ಹುಟ್ಟು, ಬದುಕು, ಸಾವು ಈ ಮೂರರಲ್ಲೂ ಹಾಸು ಹೊಕ್ಕಾಗಿದ್ದ ಕೌದಿ ಇತ್ತೀಚಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಆಧುನಿಕತೆಯ ಭರಾಟೆಗೆ ಸಿಕ್ಕು ಹೇಳ ಹೆಸರಿಲ್ಲದಂತಾಗಿದೆ. ಹಳ್ಳಿಗರ ಅಸ್ಮಿತೆಯಾಗಿದ್ದ ಕೌದಿ ಒಂದು ಸಮುದಾಯದ ಜನರ ಹೊಟ್ಟೆ ಹೊರೆದುಕೊಳ್ಳುವ ಕಾಯಕವೆನ್ನಿಸಿತ್ತು. ಸೃಜನಶೀಲ ಕಲೆಯಾಗಿದ್ದ ಕೌದಿ ಹೊಲಿಯುವ ವೃತ್ತಿಯ ಒಳ-ಹೊರಗುಗಳನ್ನು ಬಿಚ್ಚಿಡುತ್ತ ಪ್ರೇಕ್ಷಕರೊಂದಿಗೆ ಮುಖಾಮುಖೀಯಾಗುವ ಏಕವ್ಯಕ್ತಿ ಪ್ರದರ್ಶನವೇ “ಕೌದಿ’.
ಹಾಸಿ ಹೊದ್ದುಕೊಂಡ ಕೌದಿಯಿಂದ ವಯೋ ವೃದ್ಧೆಯೊಬ್ಬಳು ಏಳುವುದರ ಮೂಲಕ ಆರಂಭವಾಗುವ ಕೌದಿಯ ಪ್ರದರ್ಶನವು ತನ್ನ ಇತಿಹಾಸವನ್ನು ಬಿಚ್ಚಿಡುತ್ತ ಹೋಗುತ್ತದೆ. ಹಿಂದೆ”ಕೌದಿ’ ಹೊಲಸತೀರೇನವ್ವಾ ಕೌದಿ” ಎನ್ನುತ್ತ ಊರು ಸುತ್ತುವವರ ಕೂಗು ಬೆಳಗಾಗುತ್ತಿದ್ದಂತೆಯೇ ಕೇಳಿ ಬರುತ್ತಿತ್ತು. ಮನೆಯ ಜಗಲಿಯ ಮೇಲೋ, ಮರದ ನೆರಳಿನಲ್ಲಿಯೋ ಕೌದಿ ಹೊಲೆಯುವವರು ಕಂಡು ಬರುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಅವರ ಕೂಗು ಕೇವಲ ಕೂಗಾಗಿಯೇ ಉಳಿಯುತ್ತದೆ. ಬಗೆ ಬಗೆಯ ರಜಾಯಿಗಳು ಬಂದಾದ ಮೇಲೆ ಕೌದಿಯ ಬಳಕೆಯೇ ನಿಂತು ಹೋಗಿದೆ. ಇದನ್ನೇ ನಂಬಿ ಬದುಕು ನಡೆಸುವ ಹೊಟ್ಟೆಗಳ ಮೇಲೆ ಹೊಡೆದಂತಾಗಿದೆ.
ಉಟ್ಟು ತೊಟ್ಟು ಹಳತಾದ ಅರಿವೆಗಳನ್ನು ಹಿಂದೆ ಜತನದಿಂದ ಕೂಡಿಡುತ್ತಿದ್ದರು. ಕೌದಿ ಹೊಲಿಯುವವರು ಮನೆಯ ಮುಂದೆ ಬಂದಾಗ ಅವರ ಮುಂದೆ ಸುರಿದು ತಮ್ಮ ಕನಸಿನ ಕೌದಿಯ ರೂಪುರೇಷೆ ಹೇಗಿರಬೇಕೆಂದು ಹೇಳುತ್ತಿದ್ದರು. ದೊಡ್ಡವರಿಗಾಗಿ ಒಂದು ಕೌದಿಯನ್ನು ಹೊಲೆದು ಅದರಲ್ಲಿ ಅಳಿದುಳಿದ ಬಟ್ಟೆಯಲ್ಲಿ ಒಂದು ಪುಟ್ಟ ಕೌದಿ ತಯಾರಾಗುತ್ತಿತ್ತು. ಅಳತೆಗೆ ಅನುಸಾರವಾಗಿ ಮೂರು ದಿನಕ್ಕೊಂದೋ ಆರು ದಿನಕ್ಕೊಂದು ಕೌದಿ ತಯಾರಾಗುತ್ತಿತ್ತು. ಕೆಲವೊಮ್ಮೆ ಬೆಳಗಿನಿಂದ ಸಂಜೆಯವರೆಗೂ ಮನೆಯ ಜಗುಲಿಯ ಮೇಲೆ ಕುಳಿತು ಮನೆಯೊಡತಿ ಕೊಟ್ಟ ಎರಡು ರೊಟ್ಟಿಗಳಿಂದ ಹೊಟ್ಟೆ ತುಂಬಿಸಿಕೊಂಡು ಆಕೆಯ ಕನಸಿನ ಕೌದಿಯನ್ನು ಹೊಲೆದು ಕೊಡುತ್ತಿದ್ದುದೂ ಉಂಟು. “ನಾವು ಹೊಲೆದು ಕೊಡುತ್ತಿದ್ದ ಕೌದಿಗೆ ಮಾತ್ರ ಅವರ ಮನೆಯಲ್ಲಿ ಪ್ರವೇಶವಿತ್ತು. ಆದರೆ ಕೌದಿ ಹೊಲೆಯುವವರಿಗಿರಲಿಲ್ಲ’ ಎಂಬ ಸ್ವಗತ ಪ್ರೇಕ್ಷಕರನ್ನು ಸೂಜಿಯಂತೆ ಚುಚ್ಚುತ್ತದೆ. ಗೇಣಿಗೆ ಇಷ್ಟು ಎಂಬ ಲೆಕ್ಕದಂತೆ ಹೊಲೆದು ಕೊಡುತ್ತಿದ್ದ ಕೌದಿಗೆ ದಕ್ಕುವ ಪುಡಿಗಾಸಿನಲ್ಲಿಯೇ ಸಂಸಾರದ ನೊಗ ಎಳೆಯುವ ಅನಿವಾರ್ಯತೆ ಆ ಮಹಿಳೆಯರಿಗಿತ್ತು.
