ಕನ್ನಡ ಎಂದರೆ ಬರಿ ನುಡಿಯಲ್ಲ ಅದರರ್ಥ ಹಿರಿದಿದೆ, ಜಲವೆಂದರೆ ಬರಿ ನೀರಲ್ಲ ಅದು ಪಾವನ ತೀರ್ಥ ಎಂಬ ಕೆ.ಎಸ್.ನಿಸಾರ್ ಅಹಮದ್ ಅವರ ಮಾತಿನಂತೆ ಕನ್ನಡ ಬರಿ ನುಡಿಯಲ್ಲ ಅದು ನಮ್ಮ ಉಸಿರು, ಆತ್ಮ. ಜನಪದ ಗೀತೆಯೊಂದು ಹೀಗಿದೆ, ಯಾರು ಆದರೂ ಹೆತ್ತ ತಾಯಿಯಂತೆ ಆದರೆ ಸಾವಿರ ಸೌದೆ ಒಲೆಯಲ್ಲಿ ಉರಿದರೂ ದೀವಿಗೆಯಂಥ ಬೆಳಕುಂಟೆ? ಎಂಬಂತೆ ಹಲವಾರು ಸಂಬಂಧಿಕರಿದ್ದರು ಹೆತ್ತ ತಾಯಿ ಕೊಡುವ ಪ್ರೀತಿಯನ್ನು ಯಾರೂ ತೋರಿಸಲು ಸಾಧ್ಯವಿಲ್ಲ. ಮಾತೃಭಾಷೆಯೊಂದಿಗಿನ ನಮ್ಮ ಬಾಂಧವ್ಯವನ್ನು ಬೇರೆ ಭಾಷೆ ತುಂಬಲು ಸಾಧ್ಯವಿಲ್ಲ. ಇಂದು ಕಲಿಯುತ್ತಿರುವ ಮಕ್ಕಳು ಕನ್ನಡದ ಬರವಣಿಗೆ ಹಾಗೂ ಉಚ್ಚಾರದಲ್ಲಿ ಮಾಡುವ ದೋಷಗಳನ್ನು ಗಮನಿಸುವಾಗ ಕನ್ನಡದ ಉಳಿವು ಹೇಗೆ ಎಂಬ ಆತಂಕ ಮೂಡುತ್ತದೆ.
ವಿನೋಬಾ ಭಾವೆಯವರು ಕನ್ನಡ ಲಿಪಿಯನ್ನು ವಿಶ್ವಲಿಪಿಗಳ ರಾಣಿ ಎಂದು ಕರೆದಿದ್ದಾರೆ. ಈ ಸುಂದರ ಲಿಪಿಯನ್ನು ಹೊಂದಿರುವ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದು ಐವತ್ತು ಸಂವತ್ಸರ ಪೂರೈಸಿದೆ. ಆದರೆ ಅನ್ಯ ಭಾಷೆಗಳ ಪ್ರಭಾವಕ್ಕೆ ಸಿಲುಕಿ ಕನ್ನಡ ಮರೆಯಾಗುವುದೇನೋ ಎಂಬ ಆತಂಕವೂ ಇದೆ. ಭಾವನೆಯನ್ನು ವ್ಯಕ್ತಪಡಿಸಲು ಭಾಷೆ ಒಂದು ಮಾಧ್ಯಮ. ಅದು ಕನ್ನಡವೇ ಆಗಬೇಕೆಂಬ ಅಚಲ ಭಕ್ತಿ ನಮ್ಮಲ್ಲಿರಬೇಕು.
ಕವಿ ಜಿ.ಪಿ.ರಾಜರತ್ನಂ ಅವರು ಹೇಳಿರುವಂತೆ ನರಕಕಿಳಿದ ನಾಲಗೆ ಸೀಳಿ ಬಾಯಿ ಹೊಲ್ಸಾಕಿದ್ರುನೂ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ ಎಂಬ ಕನ್ನಡ ಅಭಿಮಾನ ನಮ್ಮದಾಗಬೇಕು. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂಂದಾದ, ಸುಮಾರು ಎರಡೂವರೆ ಸಹಸ್ರಮಾನಗಳ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡಕ್ಕೆ ಸಂಬಂಧಿಸಿದ ಕೆಲವು ಅದ್ಭುತ ಸಂಗತಿಗಳನ್ನು ಸ್ಮರಿಸುವುದು ಸಂದಭೋìಚಿತ. ಕನ್ನಡ ಭಾಷೆ ಎರಡೂವರೆ ಸಹಸ್ರಮಾನದಷ್ಟು ಹಳೆಯದು !
2500 ವರ್ಷಗಳ ಹಿಂದೆ ಕನ್ನಡ ಭಾಷೆಯು ಅಸ್ತಿತ್ವದಲ್ಲಿತ್ತು ಎಂದು ಸಾಬೀತಾಗಿದೆ. ಅಲೆಕ್ಸಾಂಡರ್ ಕಾಲದಲ್ಲಿ ಅಂದರೆ ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ಸಿಕ್ಕ ತಾಳೆಗರಿಯೊಂದರಲ್ಲಿ ಕನ್ನಡದ ಊರಲ್ಲಿ ಎಂಬ ಶಬ್ದ ಪತ್ತೆಯಾಗಿ ಅಚ್ಚರಿ ಮೂಡಿಸಿತ್ತಾದರೂ ಆ ತಾಳೆಗರಿಗಳನ್ನು ಸುಟ್ಟಿದ್ದರಿಂದ ಕನ್ನಡಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷಾವೊಂದು ನಾಶವಾಗಿತ್ತು.
-ಪಂಪಾಪತಿ ಎಚ್.
ಕನ್ನಡ ವಿಶ್ವವಿದ್ಯಾಲಯ ಹಂಪಿ