Advertisement
ಉಫ್ ಈ ಬೇಸಗೆ ನಿಜಕ್ಕೂ ನಮ್ಮೆಲ್ಲರನ್ನು ಸುಸ್ತಾಗಿಸಿಬಿಟ್ಟಿದೆ. ಬಿಸಿಲಿನಿಂದ ರಕ್ಷಣೆಗೆ ಹಿಡಿದಿರುವ ಛತ್ರಿ ಕಾದ ಹಪ್ಪಳದಂತಾಗುತ್ತಿದೆ. ಕುಡಿದ ನೀರು ಅರೆಕ್ಷಣದಲ್ಲಿ ಜೀರ್ಣವಾಗುತ್ತಿದೆ. ಅದರ ನಡುವೆ “ಫ್ರಿಡ್ಜ್ ನ ತಂಪು ನೀರು ಸೇವಿಸಲೇಬೇಡಿ’ ಎಂದು ಬಿತ್ತರವಾಗುತ್ತಿರುವ ಒಂದಷ್ಟು ಸುಳ್ಳು ಸುದ್ದಿಗಳು. ಅಂತೂ ಬೇಸಗೆಯಲ್ಲಿ ಜನರನ್ನು ಕುಳಿತಲ್ಲಿ ತಲೆದೂಗಲು ಬಿಡುತ್ತಿಲ್ಲ.
Related Articles
Advertisement
ಹಾಸ್ಟೆಲಿನ ದಿವ್ಯಾಹ್ನ ಛತ್ರದಲ್ಲಿ ಬೆಳಗಿನ ಉಪಾಹಾರವನ್ನು ಮುಗಿಸಿ ಹೊಟ್ಟೆಯನ್ನು ತಣ್ಣಗಿರಿಸಿ, ಕೈಗಳನ್ನು- ತಟ್ಟೆಯನ್ನು ತೊಳೆದು ಎಲ್ಲರಂತೆ ಅವಳಿಗೂ ತನ್ನ ಕೆಲಸದತ್ತ ಮೋರೆ ಹಾಕಬಹುದಿತ್ತು. ಆದರೆ ಅವಳು ಎಲ್ಲರಂತೆ ಖಂಡಿತ ಅಲ್ಲ; ತಾನು ಉಂಡ ಆಹಾರದ ತಟ್ಟೆಯನ್ನು ಶುಭ್ರವಾಗಿ ತೊಳೆದು, ಆ ತಟ್ಟೆ ಪೂರ್ತಿ ಶುಭ್ರವಾದ ನೀರು ತುಂಬಿ ಉದ್ಯಾನವನದ ಮೂಲೆಯತ್ತ ಸಾಗುತ್ತಿದ್ದಾಳೆ.
ಅವಳು ಮುಂದೆ ನಿಧಾನವಾಗಿ ಸಾಗುತ್ತಿದ್ದಾಳೆ. ಆ ನೀರನ್ನು ಅವಳು ಎಲ್ಲಿಗೆ ಹಾಕಬಹುದು ಎಂದು ನಾನು ವೀಕ್ಷಿಸುತ್ತಲೇ ಇದ್ದೆ. ಅದು ಅವಳು ನೆಟ್ಟ ಗಿಡಗಳಿಗಾಗಿದ್ದಿರಬಹುದೇ ಇಲ್ಲ. ಧೂಳಿನಿಂದ ಲೇಪನವಾಗಿದ್ದ ಅವಳ ಚಪ್ಪಲಿಯನ್ನು ತೊಳೆಯಲು ಆಗಿದ್ದಿರಬಹುದೇ? ಅಥವಾ ಯಾವುದೋ ಗೋಡೆಗೆ ತಾಗಿದ ಮಣ್ಣು ಒರೆಸಲು ಆಗಿದ್ದಿರಬಹುದೇ ? ಅಥವಾ ತನ್ನ ಗೆಳತಿಗೆ ನೀರೆರೆಚಲು ಆಗಿದ್ದಿರಬಹುದೇ !
ನೇರವಾಗಿ ಉದ್ಯಾನವನದ ಮೂಲೆಗೆ ಧಾವಂತದಿಂದ ಧಾವಿಸಿದ ಅವಳು ತೆಂಗಿನ ಗೆರಟೆಯನ್ನು ಕೈಗೆತ್ತಿಕೊಂಡಳು. ಗೆರಟೆಯ ಕಸ ಕಡ್ಡಿ ಹೊರತೆಗೆದು ನಿಧಾನವಾಗಿ ತಟ್ಟೆಯ ಬಸುರಿನಿಂದ ಆ ಗೆರಟೆಗೆ ನೀರು ಸುರಿಸುತ್ತಿದ್ದಾಳೆ. ತಟ್ಟೆಯಿಂದ ಗೆರಟೆಗೆ ತರ್ಜುಮೆಗೊಳ್ಳುತ್ತಿರುವ ನೀರಿನ ಸದ್ದಿಗೆ, ಇನಿತು ದೂರದಲ್ಲಿದ್ದ ಎರಡು ಬೀದಿ ನಾಯಿಗಳು ಕಿವಿಯನ್ನು ಕಂಪಿಸುತ್ತಿವೆ. ಮೂಗು ಆಘ್ರಾಣಿಸುತ್ತಿದೆ. ಪಿಳಿ ಪಿಳಿ ಕಣ್ಣು ಅದೇ ಹೆಣ್ಣು ಮಗಳನ್ನು ದಿಟ್ಟಿಸಿ ಪ್ರೀತಿಯಿಂದ ನೋಡುತ್ತಿದೆ. ಮೆತ್ತಗೆ ಅವಳು ಹಿಂದಡಿ ಇಟ್ಟಳು.
