Advertisement

UV Fusion: ಗುರುವೆಂಬ ದೈವ

07:57 AM Sep 05, 2023 | Team Udayavani |

ಮಹಾನ್‌ ಚಿಂತಕ ಸರ್ವಜ್ಞನ ಮಾತಿನಂತೆ ಗುರುವೇ ದೈವ. ಗುರುವೇ ಬಂದು. ಗುರು ಕಲಿಸುವ ವಿದ್ಯೆಯಿಂದಲೇ ನಾವೆಲ್ಲರೂ ಪುಣ್ಯ ಗಳಿಸುವೆವು ಎನ್ನುವ ಸನಾತನ ಸಂಸ್ಕೃತಿಯ ಆರಾಧಕರು ನಾವುಗಳು. ಗುರು ಎನ್ನುವ ದೀಪ ನಮ್ಮ ಜೀವನದಲ್ಲಿ ಬೆಳಗದೆ ಹೋಗಿದ್ದರೇ ಅಜ್ಞಾನದ ಅಂಧಕಾರದಲ್ಲಿ ಮುಳುಗುವ ಸನ್ನಿವೇಶ ನಮ್ಮದಾಗಿರುತ್ತಿತ್ತೇನೋ. ಗುರು ಎಂದರೆ ಕೇವಲ ಜ್ಞಾನ, ವಿದ್ಯೆ ನೀಡುವವನಲ್ಲ, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನಾಗಿಸಬಲ್ಲ ಮಹಾನ್‌ ಅದಮ್ಯ ಚೇತನ ಶಿಕ್ಷಕ. ಆತ ಕೇವಲ ಬಾಹ್ಯ ಪ್ರಪಂಚಕ್ಕೆ ತನ್ನ ವಿದ್ಯಾರ್ಥಿಯನ್ನು ಪರಿಚಯಿಸುವುದಲ್ಲದೇ ವಿದ್ಯಾರ್ಥಿಯ ಅಂತರಂಗದ ಶಕ್ತಿಯನ್ನು ಅವರಿಗೆ ಪರಿಚಯಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾನೆ. ಅ ಆ ಇ ಈ ಯಿಂದ ಹಿಡಿದು ನಿರರ್ಗಳ ಇಂಗ್ಲಿಷ್‌ ಮಾತಿನಲ್ಲೂ ಶಿಕ್ಷಕ ಕಲಿಸಿದ ಪಾಠ ಅಪಾರ.

Advertisement

ಹಿಂದೆ ಗುರು ಮುಂದೆ ಗುರಿ ಇದ್ದರೆ ವೀರರ ದಂಡೆ ಮಾರ್ಪಡುತ್ತದೆ ಎನ್ನುವ ಮಾತಿನಂತೆ ನಮ್ಮೆಲ್ಲರ ಯಶಸ್ವಿ ಜೀವನದ ಬಹು ಪಾಲು ಶ್ರೇಯ ಶಿಕ್ಷಕರದ್ದೇ ಎನ್ನುವುದು ನನ್ನ ಅಭಿಪ್ರಾಯ. ಕೇವಲ ವಿದ್ಯೆ ಕಲಿಸುವುದರಿಂದ ಒಬ್ಬ ಒಳ್ಳೆಯ ಶಿಕ್ಷಕನಾಗಲಾರ. ಮಗುವಿನ ಮನಸ್ಸು, ಆಸಕ್ತಿ, ಪ್ರತಿಭೆ ಅರಿತವ ಮಾತ್ರ ಒಳ್ಳೆಯ ಶಿಕ್ಷಕನಾಗಲು ಸಾಧ್ಯ. ಈ ನೆಲೆಗಟ್ಟಿನಲ್ಲಿ ಯೋಚಿಸುತ್ತಾ ಹೋದರೆ ಶಿಕ್ಷಕರನ್ನು ಪಡೆಯುವ ವಿಚಾರದಲ್ಲಿ ನಾನು ನಿಜವಾಗಿಯೂ ತುಂಬಾ ಪುಣ್ಯ ಮಾಡಿದ್ದೇವೆ ಅಂದರೆ ತಪ್ಪಾಗಲಿಕ್ಕಿಲ್ಲ ನನ್ನ ಬಾಲ್ಯದ ಮೊದಲ ಅಕ್ಷರದಿಂದ ಹಿಡಿದು ಪದವಿಯ ಬ್ಯಾಲನ್ಸ್‌ ಶೀಟ್‌ ಸರಿದೂಗಿಸುವ ತನಕ ನಾ ಪಡೆದ ಗರುವರ್ಯರು ಎಲ್ಲರೂ ನನ್ನ ಶಿಕ್ಷಣದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದವರು. ನನ್ನಲ್ಲಿ ಹುದುಗಿದ ಸುಪ್ತ ಪ್ರತಿಭೆಯನ್ನು ನನಗರಿವಿಲ್ಲದಂತೆ ವೇದಿಕೆ ಮುಂದೆ ಸಾದರಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ನನ್ನ ಪ್ರತೀ ಹೆಜ್ಜೆಯಲ್ಲೂ ಮಾರ್ಗದರ್ಶಕರಾಗಿ ನಿಂತು ಭರವಸೆಯ ಬದುಕಿಗೆ ದಾರಿ ಮಾಡಿ ಕೊಟ್ಟವರು. ಭಯ ಪಟ್ಟು ನಿಂತಾಗ ಆತ್ಮ ಸ್ಥರ್ಯ ತುಂಬಿ, ಕೈ ಚೆಲ್ಲಿ ಕೂತಾಗ ಸಾಧಿಸುವ ಮಾರ್ಗ ತೋರಿಸಿ, ಅರಿವಿಲ್ಲದ ವಿಷಯಗಳ ಕುರಿತು ಅರಿವು ಮೂಡಿಸಿ, ಅತ್ತಾಗ ಕಣ್ಣೋರೆಸಿ, ಹಲವು ಬಾರಿ ನಮ್ಮ ನಗುವಿಗೆ ಕಾರಣವಾಗಿ, ನಿರರ್ಗಳವಾಗಿ ಮಾತನಾಡುವ ಕಲೆಯ ಕಾರಣಿಕರ್ತರಾಗಿ, ನಮ್ಮೆಲ್ಲಾ ಆಸೆ ಕನಸಿಗೆ ಮಾರ್ಗದರ್ಶಕರಾಗಿ ನಿಂತ ನನ್ನೆಲ್ಲಾ ನಲ್ಮೆಯ ಗುರುಗಳಿಗೆ ಪ್ರೀತಿಯ ನಮನ ಸಲ್ಲಿಸಲೇಬೇಕು.

ಶಿಕ್ಷಕರೇ ಸ್ಫೂರ್ತಿ, ಶಿಕ್ಷಕರೇ ದಾರಿ. ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ತಂದಿರುವ ನನ್ನೆಲ್ಲಾ ಗುರುಗಳಿಗೆ ನನ್ನ ಹೃದಯಂತರಾಳದ ಧನ್ಯವಾದಗಳು. ಎಲ್ಲರಿಗೂ ಶಿಕ್ಷಕರ ದಿನದ  ಶುಭಾಶಯಗಳು.

 -ಸುಪ್ರೀತಾ ಶೆಟ್ಟಿ ಬಡಾಕೆರೆ

Advertisement

Udayavani is now on Telegram. Click here to join our channel and stay updated with the latest news.

Next