Advertisement

UV Fusion: ಜೀವಂತಿಕೆ

03:52 PM Nov 24, 2024 | Team Udayavani |

ಮಹಾಸಾಗರದ ನಡುವೆ ದೋಣಿಯಲ್ಲಿ ನಾನು ಮತ್ತು ವಿಧಿ ಕನಸುಗಳಿಗಾಗಿ ಹೋರಾಡುತ್ತಿದ್ದೆವು. ಅದರ ನಿರ್ಭಾವುಕತೆಯ ವಿರುದ್ಧ ದುರದೃಷ್ಟಕರ ಸೆಣಸಾಟ ಮಾಡುತ್ತಲೇ; ಬದುಕಿನ ಚಟುವಟಿಕೆಗೆ ಜೀವ ತುಂಬಿಕೊಳ್ಳುತ್ತಿದ್ದೆ. ಪ್ರೇಮ, ಆನಂದ, ಕೊನೆಗೆ ವ್ಯಥೆಯನ್ನೂ ಅದು ಉಳಿಸಲಿಲ್ಲ. ಅದೃಷ್ಟವು ಆಗಾಗ ಹಸಿವು ನೀಗಿಸುತ್ತಿತ್ತು.

Advertisement

ಹೃದಯವನ್ನು ರಾಯಭಾರಿ ಮಾಡಿದೆ, ವಿಧಿ; ಕಿವಿಯ ಮೊಗವನ್ನು ನೋಡಲು ಬಿಡಲಿಲ್ಲ. ಮನಸಿಟ್ಟ ನಾನು ಪ್ರಯತ್ನಗಳನ್ನು ಮಲಗಲೂ ಬಿಡಲಿಲ್ಲ. ಆಗಲೇ ತಿರುವೊಂದು ಕೈಹಿಡಿದು ಎಳೆದುಕೊಂಡಿತು. ಕ್ಷಣಕಾಲ ತಲೆ ನೆಲಕ್ಕಿಟ್ಟೆ; ಕೆಟ್ಟ ನಿದ್ದೆ ಮೈಮೇಲೆಲ್ಲಾ ಬಿದ್ದು ಹೊರಳಾಡಿತು. ತಿರುವಿನ ಮೂಲೆಯೊಂದರಲ್ಲಿ ಗೋಡೆಯ ಮೇಲೆ ಬರೆದಿದ್ದ “ಎಚ್ಚರಿಕೆ’ ಮತ್ತೇ ಕಡಲಿಗೆ ಧುಮುಕಿಸಿ, ದಡ ಸೇರುವ ಮುಕ್ತಾಕಾಂಕ್ಷೆಯನ್ನು ಗಾಳಿಗೆ ಕೊಟ್ಟು ಸಾಗಹಾಕಿತ್ತು.

ನಕ್ಷತ್ರಗಳ ಬೆಳಕಲ್ಲಿಯೂ ಬಾಡುತ್ತಿದ್ದ ಕನಸುಗಳು, ಸೂರ್ಯನ ಬಿಸಿಲಿಗೆ ಒಣಗುತ್ತಿದ್ದ ನಗು, ಹತ್ತಾರು ಹಗಲು-ರಾತ್ರಿಗಳ ಅಣಕುಗಳು ಕಾಲದ ದವಡೆಯ ಕಾಲಡಿಯವರೆಗೂ ತಲೆ ಹೊತ್ತೂಯ್ದು ಶರಣಾಗಿಸಿದ್ದವು. ಆ ಘಳಿಗೆ ವಿಧಿಯೂ; ಸ್ವಭಾವ ಬದಲಾಗದಿದ್ದರೂ, ನನ್ನೊಂದಿಗೆ ಅನಿವಾರ್ಯತೆಯ ತಾತ್ಕಾಲಿಕ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟಿತ್ತು.

ಏನಾದರೂ ಉಪ್ಪಿನ ಮಹಾಸಾಗರದ ನಡುವೆ ದಿಕ್ಕಿನ ಗಾಳಿಗಂಧವೂ ಗೊತ್ತಾಗದ ಸ್ಥಿತಿಯಲ್ಲಿ ಅಸಹಾಯಕತೆಗೆ ಕೈಕುಲುಕಿ, ಭರವಸೆಯ ಮೈದವಡಿ ಅಂತ್ಯದ ತಲೆಯನ್ನು ನನ್ನ ತೊಡೆಯ ಮೇಲೆ ಹಾಕಿಕೊಂಡು ಲಾಲಿ ಹಾಡಿದೆ. ಸ್ವರವು ಒಣಗಂಟಲಿನಲ್ಲಿ ಸಿಕ್ಕಿ ಹೆಣಗಾಡಿಕೊಂಡೆ ಸಹಕರಿಸುತ್ತಿತ್ತು. ನಿಶ್ಶಕ್ತಿಯು ಪೂರ ತಬ್ಬಿಕೊಂಡ ಕ್ಷಣಕ್ಕೆ, ವಿಧಿಯೂ ಕಾಲದ ಬಾಯಿಗೆ ಬಂದು ಮಲಗಿತ್ತು.

ಆದರೆ ಕಥೆಯೂ ಬೇರೆಯೇ ಬರೆದುಕೊಂಡಿತ್ತು. ಕಣ್ಣು ಮೈಕೊಡವಿಕೊಂಡು ಎದ್ದಾಗ, ವಿದಾಯವನ್ನು ಹೇಳದೆ ವಿಧಿ; ಜತೆಬಿಟ್ಟು ಕಾಡನ್ನು ಸೇರಿತು. ಕಣ್ಣೀರು ಮಾತ್ರ ತಿರುಗಿಯೂ ನೋಡದೆ ಹೋದ ವಿಧಿಯ ನೆನೆದು ಎದೆನಡುಗಿ ಹಾರಿ ಹೋಗುವಂತೆ ಗೋಳಾಡುತ್ತಿತ್ತು. ನಾನು; ವಿಧಿಗೂ – ನನಗೂ ಹುಟ್ಟಿಕೊಂಡಿದ್ದ ಅನುಬಂಧಕೆ ಹೆಸರನ್ನು ಹುಡುಕಾಡುತ್ತಾ ಈಗಲೂ ಒಂಟಿಯಾಗಿದ್ದೇನೆ. ಕಾಲವು ದವಡೆಯಿಂದ ಹೊರ ಉಗಿದು ಧ್ಯಾನಕ್ಕೆ ಕುಳಿತುಕೊಂಡಿತು.

Advertisement

ದೋಣಿಯಲ್ಲಿ ನನಗೂ – ವಿಧಿಗೂ ಗಂಟಾಕಿ, ವಿಧಿಗೆ ನಿಲುಕದಂತೆ ನನ್ನನ್ನು ಹೊತ್ತು ತಂದು ದಡ ಸೇರಿಸಿದ್ದ ದಯೆ; ಮಾಸಿದ್ದ ನನ್ನ ಮೈಮೇಲೆ ಮೌನಕ್ಕೆ ಶರಣಾಗಿ ಹೋಗಿತ್ತು. ಬದುಕು ಮಾತ್ರ ಆಗಲೇ ನನ್ನ ನೋಡಿ ಮುಗುಳ್ನಕ್ಕಿದ್ದು.

- ಸಿಮೂರ ಮರಿದಾಸನಹಳ್ಳಿ

ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next