ಮರೆಯಾಗಿ ಹೋದ ಹಿರಿಯರ, ಮಕ್ಕಳ ಹಳೆಯ ಬಟ್ಟೆಗಳನ್ನು ಬಳಸಿ ಚಿತ್ತಾರಗೊಂಡ ಚಂದದ ಕೌದಿಯನ್ನು ಹೊದ್ದು ಮಲಗಿದರೆ ಹಿರಿಯರು ಸದಾ ತಮ್ಮೊಡನೆ ಇರುವಂತಹ ಭಾವ. ಬೇಸಗೆಗೆ ತಂಪಾಗಿ, ಮಳೆಗಾಲ, ಚಳಿಗಾಲಗಳಲ್ಲಿ ಬೆಚ್ಚನೆಯ ಅನುಭವವನ್ನು ನೀಡುವ ಕೌದಿಯ ಮುಂದೆ ಇಂದಿನ ರಜಾಯಿಗಳನ್ನು ನಿವಾಳಿಸಿ ಒಗೆಯಬೇಕು.
ಎರಡು ತಲೆಮಾರುಗಳು ಸರಿದರೂ ಮುಕ್ಕಾಗದೇ ಉಳಿಯುವ ಕೌದಿಯ ಗುಣಗಾನ ಪ್ರದರ್ಶನದುದ್ದಕ್ಕೂ ಮುಂದುವರಿಯುತ್ತದೆ. ಒಮ್ಮೆ ಕರುಣ ರಸ, ಮತ್ತೂಮ್ಮೆ ಹಾಸ್ಯಕ್ಕೆ ಭಾವವನ್ನು ಬದಲಿಸುತ್ತ ನಟಿ ಭಾಗ್ಯಶ್ರೀ ಪಾಳಾ ಅವರು ಪ್ರೇಕ್ಷಕರ ಗಮನ ಬೇರೆಡೆ ಹರಿಯದಂತೆ ಅಭಿನಯಿಸಿದರು. ಪತ್ರಕರ್ತರೂ ಹಾಗೂ ಲೇಖಕರೂ ಆದ ಗಣೇಶ ಅಮೀನಗಡ ಅವರು ಕೌದಿಯ ಕುರಿತಾದ ತಮ್ಮ ಪ್ರಬಂಧಕ್ಕೆ ನಾಟಕದ ರೂಪವನ್ನು ಕೊಟ್ಟಿದ್ದಾರೆ.
ಜಗದೀಶ್ ಆರ್. ಜಾಣಿ ಅವರ ಪ್ರಬುದ್ಧ ನಿರ್ದೇಶನ ಹಾಗೂ ಸಿದ್ಧಾರ್ಥ ಕಟ್ಟಿàಮನಿ ಅವರ ಬೆಳಕು-ಸಂಗೀತ ಈ ಪ್ರದರ್ಶನದ ಯಶಸ್ಸಿಗೆ ಕಾರಣವಾದವು. ಸರಳ, ಸುಂದರ ರಂಗಪರಿಕರಗಳ ಉಪಯೋಗ ಗಮನ ಸೆಳೆಯುತ್ತದೆ. ಸತತ 31 ಪ್ರದರ್ಶನಗಳನ್ನು ಕಂಡಿರುವ ಕೌದಿ ತಂಡ ಇನ್ನೂ ಹಲವಾರು ಊರುಗಳಲ್ಲಿ ತಮ್ಮ ಮುಂದಿನ ಪ್ರದರ್ಶನಗಳನ್ನು ನೀಡಲಿದೆ.
ಗೌರಿ ಚಂದ್ರಕೇಸರಿ
ಶಿವಮೊಗ್ಗ