ಒಮ್ಮೆ ಸುತ್ತಲೂ ತಿರುಗಿದಳು. ಬಹುಶಃ ಪಕ್ಷಿಗಳಿವೆಯೇ ಎಂದು ಆ ಜೀವ ಹುಡುಕಾಡಿತ್ತೇನೋ ? ಮೆತ್ತಗೆ ಹಿಂದಡಿ ಇಟ್ಟಳು. ಅವಳ ನಿತ್ಯದ ಕಾಯಕಗಳತ್ತ ಚಿತ್ತ ಹರಿಸುವ ಸಲುವಾಗಿ ಏನೋ. ದೂರದಿಂದಲೇ ಇಣುಕುತ್ತಿದ್ದ ನಾಯಿಗಳೆರಡು ನಾಲಿಗೆಯನ್ನು ಹೊರಚಾಚಿ ಸುಸ್ತಾದ ಮತಿಯಿಂದಲೇ ಗೆರಟೆಯ ಪಕ್ಕ ಬಂದಿದೆ. ಒಂದಾದ ಅನಂತರ ಮತ್ತೂಂದು ಎಂಬಂತೆ ಎರಡು ನಾಯಿ ಮರಿಗಳೂ ನೀರನ್ನು ಕುಡಿದು, ಲಟ ಲಟನೆ ಮೈಯನ್ನು ಅಲುಗಿಸಿ ನೀಳವಾಗಿ ನನ್ನತ್ತ ದೃಷ್ಟಿ ಹಾಯಿಸಿ ನಮಸ್ಕಾರ ಹಾಕಿತು.
ಎರಡೇ ಹೆಜ್ಜೆಯಲ್ಲಿ ಪಕ್ಕದ ಮರದ ಬುಡದಲ್ಲಿ ದೊಪ್ಪನೆ ಮಲಗಿಕೊಂಡಿತು. ಖಂಡಿತ ತೃಷೆ ನೀಗಿಸಿಕೊಂಡ ಆ ಶ್ವಾನಗಳೆರಡೂ ಅವಳನ್ನು ನೆನಪು ಮಾಡಿಕೊಳ್ಳುತ್ತಲೇ ನಿಧಾನವಾಗಿ ನಿದ್ರೆಗೆ ಜಾರಿದೆ. ಖಾಲಿಯಾದ ಗೆರಟೆ ಮತ್ತೆ ಯಾರಾದರೂ ನೀರು ಹಾಕಿಯಾರೇ ಎಂದು ಮರ್ಮರಿಸುತ್ತಿರಬಹುದು. ಹೌದು ಆ ಕಿಟಕಿಯ ಕಡೆ ಹೋದಾಗಲೆಲ್ಲಾ ಮೂಕ ಜೀವಿಗಳ ರೋಧನ ಎರಡನೇ ಮಹಡಿಯಿಂದಲೇ ನಿಂತಿರುವ ನನ್ನನ್ನು ಬಡಿಯುತ್ತಿದೆ. ಆದರೂ ಅವಳು ಎಲ್ಲರಂತಲ್ಲ. ಪರಿಸರದ ಸೂಕ್ಷ್ಮತೆಯನ್ನು ಅರಿತಿರುವ ಅವಳು ಮೂಕ ಜೀವಿಗೆ ಜೀವವಾಗಲು ಮುಂದಾಗಿದ್ದಾಳೆ. ಹೌದು ಅವಳು ನಮಗೆ ಮಾದರಿಯಾಗಿದ್ದಾಳೆ; ಇನ್ನೇನಿದ್ದರೂ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಬಿಸಿಲಿನ ಬಗೆಗೆ ತೃಷೆ ನೀಗಿಸಲು ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿ ಸಂಕುಲಗಳಿಗೆ ನಾವು ನೆರವಾಗಬೇಕಿದೆ.
-ಸಮ್ಯಕ್ತ್ ಜೈನ್ ಕಡಬ
ಎಸ್.ಡಿ.ಎಂ. ಕಾಲೇಜು, ಉಜಿರೆ