಡೆಯಲಾಗಿರುತ್ತದೆ. ಇಲ್ಲಿನ ಕರ್ಮವೂ ಅದೇ ಹೇಳುತ್ತದೆ.
ಇಲ್ಲಿ ಉನ್ನತವಾದದ್ದನ್ನು ಪಡೆಯಬೇಕೆಂದರೆ, ದೊಡ್ಡದ್ದನ್ನು ಸಾಧಿಸಬೇಕೆಂದಿದ್ದರೆ ಮೊದಲು ಅದಕ್ಕೆ ಬೇಕಾದ ಬದ್ಧತೆಯ ಬುನಾದಿಯನ್ನು ಭದ್ರಗೊಳಿಸಬೇಕು.
ಅವಕಾಶಗಳು ನಮ್ಮತ್ತ ಧಾವಿಸುವಂತಹ ಧ್ಯೇಯವನ್ನು ಛಲವಾಗಿಸಿಕೊಳ್ಳಬೇಕಾಗುತ್ತದೆ. ಹಾಗೂ ಆಯ್ದುಕೊಂಡ ಜೀವನ ಮಾರ್ಗದಲ್ಲಿ ಗುರಿ ತಲುಪುವ ಸತತ ಯತ್ನವನ್ನು ನಿರಂತರವಾಗಿ ಪಟ್ಟಿಡಿದು ಮಾಡುತ್ತಿರಬೇಕು. ಬಡತನದಲ್ಲಿ ಬೆಳೆಯುವುದು ಪಾಠವಾದರೆ, ಅದರಿಂದ ಅದೃಷ್ಟದತ್ತ ಸಾಗುವ ಹಾದಿಯಲಿ ಅವಕಾಶಗಳನು ಸೃಷ್ಟಿಸಿಕೊಳ್ಳುವ ಚತುರತೆ ಇರುವವನು ಸಾಧಕನಾಗುತ್ತಾನೆ, ಇತಿಹಾಸ ಸೃಷ್ಟಿಸುತ್ತಾನೆ.
–ದೀಪಿಕಾ ಬಾಬು
ಮಾರಘಟ್ಟ